ಬಾಗಲಕೋಟೆ: ಇಂದು ನಾಡಿನೆಲ್ಲೆಡೆ ವಿಘ್ನ ನಿವಾರಕ ಗಣಪತಿಯನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಲಾಗುತ್ತಿದೆ. ಗಣಪತಿಯ ಪೂಜಾ ಸಮಯದಲ್ಲಿ ‘ವಾತಾಪಿ ಗಣಪತಿಂ ಭಜೆ..’ ಎಂಬ ಶ್ಲೋಕ ಅತ್ಯಂತ ಪ್ರಸಿದ್ಧಿ. ಹಾಗಾದರೆ ಈ ವಾತಾಪಿ ಗಣಪತಿ ಯಾರು, ಮೂಲ ನೆಲೆ ಯಾವುದು, ಈಗ ಎಲ್ಲಿ ನೆಲೆಸಿದ್ದಾನೆ? ಎಂಬ ಕುತೂಹಲ ಮೂಡುವುದು ಸಹಜ.
ವಾತಾಪಿ ಗಣಪತಿಯ ಮೂಲ ಬಾದಾಮಿ. ಆದರೆ, ಪ್ರಸ್ತುತ ಬಾದಾಮಿಯಲ್ಲಿ ವಾತಾಪಿ ಗಣಪತಿ ನೋಡಲು ಸಿಗುವುದಿಲ್ಲ. ಬಾದಾಮಿಯ ವಸ್ತುಸಂಗ್ರಹಾಲಯ (ಮ್ಯೂಜಿಯಂ) ಬಳಿ ಇರುವ ಶಿವಾಲಯವೇ ಅಂದು ‘ವಾತಾಪಿ ಗಣಪತಿ’ ನೆಲೆಸಿದ್ದ ಗುಡಿಯಾಗಿತ್ತು ಎಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಆದರೆ, ಬಾದಾಮಿಯಲ್ಲಿನ ವಾತಾಪಿ ಗಣಪತಿಯ ದೇವಾಲಯ ಈಗ ಭಗ್ನಗೊಂಡಿದ್ದು, ಬರಿದಾಗಿರುವ ಪಾಣಿಪೀಠ ಮಾತ್ರ ನೋಡಬಹುದಾಗಿದೆ.
‘ಬಾದಾಮಿ ಚಾಲುಕ್ಯರ ಪ್ರಖ್ಯಾತ ಅರಸ ಇಮ್ಮಡಿ ಪುಲಕೇಶಿ ಮತ್ತು ಕಂಚಿಯ ಪಲ್ಲವ ದೊರೆ ನರಸಿಂಹ ವರ್ಮನ ನಡುವೆ ಕಿ.ಶ. 642ರಲ್ಲಿ ನಡೆದ ಕಾಳಗದ ಬಳಿಕ, ವಿಜಯಿಯಾದ ನರಸಿಂಹ ವರ್ಮ ಬಾದಾಮಿಯ ಸಂಪತ್ತನ್ನು ಕೊಳ್ಳೆಹೊಡೆದುಕೊಂಡು ಹೋಗುವ ಸಂದರ್ಭದಲ್ಲಿ ಗುಹಾಂತರ ದೇವಾಲಯದಲ್ಲಿರುವ ಸುಂದರ ವಿಗ್ರಹವನ್ನು ತನ್ನ ಸಂಗಡ ತೆಗೆದುಕೊಂಡು ಹೋಗಿ, (ಈಗಿನ ತಮಿಳುನಾಡಿನ) ತಿರುಚಿನಾಪಳ್ಳಿಯ ರಾಜ ನರಸಿಂಹೇಶ್ವರ (ಕೈಲಾಸ) ದೇವಾಲಯದಲ್ಲಿ ಪ್ರತಿಷ್ಠಾಪಿಸಿದ. ಕಾಲಕ್ರಮೇಣ ಆ ಗಣಪತಿಯೇ ‘ವಾತಾಪಿ ಗಣಪತಿ’ ಎಂದು ಪ್ರಖ್ಯಾತಿಯಾಯಿತು’ ಎಂದು ‘ವಾತಾಪಿ ಗಣಪ’ನ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಬಾದಾಮಿಯ ಡಾ. ಶಿಲಾಕಾಂತ ಪತ್ತಾರ ವಿಶ್ಲೇಷಿಸುತ್ತಾರೆ.
‘ನಿಂತ ಭಂಗಿಯಲ್ಲಿರುವ ಸುಂದರ ಗಣಪತಿ ಮೂರ್ತಿಯನ್ನು ಕಂಡ ಮುತ್ತುಸ್ವಾಮಿ ದೀಕ್ಷಿತರು ಭಕ್ತಿಯಿಂದ ‘ವಾತಾಪಿ ಗಣಪತಿಂ ಭಜೆ...’ ಎಂದು ಕೊಂಡಾಡಿದರು. ಈ ಗಣಪತಿ ಮೂರ್ತಿಯೇ ಬಾದಾಮಿ ಚಾಲುಕ್ಯರ ಕಾಲದ ಗಣಪತಿ ಇರಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.
ದಕ್ಷಿಣ ಭಾರತದಲ್ಲಿ ಗಣಪತಿ ಆರಾಧನೆಯನ್ನು ಪ್ರಚುರಪಡಿಸಿದವರು ಬಾದಾಮಿ ಚಾಲುಕ್ಯರು ಎಂಬುದು ಕನ್ನಡಿಗರು ಹೆಮ್ಮೆಪಡುವಂತಹ ವಿಷಯ. ಬಾದಾಮಿ ಚಾಲುಕ್ಯರ ಆಡಳಿ-ತಾವಧಿಯಲ್ಲಿ ಸಾವಿರಾರು ಗಣಪತಿಯ ಮೂರ್ತಿಗಳು ರೂಪುಗೊಂಡವು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಬಾದಾಮಿ, ಪಟ್ಟದಕಲ್ಲು, ಮಹಾಕೂಟ ಮತ್ತು ಐಹೊಳೆಯಲ್ಲಿ ಬಹುರೂಪಿ ಗಣಪನ ಮೂರ್ತಿಗಳ ಸಾಲನ್ನೇ ಕಾಣಬಹುದಾಗಿದೆ. ಬಾದಾಮಿಯಿಂದ ದೂರದ ತಿರುಚಿನಾಪಳ್ಳಿಗೆ ಸ್ಥಳಾಂತರವಾದರೂ ಸಹ ಇಂದಿಗೂ ಯಾವುದೇ ಶುಭ ಕಾರ್ಯಗಳ ಆರಂಭದಲ್ಲಿ ‘ವಾತಾಪಿ ಗಣಪತಿ’ಯನ್ನು ಸ್ಮರಿಸುವುದು ರೂಢಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.