ಬೆಂಗಳೂರು: ‘ನೀನು ನನ್ನ ಮುಂದೆ ನೃತ್ಯ ಮಾಡಬೇಕು’ ಅತ್ಯಾಚಾರ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರೇಮಲತಾ ದಿವಾಕರ್‌ಗೆ ಮಾಡಿದ ಆದೇಶ ಇದು. ಸ್ವಾಮೀಜಿ ವಿರುದ್ಧ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಪ್ರಸಂಗವನ್ನು ವರ್ಣಿಸಲಾಗಿದೆ. ಆರೋಪ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
2011ರ ಜುಲೈ ತಿಂಗಳಿನಿಂದ ಗೋಕರ್ಣದ ಅಶೋಕೆಯಲ್ಲಿ ನಡೆದ ಚಾತುರ್ಮಾಸದಿಂದ ಈ ಕತೆ ಆರಂಭವಾಗುತ್ತದೆ. ಅಂದಿನಿಂದ 2014ರ ಜೂನ್ ತಿಂಗಳಿನವರೆಗೆ ಏನೇನಾಯಿತು ಮತ್ತು ರಾಮನ ಹೆಸರಿನಲ್ಲಿ ಹೇಗೆ ತನ್ನನ್ನು ಸಮ್ಮೋಹನಗೊಳಿಸಲಾಯಿತು ಎನ್ನುವುದನ್ನು ಪ್ರೇಮಲತಾ ಇ–ಮೇಲ್ ಮೂಲಕ ತನ್ನ ಭಾವನಿಗೆ ತಿಳಿಸಿದ್ದಾರೆ. ಈ ಎಲ್ಲ ಇ–ಮೇಲ್ ಪ್ರತಿಗಳನ್ನು ಆರೋಪಪಟ್ಟಿಯ ಜೊತೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
‘ಅಶೋಕೆಯಲ್ಲಿ ಚಾತುರ್ಮಾಸ ನಡೆಯುತ್ತಿದ್ದ ಸಂದರ್ಭದಲ್ಲಿ ರಾಮಕತೆಯೂ ನಡೆಯಿತು. ರಾಮಕತೆಯ ಕೊನೆಯ ದಿನ ಎಲ್ಲ ಕಲಾವಿದರೂ ವಿಶೇಷ ಉಡುಪು ಮತ್ತು ಅಲಂಕಾರದಿಂದ ಬರಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಪ್ರೇಮಲತಾ ಅಂದು ಉತ್ತರ ಭಾರತ ಶೈಲಿಯ ಸೀರೆ ಧರಿಸಿದ್ದರು.
ರಾಮಕತೆಯ ನಂತರ ವೇದಿಕೆಯಿಂದ ಕ್ಯಾಂಪ್‌ವರೆಗೆ ರಾಮನ ಮೆರವಣಿಗೆ. ನೃತ್ಯದ ಮೂಲಕ ಎಲ್ಲ ಕಲಾವಿದರು, ಸಭಾಸದರು ಸಾಗಿದ್ದರು. ಆಗ ಜನರ ನೂಕುನುಗ್ಗಲಿನಲ್ಲಿ ಹಿಂದೆ ಎಲ್ಲೋ ಇದ್ದ ಪ್ರೇಮಲತಾ ಅವರನ್ನು ಕರೆಸಿದ ಸ್ವಾಮೀಜಿ ತನ್ನ ಮುಂದೆಯೇ ನೃತ್ಯ ಮಾಡುವಂತೆ ಆದೇಶಿಸಿದ್ದರು.
‘ಕಾರ್ಯಕ್ರಮವೆಲ್ಲಾ ಮುಗಿದ ನಂತರ ಸ್ವಾಮೀಜಿ ಅವರು ಎಲ್ಲ ಕಲಾವಿದರನ್ನೂ ಭೇಟಿ ಮಾಡುತ್ತಾರೆ ಎಂದು ಸೂಚಿಸಿದ್ದರಿಂದ ಎಲ್ಲರೂ ಒಂದು ಕೋಣೆಯಲ್ಲಿ ಕಾಯುತ್ತಿದ್ದರು. ಆಗ ಸ್ವಾಮೀಜಿ ಪರಿವಾರದ ವ್ಯಕ್ತಿ ಮಧ್ಯಸ್ಥ ಎಂಬುವರು ಬಂದು ಪ್ರೇಮಲತಾ ಅವರಿಗೆ ‘ಸಂಸ್ಥಾನ ನಿಮ್ಮ ಬಳಿ ಮಾತನಾಡಬೇಕಂತೆ’ ಎಂದು ತಿಳಿಸಿ ಪಕ್ಕದಲ್ಲಿಯೇ ಇದ್ದ ಇನ್ನೊಂದು ಕೊಠಡಿಗೆ ಹೋಗುವಂತೆ ಸೂಚಿಸಿದರು. ಪ್ರೇಮಲತಾ ಕೊಠಡಿಗೆ ಹೋದ ತಕ್ಷಣ ಮಧ್ಯಸ್ಥ ಕೊಠಡಿಯ ಎರಡೂ ಕಿಟಕಿಗಳನ್ನು ಮುಚ್ಚಿದರು.
ಆಗ ಕೊಠಡಿಯ ಒಳಕ್ಕೆ ಬಂದ ಸ್ವಾಮೀಜಿ ‘ನಿನ್ನಲ್ಲಿ ಅಪೂರ್ವ ಪ್ರತಿಭೆ ಇದೆ. ವಿಶೇಷ ಶಕ್ತಿ ಇದೆ. ಬಹಳ ಭಕ್ತಿಯಿಂದ ರಾಮನನ್ನು ಹಾಡಿ ಸಂತೋಷ ಗೊಳಿಸಿದ್ದೀಯ. ನೀನು ದಿವ್ಯಳು. ನಿನ್ನ ಗಾಯನದಿಂದ ಈಚಿನ ದಿನಗಳಲ್ಲಿ ನಿನ್ನನ್ನು ನಾವು ಬಹಳ ಹಚ್ಚಿಕೊಳ್ಳುತ್ತಿದ್ದೇವೆ.
ನಿನ್ನಲ್ಲಿ ನಾವು ನೋಡದೇ ಇರುವ ಸುಮಾರು ವಿಷಯಗಳಿವೆ ಎಂಬುದು ಇಂದು ನಮಗೆ ಅರಿವಾಗಿದೆ. ನಮಗೆ ಈ ದಿನಗಳಲ್ಲಿ ಬಹು ವಿಶೇಷವಾದ ಅತ್ಯದ್ಭುತವಾದ ಅನುಭೂತಿಯಾಗಿದೆ. ಯಾವ ಸಂತರಿಗೂ ಆಗದ ದಿವ್ಯ ಅನುಭೂತಿ ಅದು’ ಎಂದು ಹೇಳಿದರು’ ಎಂದು ಪ್ರೇಮಲತಾ ಭಾವನಿಗೆ ಬರೆದ ಇ–ಮೇಲ್ ಸಂದೇಶದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದ ಯಶಸ್ಸಿನ ಸಂತೋಷದಲ್ಲಿಯೇ ಇದ್ದ ತನಗೆ ‘ಸ್ವಾಮೀಜಿಯ ಈ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸ ಬೇಕು ಎಂದೇ ತಿಳಿಯಲಿಲ್ಲ’ ಎಂದೂ ಅವರು ಮೇಲ್ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.
ನಂತರ ಬೆಂಗಳೂರಿಗೆ ಬಂದ ಪ್ರೇಮಲತಾ, ಸ್ವಾಮೀಜಿಗೆ ಇ–ಮೇಲ್ ಸಂದೇಶ ಕಳುಹಿಸಿ ಕಾರ್ಯಕ್ರಮದ ಕೊನೆಯ ದಿನ ವೇದಿಕೆಯ ಮೇಲೆ ಹಳದಿ ಬಣ್ಣದ ಬೆಳಕಿನಲ್ಲಿದ್ದ ರಾಮನ ಮೂರ್ತಿ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಸ್ವಾಮೀಜಿ ‘ಇದರಲ್ಲೊಂದು ವಿಶೇಷವಿದೆ. ನೀನು ವೇದಿಕೆಗೆ ಹೋದ ಸಮಯದಲ್ಲಿ ರಾಮನ ಮೂರ್ತಿ ಅಲ್ಲಿರಲಿಲ್ಲ. ಅದು ನಮ್ಮ ಬಳಿಯೇ ಇತ್ತು’ ಎಂದು ಉತ್ತರಿಸಿದರು.
ಆಗ ಗೊಂದಲಕ್ಕೆ ಬಿದ್ದ ಪ್ರೇಮಲತಾ ಮೆರವಣಿಗೆಯ ನಂತರ ರಾಮನಮೂರ್ತಿಯನ್ನು ಹೊತ್ತು ತಂದಿದ್ದನ್ನು ನೆನಪಿಸಿದರು. ಅದನ್ನು ಒಪ್ಪದ ಸ್ವಾಮೀಜಿ ‘ಇಲ್ಲ ಅದು ಹಾಗಲ್ಲ. ನೀನು ಹಾಗೆಲ್ಲಾ ಹೇಳಬಾರದು. ನಮಗೆ ಅದು ಏನೆಂಬುದರ ಬಗ್ಗೆ ಸ್ಪಷ್ಟತೆ ಇದೆ. ಅದು ನೀನು ನಿರ್ಲಕ್ಷಿಸುವ ವಿಷಯ ಅಲ್ಲ. ನಿ
ನಗೆ ಏನಾಗಿದೆ ಎಂಬುದರ ಅರಿವು ನಿನಗೆ ಇಲ್ಲ. ಅದು ನಿನ್ನ ತಪ್ಪಲ್ಲ. ಆದರೆ ನಾವು ಹೇಳುತ್ತಿದ್ದೇವೆ. ಕೇಳು. ಅದು ನಿನಗಾಗಿರುವ ರಾಮ ಸಾಕ್ಷಾತ್ಕಾರ. ನೀನು ದಿವ್ಯಳಾಗಿರುವುದಕ್ಕೆ ನಿನ್ನ ಭಾವದ ಕಣ್ಣಿಗೆ ಆದ ರಾಮನ ಸಾಕ್ಷಾತ್ಕಾರ’ ಎಂದು ಇ–ಮೇಲ್ ಸಂದೇಶ ಕಳುಹಿಸಿದರು.
ಅಲ್ಲದೆ ‘ಈ ಶ್ರೇಷ್ಠ ವಿಚಾರವು ಎಷ್ಟು ಮಾತ್ರಕ್ಕೂ ನಾಲ್ಕು ಕಿವಿಗಳನ್ನು ದಾಟಿ ಹೋಗುವಂತೆಯೇ ಇಲ್ಲ. ಇದನ್ನು ಯಾರ ಬಳಿಯೂ ಯಾವ ಕಾರಣಕ್ಕೂ ಹೇಳಬಾರದು’ ಎಂದು ಸ್ವಾಮೀಜಿ ಕಟ್ಟುನಿಟ್ಟಿನ ಆಜ್ಞೆ ಮಾಡಿದರು.
***
2011ರ ಅಕ್ಟೋಬರ್ 1ರಿಂದ 8ರವರೆಗೆ ಜೋಧ್‌ಪುರದಲ್ಲಿ ರಾಮಕತೆ ಕಾರ್ಯಕ್ರಮ ಇತ್ತು. ಈ ಬಗ್ಗೆ ಕಲಾವಿದರೊಂದಿಗೆ ಚರ್ಚೆ ಮಾಡಲು ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದರು. ಕಲಾವಿದರ ಸಭೆ ಮುಗಿದ ನಂತರ ಸ್ವಾಮೀಜಿ ಪ್ರೇಮಲತಾ ಅವರಿಗೆ ‘ಎರಡು ನಿಮಿಷ ಇರು. ಸ್ವಲ್ಪ ಮಾತನಾಡುವುದಿದೆ ನಿನ್ನ ಬಳಿ’ ಎಂದು ಕೊಠಡಿಯಲ್ಲಿ ಅವರೊಬ್ಬರನ್ನೇ ಉಳಿಸಿಕೊಂಡರು. ಮತ್ತೆ ಪ್ರೇಮಲತಾ ಅವರ ಗಾಯನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
‘ನಿನ್ನ ಭಾವದ ಮಟ್ಟ ತುಂಬಾ ಎತ್ತರದ್ದು. ತುಂಬಾ ಅನುಭವಿಸಿ ಹಾಡುತ್ತೀಯ. ನಿಶ್ಚಯವಾಗಿಯೂ ನಿನ್ನ ಮೇಲೆ ರಾಮನ ವಿಶೇಷ ಒಲುಮೆಯಾಗಿದೆ. ಮುಂದೆ ಇನ್ನೂ ಹೆಚ್ಚಿನ ಒಲುಮೆಯಾಗಲಿದೆ. ನಮಗೆ ನೀನು ಬೇಕು. ನೀನು ಸಂಪೂರ್ಣವಾಗಿಬೇಕು’ ಎಂದು ಹೇಳಿದ್ದರು ಎಂದು ಪ್ರೇಮಲತಾ ಇ–ಮೇಲ್ ಸಂದೇಶದಲ್ಲಿ ಹೇಳಿದ್ದಾರೆ.
(ಮುಂದುವರಿಯುವುದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.