ADVERTISEMENT

ದುರಂತಕ್ಕೆ ಆಹ್ವಾನ ನೀಡಿದ ತಮಾಷೆ!

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ರಾಮನಗರ: ಸಂಬಂಧಿಯೊಬ್ಬರು ತಮಾಷೆ ಮಾಡಲು ನೀಡಿದ ಸುಳ್ಳು ಮಾಹಿತಿ­ಯಿಂದ ಮನನೊಂದ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಇಟ್ಟಮಡು ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತ ವಿದ್ಯಾರ್ಥಿನಿ ಇಟ್ಟಮಡು ಗ್ರಾಮದ ರಾಮಚಂದ್ರ ಮತ್ತು ಕುಮಾರಿ ದಂಪತಿಯ ಏಕೈಕ ಪುತ್ರಿ ಆರ್.ತೇಜಸ್ವಿನಿ (17) ಎಂದು ಗುರುತಿಸಲಾಗಿದೆ. ಈಕೆ ಬಿಡದಿಯ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.

ಗುರುವಾರ ಫಲಿತಾಂಶದ ನಿರೀಕ್ಷೆ­ಯಲ್ಲಿದ್ದ ಆಕೆಗೆ ಸಂಬಂಧಿಯೊಬ್ಬರು ಬೆಳಿಗ್ಗೆ 9 ಗಂಟೆ ವೇಳೆಗೆ ದೂರವಾಣಿ ಕರೆ ಮಾಡಿ ‘ನೀನು ಪರೀಕ್ಷೆಯಲ್ಲಿ ಫೇಲಾಗಿದ್ದೀಯ’ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಆಕೆ ತಕ್ಷಣವೇ ಮನೆಯ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಪರ್ಯಾಸ ಎಂದರೆ ತೇಜಸ್ವಿನಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಒಟ್ಟು 406 ಅಂಕ ಗಳಿಸಿದ್ದಾಳೆ. ಈಕೆ ಬಾವಿಗೆ ಹಾರಿದ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ತಂದೆ ಕೃಷಿ ಕೆಲಸಕ್ಕಾಗಿ ತೋಟಕ್ಕೆ ಹೋಗಿದ್ದರೆ, ತಾಯಿ ಕೂಡ ಮನೆಯಲ್ಲಿ ಇದ್ದಿರಲಿಲ್ಲ ಎಂದು ಆಕೆಯ ಸಂಬಂಧಿಗಳು ತಿಳಿಸಿದ್ದಾರೆ.

ಬೆಂಗಳೂರಿನ ರಾಜಾರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ತೇಜಸ್ವಿನಿಯ ಪೋಷಕರು ಆಕೆಯ ಕಣ್ಣುಗಳನ್ನು ಬಿಡದಿಯ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಾಲಯಕ್ಕೆ ದಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.