ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ, ನಾಡಿನ ಮುಂದಿನ ಅಧಿಕಾರ ಹಿಡಿಯುವ ಸಂಭ್ರಮದಲ್ಲಿ ದೇವಸ್ಥಾನಗಳು, ಮಠಗಳ ಸುತ್ತಾಟ, ದೆಹಲಿ ನಾಯಕರ ಭೇಟಿಯಲ್ಲಿ ಮಗ್ನರಾಗಿದ್ದರೆ, ಮೈತ್ರಿ ಸರ್ಕಾರ ಪತನವಾಗದಂತೆ ಶಾಸಕರ ಹಿಂಡನ್ನು ಖಾಸಗಿ ಹೋಟೆಲೊಂದರಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಾತಿಗೆ ಸಿಕ್ಕಿದರು. ಅದೇ ವೇಳೆಗೆ ಸರಿಯಾಗಿ ಎಚ್.ಡಿ.ದೇವೇಗೌಡರಿಂದ ಅವರಿಗೆ ದೂರವಾಣಿ ಕರೆ ಬಂದಿತು. ಆ ಬಳಿಕ ಶಿವಕುಮಾರ್ ‘ಪ್ರಜಾವಾಣಿ’ ಜತೆ ಮಾತನಾಡಿದ್ದು ಇಲ್ಲಿದೆ:
* ನಿಮ್ಮ ಕಡು ವಿರೋಧಿ ಮುಖ್ಯಮಂತ್ರಿ ಆಗುತ್ತಿದ್ದಾರೆ. ನಿಮಗೆ ಆ ಅವಕಾಶ ಸಿಗಲಿಲ್ಲ. ಏನನ್ನಿಸುತ್ತದೆ?
ನನ್ನ ಅದೃಷ್ಟಕ್ಕಿಂತ ಕುಮಾರಸ್ವಾಮಿ ಅದೃಷ್ಟ ಗಟ್ಟಿಯಾಗಿದೆ. ಕೇವಲ 37 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿ ಆಗುತ್ತಿದ್ದಾರೆ. ದೇವೇಗೌಡರು ಪಕ್ಕಾ ಲೆಕ್ಕಾಚಾರದ ರಾಜಕಾರಣಿ. ಅವರ ನಿಗೂಢ ನಡೆಯನ್ನು ಯಾರೂ ಅರಿಯಲು ಸಾಧ್ಯವಿಲ್ಲ. ಲೋಕಸಭೆಯಲ್ಲಿ ಸಂಖ್ಯೆ ಇಲ್ಲದಿದ್ದರೂ ಅವರು ಪ್ರಧಾನ ಮಂತ್ರಿಯಾದರು. ಅವರ ಮಗ (ಕುಮಾರಸ್ವಾಮಿ) ಮುಖ್ಯಮಂತ್ರಿ ಆದರು. ಈಗ ಅದೇ ಸ್ಥಿತಿ ಬಂದಿದೆ. ಸಾರ್ವಜನಿಕ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ನಾನಿನ್ನೂ ಚಿಕ್ಕವ, ಮುಂದೆ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ.
* ಎರಡು ದಶಕಗಳಿಂದ ನಿಮ್ಮ ಮತ್ತು ಕುಮಾರಸ್ವಾಮಿ ಮಧ್ಯೆ ವೈಮನಸ್ಸು ಇತ್ತಲ್ಲವೇ?
ಹೌದು, ಒಂದು ಸಂದರ್ಭದಲ್ಲಿ ನಾವಿಬ್ಬರೂ ಅಕ್ಷರಶಃ ಹೊಡೆದಾಡುವ ಹಂತ ತಲುಪಿದ್ದೆವು. ಆತ ತುಂಬಾ ಅಹಂಕಾರಿ ಮನುಷ್ಯ. ಕುಮಾರಸ್ವಾಮಿ ಮತ್ತು ದೇವೇಗೌಡರು ನಾನು ಬೆಳೆಯುವುದನ್ನು ಸಹಿಸುತ್ತಿರಲಿಲ್ಲ. ನನ್ನ ವಿರುದ್ಧ ಹಲವು ಮೊಕದ್ದಮೆಗಳನ್ನು ದಾಖಲಿಸಿದ್ದರು. ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಬೇಕು ಎಂದು ಪಕ್ಷವೇ ನಿರ್ಧರಿಸಿದಾಗ ನಾನು ಏನು ಮಾಡಲು ಸಾಧ್ಯ ಹೇಳಿ?
* ಅವರಿಬ್ಬರನ್ನೂ ಈಗ ನೀವು ನಂಬುತ್ತೀರಾ?
ಪಕ್ಷದ ನಿರ್ಧಾರವನ್ನು ಮನಃಪೂರ್ವಕ ಒಪ್ಪಿಕೊಂಡಿದ್ದೇನೆ ಅಷ್ಟೆ. ನನ್ನನ್ನು ಮತ್ತು ನಮ್ಮ ಪಕ್ಷದವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಅವರಿಗೆ ಬಿಟ್ಟಿದ್ದೇನೆ. ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಎಂತಹ ಕಷ್ಟಕಾಲ ಬಂದರೂ ಅದನ್ನು ಎದುರಿಸಿ ಹೋರಾಡಿದ್ದೇನೆ.
* ಈ ಮೈತ್ರಿ ಎಷ್ಟು ದಿನ ಉಳಿಯಬಹುದು ಎಂಬ ಚಿಂತೆ ಜನರನ್ನು ಕಾಡುತ್ತಿದೆ?
ಅತ್ಯಂತ ಕಷ್ಟ ಎಂಬುದು ನಿಜ. ದೇಶ ಮತ್ತು ಪಕ್ಷದ ಹಿತಾಸಕ್ತಿಯಿಂದ ನಾವು ಒಟ್ಟಿಗೆ ಹೆಜ್ಜೆ ಹಾಕಬೇಕಾಗಿದೆ. ಅವರು ರಾಜಕೀಯ ಪಕ್ವತೆಯನ್ನು ಮೆರೆಯಬೇಕು. ನಾನು ನನ್ನ ಪ್ರತಿಷ್ಠೆಯನ್ನು ನುಂಗಿಕೊಂಡಿದ್ದೇನೆ. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಸೋಲಿಸಲು ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕೆ ಇಳಿಸಲು ಹೇಳಿದವನೇ ನಾನು. ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವದ ಮನುಷ್ಯ ಯೋಗೇಶ್ವರ್. ಈಗ ಕುಮಾರಸ್ವಾಮಿ ತೆರವು ಮಾಡಿರುವ ರಾಮನಗರ ಕ್ಷೇತ್ರದಲ್ಲಿ ಅನಿತಾ ಸ್ಪರ್ಧಿಸಲಿ ದ್ದಾರೆ. ಜಮೀರ್ ಅಹಮದ್ ನಡುವಿನ ವೈಮನಸ್ಯ ದೂರ ಮಾಡಿ, ಅವರ ಸಂಬಂಧಕ್ಕೆ ತೇಪೆ ಹಾಕಿದವನೂ ನಾನೇ. ಕಹಿಯನ್ನು ಬಹಳ ಕಾಲ ಇಟ್ಟುಕೊಳ್ಳಬೇಡಿ ಎಂದು ಹೇಳಿದ್ದೇನೆ. ಎಲ್ಲರೂ ಒಟ್ಟಿಗೆ ಹೋಗುವುದರಿಂದ ಸರ್ಕಾರವೂ ಸಮಸ್ಯೆ ಇಲ್ಲದೆ ಮುನ್ನಡೆಯಬಹುದು. ಮೈತ್ರಿ ಸರ್ಕಾರ ಸರಾಗವಾಗಿ ನಡೆಯಬೇಕಿದ್ದರೆ, ಅದರ ಫಲ ಸಿಗಬೇಕಾದರೆ ಕುಮಾರಸ್ವಾಮಿ ಮತ್ತು ನಾನು ಒಟ್ಟಿಗೇ ಕೆಲಸ ಮಾಡಬೇಕು. ಒಂದು ವೇಳೆ ಅಧಿಕಾರದ ಹಮ್ಮಿನಲ್ಲಿ ನನ್ನ ಜತೆ ಸಹಕರಿಸದೇ ಇದ್ದರೆ, ಪ್ರಯೋಜನ ಆಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.