ಕೆ.ಆರ್.ಪೇಟೆ: ‘ಜೆಡಿಎಸ್ ಅಧ್ಯಕ್ಷ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವು ಮುಂಗುಸಿ ಇದ್ದಂತೆ. ಅವರಿಬ್ಬರೂ ಒಂದಾಗುತ್ತಾರೆ ಎಂದರೆ ಅದನ್ನು ಜನರು ನಂಬುವುದಿಲ್ಲ. ಜನರಿಗೆ ಮಂಕುಬೂದಿ ಎರಚಿ ಉಪಚುನಾವಣೆ ಗೆಲ್ಲಲು ಹೊರಟಿರುವ ಎರಡೂ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಶಾಸಕ ಆರ್.ಅಶೋಕ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಮೊನ್ನೆ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕುಳಿತು ಮಾತನಾಡಿದ್ದಾರೆ. ಹಾವು- ಮುಂಗುಸಿ ಎಂದಾದರೂ ಒಂದಾಗುತ್ತವೆಯೇ? ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ವಿಧಾನ ಸಭಾ ಚುನಾವಣೆಯ ನಂತರ ಅಪವಿತ್ರ ಮೈತ್ರಿ ಮಾಡಿಕೊಂಡು ಈ ತಾಲ್ಲೂಕಿನ ಸುಪುತ್ರ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದಾರೆ. ಜನಾದೇಶ ತಿರಸ್ಕರಿಸಿ ಸರ್ಕಾರ ರಚಿಸಿದ್ದಾರೆ’ ಎಂದರು.
‘ಸರ್ಕಾರ ಬಂದು ಐದು ತಿಂಗಳಾದರೂ ಸರ್ಕಾರ ಇದೆ ಎಂಬ ನಂಬಿಕೆಯೇ ರಾಜ್ಯದ ಜನರಿಗೆ ಇಲ್ಲ. ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಏದುಸಿರು ಬಿಡುತ್ತಿದ್ದಾರೆ. ಇದರಿಂದ ರೈತರು ಹತಾಶರಾಗಿ ಆತ್ಮಹತ್ಯೆಗೆ ಇಳಿದಿದ್ದಾರೆ. ಮಂಡ್ಯ ಜಲ್ಲೆಯೊಂದರಲ್ಲೇ 250ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.
‘ಕಾಂಗ್ರೆಸ್ ಪಕ್ಷ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್‌ಗೆ ಶರಣಾಗಿದೆ. ಇದು ರಾಷ್ಟ್ರೀಯ ಪಕ್ಷದ ಲಕ್ಷಣವಲ್ಲ . ಇದರ ಲಾಭವನ್ನು ಬಿಜೆಪಿ ಕಾರ್ಯಕರ್ತರು ಸದುಪಯೋಗ ಮಾಡಿಕೊಳ್ಳಬೇಕು. ಈ ಉಪ ಚುನಾವಣೆ ನ್ಯಾಯ-ಅನ್ಯಾಯಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದೆ’ ಎಂದರು.
ತಾಲ್ಲೂಕು ಅಧ್ಯಕ್ಷ ಬೂಕಹಳ್ಳಿ ಮಂಜು , ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ಹಾಸನ ಜಿಲ್ಲಾ ಅಧ್ಯಕ್ಷ ಯೋಗಾ ರಮೇಶ್, ಮುಖಂಡರಾದ ತೋಟಪ್ಪಶೆಟ್ಟಿ , ಮಾದ್ಯಮ್ ಪ್ರಮುಖ್, ಬೂಕನಕೆರೆ ಮಧುಸೂಧನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.