ADVERTISEMENT

ದಲಿತ ಅರ್ಚಕಿಯರಿಂದ ಪೂಜೆ

ಇತಿಹಾಸ ಬರೆದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಗೋಕರ್ಣನಾಥ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕಿಯರಿಬ್ಬರೂ ಶಾರದಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು	 – ಪ್ರಜಾವಾಣಿ ಚಿತ್ರ
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಗೋಕರ್ಣನಾಥ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕಿಯರಿಬ್ಬರೂ ಶಾರದಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು – ಪ್ರಜಾವಾಣಿ ಚಿತ್ರ   

ಮಂಗಳೂರು: ನವರಾತ್ರಿ ಸಂಭ್ರಮದ­ಲ್ಲಿ­ರುವ ಇಲ್ಲಿನ ಕುದ್ರೋಳಿ ಗೋಕರ್ಣ­ನಾಥ ದೇವಸ್ಥಾನ ಸೋಮವಾರ ಐತಿ­ಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ನಾರಾಯಣ ಗುರುಗಳು ಸ್ಥಾಪಿಸಿದ ಲಿಂಗ ರೂಪದಲ್ಲಿರುವ ಗೋಕರ್ಣನಾಥ ದೇವರಿಗೆ ದಲಿತ ಮಹಿಳೆಯರಿಬ್ಬರು ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದ ಗರ್ಭಗುಡಿಗೆ ದಲಿತ ಮಹಿಳೆಯರಿಗೆ ಪ್ರವೇಶ ಕಲ್ಪಿಸ­ಲಾಯಿತು. ಬೆಳಿಗ್ಗೆ ಸುಮಾರು ಹತ್ತೂವರೆಗೆ ದಲಿತ ಮಹಿಳೆ­ಯರಾದ ಚಂದ್ರಾವತಿ ಮತ್ತು ಲಕ್ಷ್ಮಿ ಅವರನ್ನು ಕಾಂಗ್ರೆಸ್‌ ಮುಖಂಡ ಬಿ. ಜನಾರ್ದನ ಪೂಜಾರಿ ಅವರೇ ದೇವಳದ ಹೆಬ್ಬಾಗಿಲಿಗೆ ತೆರಳಿ  ಚೆಂಡೆ ವಾದ್ಯಮೇಳದೊಂದಿಗೆ ಬರಮಾಡಿಕೊಂಡರು.

ವಾದ್ಯಮೇಳದೊಂದಿಗೇ ದೇವ­ಸ್ಥಾನದ ಪ್ರಾಕಾರ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅರ್ಚಕಿಯ­ರಿಬ್ಬರೂ ಗೋಕರ್ಣನಾಥ ದೇವರ ಗರ್ಭಗುಡಿ ಪ್ರವೇಶಿಸಿ ದೇವರನ್ನು ಪ್ರಾರ್ಥಿಸಿ ಹರಿವಾಣದಲ್ಲಿ ಸಿಂಗರಿಸಿಟ್ಟ ಆರತಿಯನ್ನು ಬೆಳಗಿದರು.

ಪತಿ ಕಳೆದುಕೊಂಡ ಮಹಿಳೆಯರಿಗೆ ಬೆಳ್ಳಿ ರಥ ಎಳೆಯುವ ಅವಕಾಶ, ಚಂಡಿಕಾ ಹೋಮ ಮಾಡುವ ಅವಕಾಶ­ಗಳನ್ನು ಈ ಹಿಂದಿನ ವರ್ಷ­ಗಳಲ್ಲಿ ದೇವ­ಸ್ಥಾನದಲ್ಲಿ ಕಲ್ಪಿಸ­ಲಾಗಿತ್ತು. ಅಲ್ಲದೆ ಪತಿ­ಯನ್ನು ಕಳೆದುಕೊಂಡ ಮಹಿಳೆಯ­ರನ್ನು ಸಮಾಜದಲ್ಲಿ ತುಚ್ಛವಾಗಿ ಕಾಣಬಾರದು ಎಂಬ ಸಂದೇಶ­ವನ್ನು ಸಾರುವ ನಿಟ್ಟಿನಲ್ಲಿ ಹೂವು, ಕುಂಕುಮ, ಬಳೆ ಮತ್ತು ಸೀರೆ ವಿತರಿಸಲಾಗಿತ್ತು. ಪತಿಯನ್ನು ಕಳೆದು­ಕೊಂಡ ಮಹಿಳೆಯರೇ ಅರ್ಚಕಿ­ಯರಾ­ಗಿಯೂ ನೇಮಕಗೊಂಡಿದ್ದರು.

ಜೊತೆಗೆ ಕಳೆದ ವರ್ಷ ದಸರಾ ಸಂದರ್ಭದಲ್ಲಿ ದಲಿತ ಮಹಿಳೆಯೊ­ಬ್ಬರನ್ನು ಕರೆಸಿ ಸ್ವತಃ ಪೂಜಾರಿ ಅವರೇ ಅವರ ಪಾದ ಪೂಜೆ­ಮಾಡಿ ಜಾತಿ ಭೇದದ ನಿವಾರ­ಣೆಯ ಪ್ರಯತ್ನ ನಡೆಸಿದ್ದರು. ಈ ವರ್ಷ ಸುಧಾ­ರ­ಣೆಯ ಅವರ  ಪ್ರಯತ್ನಗಳಿಗೆ ಹೊಸ­ದೊಂದು ಸೇರ್ಪಡೆಯಾದಂತಾಗಿದೆ.
ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ಅವರು, ನಾರಾ­ಯಣ ಗುರುಗಳ ಆದರ್ಶವನ್ನು ಪಾಲಿ­ಸುವ ನಿಟ್ಟಿನಲ್ಲಿ ದಲಿತ ಮಹಿಳೆಯರಿಗೆ ದೇವರ ಪೂಜೆ ಮಾಡುವ ಅವಕಾಶ ಕಲ್ಪಿಸಿರುವುದಾಗಿ ಹೇಳಿದರು. ‘ನಾವೆ­ಲ್ಲರೂ ದೇವರ ಮಕ್ಕಳು, ಜಾತಿ ಮತದ ಭೇದವಿಲ್ಲದೆ ಎಲ್ಲರಿಗೂ ದೇವರ ಪೂಜೆ  ಮಾಡುವ ಅವಕಾಶವಿದೆ ಎನ್ನುವುದನ್ನು ನಾರಾಯಣ ಗುರುಗಳು ಹೇಳಿದ್ದಾರೆ. ಭಾರತದ ಸಂವಿಧಾನ ಕೂಡ ಜಾತಿ ಭೇದ, ಅಸ್ಪೃಶ್ಯತೆಯನ್ನು ವಿರೋಧಿ­ಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸಮಾನವಾದ ಗೌರವಕ್ಕೆ ಅರ್ಹರು ಎಂಬುದನ್ನು ಜನರು ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ಮಹಿಳೆಯರಿಬ್ಬರಿಗೆ ಮಂತ್ರಗಳನ್ನು ಉಚ್ಛರಿಸುವ ತರಬೇತಿ ಆಗಿದೆಯೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ನಾರಾಯಣ ಗುರುಗಳು ದೇವಸ್ಥಾನ ಸ್ಥಾಪಿಸಿದಾಗ ಪೂಜೆಗೆ ಭಟ್ಟರೇ ಇರಲಿಲ್ಲ. ದೇವರ ಪೂಜೆಗೆ ಭಕ್ತಿಗಿಂತ ಮಿಗಿಲಾದ ಯಾವುದೇ ಮಂತ್ರದ ಅಗತ್ಯವಿಲ್ಲ ಎಂದು ನಾರಾಯಣ ಗುರು ಹೇಳಿದ್ದರು. ಆದರೂ ಮಹಿಳೆಯರಿಬ್ಬರಿಗೆ ದೇವರನ್ನು ಪೂಜಿಸುವ ಬಗ್ಗೆ ಮೂರು ದಿನಗಳ ತರಬೇತಿ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT