ADVERTISEMENT

ದಲಿತರ ರಕ್ಷಣೆಗೆ ಬದ್ಧ: ಸಿದ್ದರಾಮಯ್ಯ

ಚಾಮುಂಡಿ ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2013, 20:00 IST
Last Updated 12 ಮೇ 2013, 20:00 IST

ಮೈಸೂರು: `ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ಕೆರೆ ಕಟ್ಟೆಗಳು ತುಂಬಿ ಹರಿಯಲಿ. ರಾಜ್ಯದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಲಿ ಎಂದು ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ ಬಳಿ ಪ್ರಾರ್ಥಿಸಿದ್ದೇನೆ' ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ಜನರ ಸೇವೆ ಮಾಡಲು ಶಕ್ತಿ ನೀಡುವಂತೆ ತಾಯಿಯಲ್ಲಿ ಕೇಳಿಕೊಂಡಿದ್ದೇನೆ' ಎಂದರು.
`ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿರುವ ಪಕ್ಷದ ಪ್ರಣಾಳಿಕೆಯನ್ನು 5 ವರ್ಷಗಳಲ್ಲಿ ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮೊದಲು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಅಧಿಕಾರಿಗಳ ಸಭೆ ಕರೆಯಲಾಗುವುದು' ಎಂದರು.

ನಾನೂ ದಲಿತನೇ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ರಾಜ್ಯದಲ್ಲಿ ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, `ನಾನೂ ಕೂಡ ದಲಿತನೇ. ಹೀಗಾಗಿ, ದಲಿತರ ರಕ್ಷಣೆ ಮತ್ತು ಅಭಿವೃದ್ಧಿಗೆ ಬದ್ಧವಾಗಿ ಕೆಲಸ ನಿರ್ವಹಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ನಾನೂ ಆಶಿಸಿದ್ದೆ. ಆದರೆ, ಹೈಕಮಾಂಡ್ ನಿರ್ಧಾರದಂತೆ ಆ ಸ್ಥಾನವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ದಲಿತ ಸಂಘಟನೆಗಳು ಪ್ರತಿಭಟನೆ ಕೈಬಿಟ್ಟು ಸಹಕಾರ ನೀಡಬೇಕು' ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

30-30 ಆಡಳಿತ ಇಲ್ಲ: `ಆಡಳಿತ ಅವಧಿಯ ಮೊದಲ 30 ತಿಂಗಳ ಅವಧಿಗೆ ನೀವು ಹಾಗೂ ಉಳಿದ 30 ತಿಂಗಳ ಅವಧಿಗೆ ಬೇರೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗುತ್ತದೆಯೇ?' ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, `ಊಹೆ ಮಾಡಿ ಪ್ರಶ್ನೆ ಕೇಳಬೇಡಿ. ಇಲ್ಲಸಲ್ಲದ ಪ್ರಶ್ನೆಗಳನ್ನು ಏಕೆ ಸೃಷ್ಟಿಸುತ್ತೀರಿ?' ಎಂದು ಗರಂ ಆದರು.

`30 ತಿಂಗಳಿಗೆ ಮುಖ್ಯಮಂತ್ರಿಯನ್ನು ಬದಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ' ಎಂದು ಸಿಟ್ಟಿನಿಂದಲೇ ಹೇಳಿದರು. `ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುವುದು. ಹಳಿ ತಪ್ಪಿರುವ ಆಡಳಿತ ದುರಸ್ತಿಗೊಳಿಸಲು ಆದ್ಯತೆ ನೀಡಲಾಗುವುದು' ಎಂದು ತಿಳಿಸಿದರು. ಪುತ್ರ ರಾಕೇಶ್ ಸಿದ್ದರಾಮಯ್ಯ, ಮಾಜಿ ಶಾಸಕ ಎಂ. ಸತ್ಯನಾರಾಯಣ, ಮುಖಂಡರಾದ ಸಿ. ಬಸವೇಗೌಡ ಇದ್ದರು.

`ಭೂಮಾಫಿಯಾ ತಡೆಗೆ ಬದ್ಧ'
ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕುವೆಂಪುನಗರದಲ್ಲಿರುವ ಸಾಹಿತಿ ದೇವನೂರ ಮಹದೇವ ಅವರ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಕುಶಲೋಪರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹದೇವ, `ರಾಜ್ಯದಲ್ಲಿ ಭೂಮಾಫಿಯಾ, ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಹಿಂದಿನ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಿದ್ದರಿಂದ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದೆ. ಇದನ್ನು ಕೂಡಲೇ ತಡೆಗಟ್ಟಬೇಕು. ರಾಜ್ಯದ ಎಲ್ಲ ಬಡಮಕ್ಕಳಿಗೂ ಶಿಕ್ಷಣ ದೊರಕುವಂತೆ ಮಾಡಬೇಕು. ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡು ಬರುವ ಎಲ್ಲರಿಗೂ ನ್ಯಾಯ ಒದಗಿಸಬೇಕು' ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.