ADVERTISEMENT

`ದೂರವಾಗುತ್ತಿರುವ ಸಾಹಿತ್ಯ- ಸಿನಿಮಾ ನಂಟು'

​ಪ್ರಜಾವಾಣಿ ವಾರ್ತೆ
Published 26 ಜನವರಿ 2013, 19:59 IST
Last Updated 26 ಜನವರಿ 2013, 19:59 IST
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ನಡೆದ `ಸಾಹಿತ್ಯ ಕೃತಿಯಿಂದ ಸಿನಿಮಾಕ್ಕೆ' ಗೋಷ್ಠಿಯಲ್ಲಿ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಮಾತನಾಡಿದರು. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಂ ಇದ್ದಾರೆ
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ನಡೆದ `ಸಾಹಿತ್ಯ ಕೃತಿಯಿಂದ ಸಿನಿಮಾಕ್ಕೆ' ಗೋಷ್ಠಿಯಲ್ಲಿ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಮಾತನಾಡಿದರು. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎನ್.ಸೀತಾರಾಂ ಇದ್ದಾರೆ   

ಧಾರವಾಡ: ರೀಮೇಕ್- ಡಬ್ಬಿಂಗ್‌ನ ಪರಿಣಾಮಗಳು, ಮುಖ್ಯಧಾರೆಯ ಸಿನಿಮಾಗಳಲ್ಲಿ ಸಾಹಿತ್ಯದ ಅಭಾವ, ಚಿತ್ರದ ಯಶಸ್ಸು ಯಾರಿಗೆ ಸಲ್ಲಬೇಕು, ಧಾರಾವಾಹಿ ಹಾಗೂ ಚಲನಚಿತ್ರದ ನಡುವಿನ ಹೊಯ್ದಾಟ ಇತ್ಯಾದಿ ಬಿಸಿಬಿಸಿ ಚರ್ಚೆಗಳಿಗೆ `ಧಾರವಾಡ ಸಾಹಿತ್ಯ ಸಂಭ್ರಮ'ದ ಎರಡನೇ ದಿನ ವೇದಿಕೆ ಒದಗಿಸಿತು.

ಶನಿವಾರ ನಡೆದ `ಸಾಹಿತ್ಯ ಕೃತಿಯಿಂದ ಸಿನಿಮಾಕ್ಕೆ' ಗೋಷ್ಠಿಯಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, `ರೀಮೇಕ್‌ನಿಂದಾಗಿ ಕತೆಗಳ ಹುಡುಕಾಟವೇ ಇಲ್ಲದ ಸ್ಥಿತಿಗೆ ಕನ್ನಡ ಚಿತ್ರರಂಗ ತಲುಪಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆ ಕತೆಗಳನ್ನು ಸಿನಿಮಾ ಮಾಡುವ ಸಾಧ್ಯತೆಗಳಿದ್ದರೂ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇಂತಹ ಬೆಳವಣಿಗೆಯಿಂದಾಗಿ ಉತ್ತಮ ಸಾಹಿತ್ಯಕ್ಕೂ ಸಿನಿಮಾ ರಂಗಕ್ಕೂ ನಂಟಿಲ್ಲದಂತಾಗಿದೆ' ಎಂದು ಅಭಿಪ್ರಾಯಪಟ್ಟರು.

`ಹಿಂದೆಲ್ಲ ಕನ್ನಡದಲ್ಲಿ ವರ್ಷಕ್ಕೆ 30 ಸಿನಿಮಾಗಳು ತಯಾರಾಗುತ್ತಿದ್ದವು. ಈಗ ನೂರಾರು ಚಿತ್ರಗಳು ಬರುತ್ತಿವೆ. ಅಷ್ಟೂ ಚಿತ್ರಗಳಿಗೆ ಸಾಹಿತ್ಯ ಕೃತಿಗಳನ್ನು ಒದಗಿಸಲು ಸಾಧ್ಯವೇ?' ಎಂದು ಸಾಹಿತಿ ಗಿರೀಶ ಕಾರ್ನಾಡರು ಕೇಳಿದ ಪ್ರಶ್ನೆಗೆ  ಅವರು ಉತ್ತರಿಸಿದರು.

`ರೀಮೇಕ್‌ಗೆ ಅನುಮತಿ ನೀಡಿದ್ದರಿಂದ ಕಾದಂಬರಿ ಆಧರಿಸಿ ಚಲನಚಿತ್ರ ತಯಾರಿಸುತ್ತಿದ್ದ ನಿರ್ದೇಶಕರು ಕೂಡ ಅನಿವಾರ್ಯವಾಗಿ ರೀಮೇಕ್ ಚಿತ್ರಗಳ ಮೊರೆ ಹೋದರು. ನಿರ್ಮಾಪಕರು ಬೇರೆ ಭಾಷೆಗಳಲ್ಲಿ ಜನಪ್ರಿಯವಾಗಿದ್ದ ಸಿನಿಮಾಗಳನ್ನೇ ಕನ್ನಡಕ್ಕೆ ತರುವಂತೆ ಒತ್ತಡ ಹೇರಿದರು' ಎಂದು ಇದಕ್ಕೂ ಮುನ್ನ ತಿಳಿಸಿದರು.

`ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿಗೆ ಆತಂಕವಿದೆ ಎಂದು ಹೇಳಿದ್ದು ಸಿನಿಮಾದವರಲ್ಲ. ಬದಲಿಗೆ ಅ.ನ. ಕೃಷ್ಣರಾಯರಂಥ ಸಾಹಿತಿಗಳು ಹಾಗೂ ಮ. ರಾಮಮೂರ್ತಿ ಅವರಂತಹ ಕನ್ನಡ ಪರ ಹೋರಾಟಗಾರರು ಎಂಬುದನ್ನು ಗಮನಿಸಬೇಕು. ರೀಮೇಕ್ ಜೊತೆಗೆ ಡಬ್ಬಿಂಗ್ ಕೂಡ ಹಾವಳಿ ಮಾಡಿದರೆ ಕನ್ನಡದ ಅಸ್ಮಿತೆಗೆ ಧಕ್ಕೆ ಬರುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.

`70-80ರ  ದಶಕದ ನಂತರ ಕನ್ನಡದಲ್ಲಿ ಸಿನಿಮಾಕ್ಕೆ ಅಗತ್ಯವಾದ ಕಾದಂಬರಿಗಳ ಕೊರತೆ ಕಂಡುಬಂತು. ಹೀಗಾಗಿ ನಿರ್ದೇಶಕರು ಸಾಹಿತ್ಯಕ್ಕೆ ಒತ್ತು ನೀಡದೆ ತಮ್ಮದೇ ಕತೆಗಳನ್ನು ಹೆಣೆಯ ತೊಡಗಿದರು. ಹೊಸ ತಲೆಮಾರಿನ ಅನೇಕರು ಕಾದಂಬರಿ ರಚನೆಯಲ್ಲಿ ತೊಡಗಿರುವುದರಿಂದ ಮತ್ತೆ ಸಿನಿಮಾಗಳು ಸಾಹಿತ್ಯ ಕೃತಿಗಳನ್ನು ಧ್ಯಾನಿಸಬಹುದು' ಎಂದು ನಿರ್ದೇಶಕ ಟಿ.ಎನ್. ಸೀತಾರಾಂ ಅಭಿಪ್ರಾಯಪಟ್ಟರು.

ವಿಮರ್ಶಕ ಸಿ.ಎನ್. ರಾಮಚಂದ್ರನ್ ಎತ್ತಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಸರವಳ್ಳಿ, `ಸಿನಿಮಾದಲ್ಲಿ ನಟನಿಗೆ ಯಶಸ್ಸು ಸಲ್ಲಬೇಕಿಲ್ಲ. ಇದು ನಾಟಕದಂತೆ ಅಲ್ಲ. ನಟರ ಲೋಪಗಳನ್ನು ಮುಚ್ಚಿ ಹಾಕುವ ಶಕ್ತಿ ನಿರ್ದೇಶಕರಿಗಿರುತ್ತದೆ. ಅಭಿನಯಕ್ಕಿಂತಲೂ ಚಿತ್ರಕತೆ ಹಾಗೂ ಛಾಯಾಗ್ರಹಣ ಮುಖ್ಯಪಾತ್ರ ವಹಿಸುತ್ತವೆ' ಎಂದು ಉದಾಹರಣೆ ಸಹಿತ ವಿವರಿಸಿದರು.

`ಕೃತಿಯೊಂದರ ಶ್ರೇಷ್ಠತೆಗಿಂತಲೂ ಅದು ಸಿನಿಮಾ ಆಗುತ್ತದೆಯೇ ಎಂಬುದನ್ನಷ್ಟೇ ಗಮನಿಸುತ್ತೇನೆ. ಆ ನಂತರ ಇವತ್ತಿನ ಸಂದರ್ಭಕ್ಕೆ ಕತೆ ಹೇಗೆ ಹೊಂದುತ್ತದೆ ಎಂಬುದನ್ನು ಗಮನಿಸುತ್ತೇನೆ. ಚಿತ್ರ ಮಾಡುವಾಗ ಇವೆರಡಕ್ಕೇ ನನ್ನ ಆದ್ಯತೆ. ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಸಿನಿಮಾಕ್ಕೆಂದು ಹ್ರಸ್ವಗೊಳಿಸಿದರೆ ಅದರ ಧ್ವನಿಯೇ ಕಾಣೆಯಾಗುತ್ತದೆ. ನಾ. ಡಿಸೋಜ ಅವರ ಕತೆ ಸಿನಿಮಾ ಭಾಷೆಗೆ ಹೊಂದುವಂತಹವ ವಸ್ತುವನ್ನು ಒಳಗೊಂಡಿತ್ತು. ಸಿನಿಮಾ ಧಾರಾವಾಹಿಗಳ ಭಾಷೆ ದೃಶ್ಯ. ಆದರೆ ಧಾರಾವಾಹಿಗಳಲ್ಲಿ ಮಾತೇ ಪ್ರಧಾನ” ಎಂದರು.

`ಒಂದು ಒಳ್ಳೆಯ ಸಿನಿಮಾ ಸಾಹಿತ್ಯದಿಂದಲೇ ಸೃಷ್ಟಿಯಾಗುತ್ತದೆ ಎನ್ನುವುದು ಸುಳ್ಳು. ನನ್ನ ಸಿನಿಮಾಗಳು ಸಾಹಿತ್ಯ ಆಧರಿಸಿದ್ದರೂ ಸಂಪೂರ್ಣವಾಗಿ ಸಾಹಿತ್ಯ ಕೃತಿಯ ಪ್ರತಿರೂಪವಲ್ಲ. ಅದು ಮೂಲಕತೆಯೊಂದಿಗೆ ನಡೆಸಿದ ಸಂವಾದ' ಎಂದರು. ಗೋಷ್ಠಿಯ ನಿರ್ದೇಶಕ, ಸಾಹಿತಿ ಜಯಂತ ಕಾಯ್ಕಿಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.