ADVERTISEMENT

ದೇವನೂರ ಆಶಯದಂತೆ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ಬೆಂಗಳೂರು: ಸಮ್ಮೇಳನ ಅಧ್ಯಕ್ಷ ಸ್ಥಾನ­ವನ್ನು ಸೈದ್ಧಾಂತಿಕ ನಿಲುವಿನಿಂದ ತಿರಸ್ಕ­ರಿಸಿದ ದೇವನೂರ ಮಹಾದೇವ ಅವರ ಆಶಯ­ದಂತೆ ಸಾಹಿತ್ಯ ಸಮ್ಮೇ­ಳ­ನ­­ವನ್ನು ನಡೆ­ಸಲು ಕಾರ್ಯಕಾರಿ ಸಮಿತಿ ತೀರ್ಮಾ­ನಿಸಿದೆ. ಪ್ರಾಥಮಿಕ ಶಿಕ್ಷಣ­­ದಲ್ಲಿ ಕನ್ನಡ ಮಾಧ್ಯಮ ಕಡ್ಡಾ­ಯಕ್ಕೆ ಸಮ್ಮೇ­ಳನದ ಮೂಲಕ ಜನಾಂದೋಲನ ಪ್ರಾರಂ­ಭಿಸಲಾ­ಗು­­ವುದು. ಅದರ ಸಾರಥ್ಯ ವಹಿಸಲು ದೇವ­ನೂರ ಅವರಿಗೆ ಆಹ್ವಾನ ನೀಡ­ಲಾ­ಗು­ವುದು. ಸಮ್ಮೇ­ಳನದ ಏಕ ನಿರ್ಣಯ ಕೂಡಾ ಇದೇ ಆಗಲಿದೆ  ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ದಲಿತರಿಂದ ಕನ್ನಡ ಶಾಲೆಗಳು ಉಳಿದಿವೆ

ರಾಜ್ಯದಲ್ಲಿರುವ ಕನ್ನಡ ಶಾಲೆಗಳು ಉಳಿದಿರುವುದೇ ದಲಿತರಿಂದ. ಬಡತನ, ಸಾಮಾಜಿಕ ಅಸಮಾನತೆಯ ಕಾರಣದಿಂದ ದಲಿತ ಮಕ್ಕಳು ಮಾತ್ರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ. –ಪುಂಡಲೀಕ ಹಾಲಂಬಿ

ನೋಂದಣಿಗೆ ಜ.20 ಕಡೆ ದಿನ
ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ನೋಂದಣಿಗೆ ಜ.20 ಕಡೆಯ ದಿನ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಅನ್ಯಕಾರ್ಯ ನಿಮಿತ್ತ ರಜೆ ಪ್ರಮಾಣಪತ್ರ (ಒಒಡಿ) ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಹಿಂದಿನ ಸಮ್ಮೇಳನಗಳಲ್ಲಿ ನಡೆದ ಗೊಂದಲಗಳ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. –ಎಚ್‌.ಎಲ್‌. ಜನಾರ್ದನ, 
(ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ)

ADVERTISEMENT

ಕನ್ನಡ ಕಡ್ಡಾಯಗೊಳಿಸಲು ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಸಮ್ಮೇ­ಳ­ನದ ಗೋಷ್ಠಿಗಳನ್ನು ರೂಪಿಸ­ಲಾ­ಗು­ವುದು. ಆಶಯ ನುಡಿಯಿಂದ ನಿಲು­ವಳಿ ಮಂಡನೆಯವರೆಗೂ ಕನ್ನಡಕ್ಕೆ ಸಂಬಂ­ಧಿಸಿದ ಚರ್ಚೆ ನಡೆಯಲಿವೆ ಎಂದರು.

‘ಸುಪ್ರೀಂಕೋರ್ಟಿನ ತೀರ್ಪಿನಿಂದ ಕನ್ನಡಕ್ಕೆ  ಹಿನ್ನಡೆಯಾಗಿದೆ. ಇದಕ್ಕೆ ಸಂವಿ­ಧಾನ ತಿದ್ದುಪಡಿ ಅಗತ್ಯ. ರಾಜ್ಯ ಸರ್ಕಾರದ ಜೊತೆ ಚರ್ಚಿಸಿ, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಂವಿ­ಧಾನ ತಿದ್ದುಪಡಿ ಸಂಬಂಧ ಕೇಂದ್ರದ ಮೇಲೆ ಒತ್ತಡ ಹಾಕಲಾಗು­ವುದು.

ಸಮ್ಮೇಳನ ಮುಗಿದ ತಕ್ಷಣ ಶಿಕ್ಷಣ ಮತ್ತು ಕಾನೂನು ತಜ್ಞರ ಸಮಿತಿ ರಚನೆ ಮಾಡಿ  ಗೋಕಾಕ್‌ ಹೋರಾ­ಟದ ಮಾದರಿಯಲ್ಲಿ ಜನಾಂ­ದೋಲನ ರೂಪಿ­­ಸ­­ಲಾಗುವುದು. ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ನಿಟ್ಟಿ­ನಲ್ಲಿ ಕಸಾಪದ ನಿಲುವುಗಳನ್ನು ಸರ್ಕಾರ ಪರಿಗಣಿಸ­ದಿ­ದ್ದರೆ ಮುಂದಿನ ಸಮ್ಮೇಳನ ನಡೆಸದಿರಲು ನಿರ್ಧ­ರಿಸ­ಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.