ಮಂಗಳೂರು: ಒಡಿಯೂರು ಗುರುದೇವದತ್ತ ಸಂಸ್ಥಾನದ ಬೆಳ್ಳಿಹಬ್ಬ ‘ವಿಜಯ ರಜತ ಸಂಭ್ರಮ’ದ ಅಂಗವಾಗಿ ಭಾನುವಾರ ನಗರದ ನೆಹರೂ ಮೈದಾನದಲ್ಲಿ ‘ತುಳುನಾಡ್ದ ಜಾತ್ರೆ’ ಬೃಹತ್ ಸಮಾವೇಶ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಪ್ರತ್ಯೇಕ ತುಳು ರಾಜ್ಯಕ್ಕಾಗಿ ಆಗ್ರಹ ವ್ಯಕ್ತವಾಯಿತು.
ಪಂಚ ದ್ರಾವಿಡ ಭಾಷೆಗಳಲ್ಲಿ ನಾಲ್ಕು ಭಾಷೆಗಳಿಗೆ ಪ್ರತ್ಯೇಕ ರಾಜ್ಯವಿದೆ. ಆದರೆ ತುಳುಭಾಷಾ ರಾಜ್ಯ ಮಾತ್ರ ಇಲ್ಲ. ಅಲ್ಲದೆ ಕರಾವಳಿಯ ಕೃಷಿ ಸಂಸ್ಕೃತಿಗೆ ಯಾವುದೇ ಪ್ರೋತ್ಸಾಹ ದೊರೆಯದೇ, ಇತ್ತೀಚಿನ ವರ್ಷಗಳಲ್ಲಿ ಕೇವಲ ಬೃಹತ್ ಕೈಗಾರಿಕೆಗಳನ್ನು ಮಾತ್ರ ಇಲ್ಲಿಗೆ ತರಲಾಗುತ್ತಿದೆ ಎಂಬ ಆಕ್ಷೇಪವೂ ವ್ಯಕ್ತವಾಯಿತು.
ಕರಾವಳಿಗೆ ಮಾರಕವಾಗುವ ಎತ್ತಿನ ಹೊಳೆ ಯೋಜನೆಗೆ ವಿರೋಧ, ಮಂಗಳೂರು ವಿಮಾನ ನಿಲ್ದಾಣ ಮತ್ತು ಮತ್ಸ್ಯಗಂಧಿ ಎಕ್ಸ್‌ಪ್ರೆಸ್ ರೈಲಿಗೆ ತುಳುನಾಡಿನ ಹೆಸರಿಡುವುದು, ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಸೇರಿದಂತೆ ಒಟ್ಟು 25 ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸಲಾಯಿತು.
ವಿಜಯ ರಜತ ಸಂಭ್ರಮ ಕಾರ್ಯಕ್ರಮ ಫೆಬ್ರುವರಿ 7, 8 ಮತ್ತು 9ರಂದು ಒಡಿಯೂರು ಕ್ಷೇತ್ರದಲ್ಲಿ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ತುಳುನಾಡ್ದ ಜಾತ್ರೆಯನ್ನು ಆಯೋಜಿಸಲಾಗಿತ್ತು. ಡಿ.25ರಂದು ಜಿಲ್ಲೆಯ ತೆಂಕು, ಬಡಗು ಮತ್ತು ಮೂಡು ದಿಕ್ಕುಗಳಿಂದ ತುಳು ಸಂಸ್ಕೃತಿಯನ್ನು ಬಿಂಬಿಸುವ ತೇರುಗಳು ಹೊರಟಿದ್ದು ಭಾನುವಾರ ಈ ತೇರುಗಳು ಮಂಗಳೂರು ನಗರ ಸೇರಿದ ಸಂದರ್ಭದಲ್ಲಿ ತೇರುಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ , ಸಮಾವೇಶ ಆಯೋಜಿಸಲಾಗಿತ್ತು.
ತುಳು ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ನೃತ್ಯ, ಚೆಂಡೆ, ಡೋಲು, ಕೊಂಬು ಕಹಳೆಗಳು ಮೆರವಣಿಗೆಯಲ್ಲಿದ್ದವು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸಮಾವೇಶ ಉದ್ಘಾಟಿಸಿದರು. ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ. ಆರ್. ಲೋಬೊ ಮತ್ತು ಶಕುಂತಲಾ ಶೆಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.