ADVERTISEMENT

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ; ರಾಜ್ಯದಲ್ಲಿ 9 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2018, 20:09 IST
Last Updated 29 ಮೇ 2018, 20:09 IST
ಮಂಗಳೂರಿನ ಕುದ್ರೋಳಿ ಅಳಕೆಯಲ್ಲಿ ಶಾಲಾ ಮಕ್ಕಳನ್ನು ಬೋಟ್‌ನಲ್ಲಿ ಕರೆತರಲಾಯಿತು.
ಮಂಗಳೂರಿನ ಕುದ್ರೋಳಿ ಅಳಕೆಯಲ್ಲಿ ಶಾಲಾ ಮಕ್ಕಳನ್ನು ಬೋಟ್‌ನಲ್ಲಿ ಕರೆತರಲಾಯಿತು.   

ಬೆಂಗಳೂರು: ಅವಧಿಗೂ ಮುನ್ನವೇ ರಾಜ್ಯಕ್ಕೆ ಮುಂಗಾರು ಮಳೆ ಭರ್ಜರಿಯಾಗಿ ಪ್ರವೇಶಿಸಿದೆ. ಕರಾವಳಿ ಹಾಗೂ ಕೊಡಗು ಭಾಗಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಬಿರುಸಿನ ಮಳೆಯಾಗಿದೆ.

ನದಿ, ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು ಅವಧಿಗೆ ಮುನ್ನವೇ ಮುಂಗಾರು ಮಳೆ ಆರಂಭವಾಗಿದ್ದರಿಂದ ರೈತರು ಹರ್ಷಗೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

ಸೋಮವಾರ ರಾತ್ರಿ ಆರಂಭವಾಗಿರುವ ಮಳೆ, ಮಂಗಳವಾರವೂ ಮುಂದುವರಿದಿದ್ದು, ಅಪಾರ ಪ್ರಮಾಣದ ನೀರು ರಸ್ತೆಗಳಲ್ಲಿ ಹರಿದಾಡಿತು. ಬಹುತೇಕ ಹೆದ್ದಾರಿಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪಡೀಲ್‌, ಪಂಪ್‌ವೆಲ್‌, ತೊಕ್ಕೊಟ್ಟು, ಕೊಟ್ಟಾರ ಚೌಕಿಯಲ್ಲಿ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿತ್ತು.

ADVERTISEMENT

ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ನಾಪೋಕ್ಲು, ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಜೋರಾಯಿತು. ಬ್ರಹ್ಮಗಿರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಹರಿವು ಕಾಣಿಸಿಕೊಂಡಿದೆ.

ಹಾಸನ ಜಿಲ್ಲೆಯ ಅರಕಲಗೂಡು, ರಾಮನಾಥಪುರ, ಅರಸೀಕೆರೆ, ಹಾಸನದಲ್ಲಿ ಉತ್ತಮ ಮಳೆಯಾಗಿದೆ. ಅರಕಲಗೂಡು ಭಾಗದ ಕೆರೆಗಳು ಭರ್ತಿಯಾಗುವ ಹಂತ ತಲುಪಿವೆ. ಹೇಮಾವತಿ ಜಲಾಯಶದ ಒಳಹರಿವು ಅಲ್ಪ ಏರಿಕೆಯಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೈಲೂರಿನಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ (35), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ಸೋಮಾಚಾರಿ ಪತ್ನಿ ಲಕ್ಷ್ಮಮ್ಮ (55) ಹಾಗೂ ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗೋರ ಚಿಂಚೋಳಿಯಲ್ಲಿ ತಗಡಿನ ಮನೆ ಮೇಲಿನ ಕಬ್ಬಿಣದ ಶೀಟ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಶಿವಾಜಿ ಹಣಮಂತಪ್ಪ ಸಾಗಾವೆ (50), ಬಳ್ಳಾರಿ ತಾಲ್ಲೂಕಿನ ಕಾರೇಕಲ್ಲು ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ಪ್ರಕಾಶ (33) ಎಂಬುವವರು ಮೃತಪಟ್ಟಿದ್ದಾರೆ. ಕಾಪು ತಾಲ್ಲೂಕಿನ ಪಾದೆಬೆಟ್ಟು ಎಂಬಲ್ಲಿ 4ನೇ ತರಗತಿಯ ನಿಧಿ ಆಚಾರ್ಯ (9) ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾಳೆ. ಅವಳ ಜತೆಗೆ ಕೊಚ್ಚಿ ಹೋಗುತ್ತಿದ್ದ ಅವಳ ಅಕ್ಕ 9ನೇ ತರಗತಿಯ ನಿಶಾ ಆಚಾರ್ಯ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಗಂಗನಕೋಟೆಯ ನಾರಪ್ಪನಕೆರೆ ಸಮೀಪ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿದ್ದಾರೆ. ಮೈಲಾರಿ (19), ಸಂಜು (13) ಮೃತಪಟ್ಟ ಯುವಕರು. ನವಲಗುಂದ ‌ತಾಲ್ಲೂಕಿನ ಜಾವೂರು ಗ್ರಾಮದಲ್ಲಿ ಮುತ್ತು ಕಿರೇಸೂರ ಎಂಬ ವ್ಯಕ್ತಿ ಸಿಡಿಲು‌ ಬಡಿದು‌ ಸಾವಿಗೀಡಾಗಿದ್ದಾರೆ.

ಮಂಗಳೂರಿನ ಕೆಪಿಟಿ ಉದಯನಗರದಲ್ಲಿ ಮಂಗಳವಾರ ಭಾರಿ ಮಳೆಗೆ ಮನೆಯ ಕಾಂಪೌಂಡ್‌ ಕುಸಿದು ಅದರಡಿ ಸಿಲುಕಿದ್ದ ಮೋಹಿನಿ ಕೃಷ್ಣಪ್ಪ (61) ಮೃತಪಟ್ಟಿದ್ದಾರೆ.

ಮಂಗಳೂರಿನ ಕೊಟ್ಟಾರ ಚೌಕಿ ಭಾಗದಲ್ಲಿ ಮಳೆ ನೀರು ನಿಂತಿರುವ ದೃಶ್ಯ. ಪ್ರಜಾವಾಣಿ ಚಿತ್ರ

ಶಾಲೆಗಳಿಗೂ ಸಂಕಷ್ಟ: ಮಂಗಳವಾರ ಶಾಲಾ ಪ್ರಾರಂಭೋತ್ಸವಕ್ಕೂ ಮಳೆಯಿಂದ ತೊಂದರೆ ಉಂಟಾಯಿತು. ಶಾಲೆಯಿಂದ ಮಕ್ಕಳನ್ನು ಕರೆತರಲು ಪಾಲಕರು ಪ್ರಯಾಸ ಪಡುವಂತಾಯಿತು.

ಸುರತ್ಕಲ್ ಸಮೀಪದ ಕೃಷ್ಣಾಪುರದ ಶ್ರೀ ನಾರಾಯಣ ಗುರು ಅನುದಾನಿತ ಶಾಲೆಯ ಕಟ್ಟಡ ಕುಸಿದು ಬಿದ್ದಿದ್ದು, ಮಮತಾ ಮತ್ತು ತುಳಸಿ ಎಂಬ ಶಿಕ್ಷಕರಿಯರು ಗಾಯಗೊಂಡಿದ್ದಾರೆ. ಮಕ್ಕಳು ತಡವಾಗಿ ಬಂದಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಅಳಕೆ ಪ್ರದೇಶದ ಗುಜರಾತಿ ಶಾಲೆಯಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೋಟ್‌ಗಳ ಸಹಾಯದಿಂದ ರಕ್ಷಣೆ ಮಾಡಿದರು. ಮಧ್ಯಾಹ್ನದ 1 ಗಂಟೆಯ ನಂತರ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಲಾಗಿದ್ದು, ಪಾಲಕರು ಮಕ್ಕಳನ್ನು ಕರೆತರಲು ಶಾಲೆಗಳತ್ತ ದೌಡಾಯಿಸಬೇಕಾಯಿತು.

ಕೈಗಾರಿಕಾ ಪ್ರದೇಶಕ್ಕೆ ನೀರು: ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು, ಹಲವು ಕಾರ್ಖಾನೆಗಳಿಗೆ ನೀರು ನುಗ್ಗಿದೆ.
ಇದೇ ಮೊದಲ ಬಾರಿಗೆ ಫ್ಯಾಕ್ಟರಿಯೊಳಗೆ ನೀರು ನುಗ್ಗಿದೆ ಎಂದು ಕೆಮಿಕಲ್‌ ಫ್ಯಾಕ್ಟರಿಯ ರಫೀಕ್‌ ತಿಳಿಸಿದ್ದಾರೆ.

‘ಮೀನುಗಾರಿಕಾ ದೋಣಿಗಳು ಮತ್ತು ಬೋಟ್‌ಗಳು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯಬಾರದು. ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು, ಸಮುದ್ರ ತೀರಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತೆರಳಬಾರದು. ಇದೊಂದು ಸಾಮಾನ್ಯ ಮಳೆಯಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಉಡುಪಿ ತಾಲ್ಲೂಕಿನಾದ್ಯಂತ ಮಂಗಳವಾರ ಭಾರಿ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಉಡುಪಿ ಹೊರ ವಲಯದ ಉದ್ಯಾವರದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.ಸುಮಾರು 100 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

ಧರೆಗುರುಳಿದ ವಿದ್ಯುತ್‌ ಕಂಬಗಳು: ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ 145 ವಿದ್ಯುತ್ ಕಂಬ, ಮೂರು ವಿದ್ಯುತ್‌ ಪರಿವರ್ತಕ ನೆಲಕ್ಕುರುಳಿದ್ದು, ಸುಮಾರು ₹ 29.5 ಲಕ್ಷದ ಹಾನಿಯಾಗಿದೆ.

ಗದಗ ಜಿಲ್ಲೆಯಾದ್ಯಂತ ಮಂಗಳವಾರ ಧಾರಾಕಾರ ಮಳೆ ಸುರಿಯಿತು. ಎರಡು ವಾರದಿಂದ ಸತತ ಮಳೆ ಸುರಿಯುತ್ತಿರುವುದರಿಂದ ಕೆರೆ ಕಟ್ಟೆಗಳು, ಕೃಷಿಹೊಂಡಗಳು ಭರ್ತಿಯಾಗಿವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಅಗಸ್ತ್ಯತೀರ್ಥ ಹೊಂಡದ ಮೇಲಿನ ಬೆಟ್ಟದಿಂದ ಜಲಪಾತ ಧುಮ್ಮಿಕ್ಕಿದೆ.ಹಾವೇರಿ ಜಿಲ್ಲೆಯ ಹಾವೇರಿ, ಶಿಗ್ಗಾವಿ, ಹಿರೇಕೆರೂರು, ಬ್ಯಾಡಗಿ, ಉತ್ತರ ಕನ್ನಡದ ಕಾರವಾರ, ಹೊನ್ನಾವರ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಖಾನಾಪುರ ಹಾಗೂ ಹುಬ್ಬಳ್ಳಿ- ಧಾರವಾಡದಲ್ಲಿ ಸಾಧಾರಣ ಮಳೆಯಾಯಿತು.

ಶಿವಮೊಗ್ಗ ಜಿಲ್ಲೆಯ ಮುಂಗಾರು ಬಿರುಸುಗೊಂಡಿದ್ದು ಹಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಸೊರಬ, ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ಕೋಣಂದೂರಿನಲ್ಲಿ ಭಾರಿ ಮಳೆ: ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಮಂಗಳವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ದನಗಳು ಸಾವು: ಕೋಣಂದೂರು ಸಮೀಪದ ಆಲೂರು ಹೊಸಕೊಪ್ಪದ ದೇವೇಂದ್ರನಾಯ್ಕ ಎಂಬುವವರಿಗೆ ಸೇರಿದ ಮೂರು ದನಗಳು ಮತ್ತು ಒಂದು ಎಮ್ಮೆ ಮಂಗಳವಾರ ಸಿಡಿಲು ಬಡಿದು ಸಾವನ್ನಪ್ಪಿವೆ.

ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂಥ್‌ ಸೆಂಥಿಲ್‌, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಉಭಯ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದರು.

ಬುಧವಾರ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಕೆಲವು ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇನ್ನೆರಡು ದಿನ ಭಾರಿ ಮಳೆ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ಇದೇ 30, 31 ಹಾಗೂ ಜೂನ್‌ 1 ರಂದು ಭಾರಿ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ ಪ್ರಮಾಣದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ವಾಯುಭಾರ ಕುಸಿತ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಗೆ ಮುಂಗಾರು ಪ್ರವೇಶದ ಜೊತೆಗೆ ವಾಯುಭಾರ ಕುಸಿತವೂ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಪ್ರಾರಂಭವಾದ ವಾಯುಭಾರ ಕುಸಿತದ ತೀವ್ರತೆ ಮಂಗಳವಾರ ರಾತ್ರಿ ಕಡಿಮೆ ಆಗುತ್ತದೆ. ಜೂನ್‌ 2 ರ ಬಳಿಕ ಮುಂಗಾರು ಮಳೆ ತೀವ್ರಗೊಳ್ಳಲಿದೆ. ದಕ್ಷಿಣಕನ್ನಡದ ಕೆಲವು ಕಡೆಗಳಲ್ಲಿ 288 ಮಿ.ಮೀ.ಗಳಷ್ಟು ಮಳೆಯಾಗಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಪ್ರವಾಹ: ಮಾಹಿತಿ ಪಡೆದ ಮುಖ್ಯಮಂತ್ರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು.

ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯವಿದ್ದಲ್ಲಿ ಕೋಸ್ಟ್ ಗಾರ್ಡ್‌ ನೆರವು ಪಡೆಯುವಂತೆ ಹಾಗೂ ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು.

* ಮಳೆ ನೀರು ನುಗ್ಗಿ ಸಾರ್ವಜನಿಕರ ಜನಜೀವನಕ್ಕೆ ತೊಂದರೆಯಾಗಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳುತ್ತಿದೆ.

–ಸಸಿಕಾಂತ್‌ ಸೆಂಥಿಲ್‌,ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

* ಉದ್ಯಾವರ ಭಾಗದಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿದ ಪರಿಣಾಮ ಹೆಚ್ಚಿನ ನಷ್ಟ ಸಂಭವಿಸಿದೆ.

–ಪ್ರಿಯಾಂಕ ಮೇರಿ ಫ್ರಾನ್ಸಿಸ್,ಉಡುಪಿ ಜಿಲ್ಲಾಧಿಕಾರಿ

ಮುಖ್ಯಾಂಶಗಳು

* ಮಂಗಳೂರಿನ ಕೈಗಾರಿಕಾ ಪ್ರದೇಶಕ್ಕೆ ನುಗ್ಗಿದ ನೀರು

* ಉಡುಪಿಯಲ್ಲಿ ನೆಲಕ್ಕುರುಳಿದ ಮರ, ವಿದ್ಯುತ್ ಕಂಬ

* ದಿನವಿಡೀ ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಿದ ಜನ

ದಾವಣಗೆರೆ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಸಾವು

ದಾವಣಗೆರೆ ವರದಿ: ನ್ಯಾಮತಿ ತಾಲ್ಲೂಕು ಗಂಗನಕೋಟೆಯ ನಾರಪ್ಪನಕೆರೆ ಸಮೀಪ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.

ಮೈಲಾರಿ (19), ಸಂಜು (13) ಮೃತಪಟ್ಟ ಯುವಕರು. ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಹೋದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತರು ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಮುತ್ತಿಗೆ ಗ್ರಾಮದವರು ಎಂದು ತಹಶೀಲ್ದಾರ್‌ ನ್ಯಾಮತಿ ನಾಗರಾಜ್ ತಿಳಿಸಿದ್ದಾರೆ. ಸ್ಥಳಕ್ಕೆ ಹೊನ್ನಾಳಿ ತಹಶೀಲ್ದಾರ್ ತುಷಾರ್ ಬಿ. ಹೊಸೂರು ಭೇಟಿ ನೀಡಿದ್ದರು.

ಸಿಡಿಲು ಬಡಿದು ವ್ಯಕ್ತಿ ಸಾವು
ಹುಬ್ಬಳ್ಳಿ:
ಮಂಗಳವಾರ ‌ಸಂಜೆ ನವಲಗುಂದ ‌ತಾಲ್ಲೂಕಿನ ಜಾವೂರು ಗ್ರಾಮದಲ್ಲಿ ಮುತ್ತು ಕಿರೇಸೂರ ಎಂಬ ವ್ಯಕ್ತಿ ಸಿಡಿಲು‌ ಬಡಿದು‌ ಸಾವಿಗೀಡಾಗಿದ್ದಾರೆ.

ಸಿಡಿಲಿನಿಂದ ಮೃತಪಟ್ಟ ನವಲಗುಂದ ತಾಲ್ಲೂಕಿನ ಜಾವೂರ ಗ್ರಾಮದ ಮುತ್ತಣ್ಣ ಕಿರೇಸೂರ (21) ಅವರ ಮೃತ ದೇಹ ಇನ್ನೂ ಹೊಲದಲ್ಲೇ ಇದೆ. ಭಾರಿ ಮಳೆಯಿಂದಾಗಿ ತುಪ್ಪರಿಹಳ್ಳ ತುಂಬಿ ಹರಿಯುತ್ತಿರುವುದರಿಂದ ದೇಹವನ್ನು ಹೊಲದಿಂದ ತರಲು ಅಡ್ಡಿಯಾಗಿದೆ ಎಂದುಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.