ADVERTISEMENT

ತಪ್ಪು ಮಾಹಿತಿ ನೀಡಿದ ವೆಬ್‌ಸೈಟ್‌ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:25 IST
Last Updated 22 ಮೇ 2015, 20:25 IST

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಿದ ಖಾಸಗಿ ವೆಬ್‌ಸೈಟ್‌ (www.resultout.com) ವಿರುದ್ಧ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಅಡಿ ಪೊಲೀಸರು ವೆಬ್‌ಸೈಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಈ ವೆಬ್‌ಸೈಟ್‌ ‘ಎಚ್‌ಟಿ ಮೀಡಿಯಾ’ ಸಂಸ್ಥೆಗೆ ಸೇರಿದೆ. ಇಲಾಖೆ ಕೊಟ್ಟ ವಿಷಯದ ಕೋಡ್‌ ಅನ್ನು ವೆಬ್‌ ಸೈಟ್‌ ತಪ್ಪಾಗಿ ನಮೂದಿಸಿದ್ದರಿಂದ ಫಲಿತಾಂಶದಲ್ಲಿ ತಪ್ಪಾಗಿದೆ  ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡರು.

‘ಗೊಂದಲಕ್ಕೆ ಕಾರಣ ಏನು ಎಂಬ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು.  ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಲಾಗಿದೆ. ಇಲಾಖೆಯ ತಪ್ಪಿನಿಂದ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗಿದ್ದರೂ, ಆ ವಿದ್ಯಾರ್ಥಿಯನ್ನು ರಕ್ಷಿಸುವ ಕೆಲಸ ಮಾಡುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

ತಪ್ಪಾಗಿ ಪ್ರಕಟವಾದ ಪ್ರಶ್ನೆಗೆ ಉತ್ತರ ಬರೆಯಲು ಯತ್ನಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗುವುದು. ಕಲಿಕೆಯಲ್ಲಿ ತುಸು ಹಿಂದಿರುವ ವಿದ್ಯಾರ್ಥಿಯೊಬ್ಬ ತನ್ನ ನೋಂದಣಿ ಸಂಖ್ಯೆ ಬದಲು ಬುದ್ಧಿವಂತ ವಿದ್ಯಾರ್ಥಿಯೊಬ್ಬನ ನೋಂದಣಿ ಸಂಖ್ಯೆಯನ್ನು ಉತ್ತರ ಪತ್ರಿಕೆಯಲ್ಲಿ ಬರೆದಿರುವ ನಿದರ್ಶನ ಇದೆ. ಹೀಗೆ ತಪ್ಪಾಗಿ ಸಂಖ್ಯೆ ನಮೂದಿಸಿದವರ ಫಲಿತಾಂಶ ತಡೆಹಿಡಿಯಲಾಗಿದೆ ಎಂದರು.

ಪಿಸಿಬಿ ಸಮಸ್ಯೆ: ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳಲ್ಲಿ ಪಠ್ಯ ಮತ್ತು ಪ್ರಾಯೋಗಿಕಕ್ಕೆ ಕ್ರಮವಾಗಿ 70 ಮತ್ತು 30 ಅಂಕ ನಿಗದಿ ಮಾಡಲಾಗಿದೆ. ಪ್ರಾಯೋಗಿಕ ವಿಭಾಗದಲ್ಲಿ 30 ಅಂಕ ಪಡೆದೂ, ಪಠ್ಯ ವಿಷಯದಲ್ಲಿ ಕನಿಷ್ಠ 21 ಅಂಕ ಪಡೆಯಲು ವಿಫಲನಾದ ವಿದ್ಯಾರ್ಥಿ ವಿಷಯದಲ್ಲಿ ಅನುತ್ತೀರ್ಣನಾಗುತ್ತಾನೆ. ಇಂಥ ವಿಷಯಗಳನ್ನು ಇಲಾಖೆ ಅಧಿಕಾರಿಗಳು ಪೋಷಕರಿಗೆ ವಿವರಿಸಬೇಕಿತ್ತು ಎಂದರು.
*
ಆಗಿರುವ ಗೊಂದಲಗಳಿಗೆ ನಾನು ಪೋಷಕರ ಮತ್ತು ವಿದ್ಯಾರ್ಥಿಗಳ ಕ್ಷಮೆ ಕೇಳುತ್ತೇನೆ. ಮಕ್ಕಳು ಅಂಕಗಳನ್ನು ಪಡೆಯಲು ಹಾಕಿರುವ ಶ್ರಮ ಹಾಳಾಗಲು ಬಿಡುವುದಿಲ್ಲ.
- ಕಿಮ್ಮನೆ ರತ್ನಾಕರ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.