ಬೆಂಗಳೂರು: ಭಾಷಾ ಮಾಧ್ಯಮ ನೀತಿ ವಿಷಯದಲ್ಲಿ ಕಾನೂನು ಹೋರಾಟದ ಎಲ್ಲ ಹಂತಗಳಲ್ಲೂ ಒಂದು ವೇಳೆ ಹಿನ್ನಡೆಯಾದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕ ಭಾಷಾ ನೀತಿಯೊಂದನ್ನು ಅಳವಡಿಸಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ.
ಕನ್ನಡ ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದ ಕಾನೂನು ಹೋರಾಟದ ಮುಂದಿನ ಹೆಜ್ಜೆ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಗುರುವಾರ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಜೊತೆ ಸಮಾಲೋಚನೆ ನಡೆಸಿದರು. ತಾತ್ಕಾಲಿಕ ಭಾಷಾ ನೀತಿ ಅಳವಡಿಕೆ ಅನಿವಾರ್ಯ ಎಂಬ ಇಂಗಿತವನ್ನು ಸಚಿವರು ಈ ಸಭೆಯಲ್ಲಿ ಹೊರಹಾಕಿದರು.
ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅವಕಾಶ ನೀಡಲೇಬೇಕಾಗಬಹುದು. ಆಗ ಅಂತಹ ಎಲ್ಲ ಶಾಲೆಗಳಲ್ಲಿ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯ ಮಾಡಿ ಹೊಸ ನೀತಿ ರೂಪಿಸಲಾಗುತ್ತದೆ ಎಂಬ ಅನಿಸಿಕೆಯನ್ನು ಸಚಿವರು ಸಭೆಯಲ್ಲಿ ಹಂಚಿಕೊಂಡರು ಎನ್ನಲಾಗಿದೆ.
ರಾಜ್ಯ ಸರ್ಕಾರದ ಪುನರ್ಪರಿಶೀಲನೆ ಅರ್ಜಿಯನ್ನು ‘ಸುಪ್ರೀಂ’ ಇತ್ತೀಚೆಗೆ ವಜಾಗೊಳಿಸಿದೆ. ಈ ತಿಂಗಳ ಅಂತ್ಯದೊಳಗೆ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ಹಿನ್ನಡೆಯಾದರೆ ತಾತ್ಕಾಲಿಕ ಭಾಷಾ ನೀತಿ ರೂಪಿಸುವುದು ಅನಿವಾರ್ಯ ಆಗುತ್ತದೆ. 2015ರ ಜೂನ್ ವೇಳೆಗೆ ಈ ಕುರಿತು ನಿರ್ಧಾರಕ್ಕೆ ಬರಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸದರ ಸಭೆ: ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಕಿಮ್ಮನೆ, ‘ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ಕಡ್ಡಾಯಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಖಾಸಗಿ ನಿರ್ಣಯ ಮಂಡಿಸುವಂತೆ ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಲಾಗುವುದು’ ಎಂದರು.
ಭಾಷಾ ಮಾಧ್ಯಮ ನೀತಿ ಅಳವಡಿಕೆ ವಿಷಯದಲ್ಲಿ ಇತರೆ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
30ಕ್ಕೂ ಹೆಚ್ಚು ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಪ್ರೊ. ಕೆ.ಎಸ್.ನಿಸಾರ್ ಅಹ್ಮದ್, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಜಿ.ಎಸ್.ಸಿದ್ದಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ವಕೀಲರಾದ ಹೇಮಲತಾ ಮಹಿಷಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಇ. ರಾಧಾಕೃಷ್ಣ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಕೆ.ಕೆ.ಸೀತಮ್ಮ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಅರ್ಜಿ ಸ್ವೀಕಾರ
‘ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳು ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿಸುವವರು ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಕೋರ್ಟ್ ಆದೇಶಕ್ಕೆ ಅನುಸಾರ ಸ್ವೀಕರಿಸಲಾಗುವುದು’ ಎಂದು ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ಮಾತೃಭಾಷೆ ಕಡ್ಡಾಯ
ನೆರೆಯ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಮಾದರಿಯಲ್ಲೇ ತಾತ್ಕಾಲಿಕ ಭಾಷಾ ನೀತಿ ರೂಪಿಸುವ ಯೋಚನೆ ಸರ್ಕಾರದ ಮುಂದಿದೆ. ಆ ರಾಜ್ಯಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯನ್ನು ಕಲಿಯುವುದು ಕಡ್ಡಾಯ.
– ಕಿಮ್ಮನೆ ರತ್ನಾಕರ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಇಂಗ್ಲಿಷ್ ಅನಿವಾರ್ಯ
ಇಂಗ್ಲಿಷ್ ಹೊರತಾಗಿ ನಾವು ಬದುಕಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮ ಮಾತೃಭಾಷೆಯನ್ನು ನಾವು ಗೌರವಿಸಬೇಕು. ಇದಕ್ಕಾಗಿ ಒಂದರಿಂದ ಐದನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುತ್ತೇನೆ.
– ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.