ADVERTISEMENT

ದೇಶ ಸುಧಾರಣೆಗೆ ಸಂವಿಧಾನ ಬದಲಾವಣೆ ಅಗತ್ಯ: ಸುಬ್ರಮಣಿಯನ್ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST
ದೇಶ ಸುಧಾರಣೆಗೆ ಸಂವಿಧಾನ ಬದಲಾವಣೆ ಅಗತ್ಯ: ಸುಬ್ರಮಣಿಯನ್ ಸ್ವಾಮಿ
ದೇಶ ಸುಧಾರಣೆಗೆ ಸಂವಿಧಾನ ಬದಲಾವಣೆ ಅಗತ್ಯ: ಸುಬ್ರಮಣಿಯನ್ ಸ್ವಾಮಿ   

ದಾವಣಗೆರೆ: ಭಾರತ ದೇಶ ಸುಧಾರಣೆ ಆಗಬೇಕಾದರೆ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಂವಿಧಾನವನ್ನು ಆಮೂಲಾಗ್ರ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದರು.

ಹಿಂದೂ ಜಾಗರಣ ವೇದಿಕೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಹಿಂದುತ್ವಕ್ಕಾಗಿ ವಕೀಲರು~ ರಾಜ್ಯಬ ಮಟ್ಟದ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ದೇಶವೂ ಜಾತ್ಯತೀತ ಸಂವಿಧಾನ ಹೊಂದಿವೆ. ಪ್ರತಿ ಸಂವಿಧಾನದ ಆರಂಭದಲ್ಲೂ ಕ್ರೈಸ್ತರಾದ ನಾವೆಲ್ಲರೂ, ಆಂಗ್ಲರಾದ ನಾವೆಲ್ಲರೂ ಎಂದು ಪ್ರತಿಪಾದಿಸಲಾಗಿದೆ. ಆದರೆ, ಶೇ.80ರಷ್ಟು ಹಿಂದೂಗಳನ್ನು ಹೊಂದಿರುವ ಭಾರತದಲ್ಲಿ ಮಾತ್ರ ನಾವೆಲ್ಲರೂ ಭಾರತೀಯರು ಎಂದು ಆರಂಭಿಸುತ್ತೇವೆ. ಅದರ ಬದಲು ಹಿಂದೂಗಳಾದ ನಾವೆಲ್ಲರೂ ಎಂದು ಬದಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಏಕ ರೀತಿಯ ನಾಗರಿಕ ಸಂಹಿತೆ ಜಾರಿಗೆ ತರಬೇಕು. ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿರುವ 370ನೇ ವಿಧಿ ರದ್ದು ಮಾಡಬೇಕು. ದೇಶದಲ್ಲಿರುವ ನಿರುಪಯುಕ್ತ ಪ್ರಾರ್ಥನಾ ಮಂದಿರಗಳನ್ನು ನಾಶಪಡಿಸಬೇಕು. ಅಲ್ಪಸಂಖ್ಯಾತರ ವಿಷಯದಲ್ಲಿರುವಷ್ಟೇ ಕಾಳಜಿಯನ್ನು ಬಹುಸಂಖ್ಯಾತರ ವಿಷಯದಲ್ಲೂ ತೋರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು. ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ.

ಅದಕ್ಕಾಗಿ ಕೇಂದ್ರದಲ್ಲಿ ಹಿಂದೂ ಭಾವನೆಗಳಿಗೆ ಬೆಲೆ ನೀಡುವ ಪಕ್ಷಕ್ಕೆ ಬಹುಮತ ನೀಡಬೇಕು. ಅವೈಜ್ಞಾನಿಕ ಮೀಸಲಾತಿ ನೀತಿ ಕೈಬಿಟ್ಟು, ಪರಿಷ್ಕೃತ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಕಟದಲ್ಲಿ ಹಿಂದುತ್ವ: ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ಜೀ ಭಾಗವತ್ ಅವರು, ಹಿಂದುತ್ವ ಸಂಕಷ್ಟದಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಮೌಲ್ಯಗಳ ಆಧಾರದ ಮೇಲೆ ರಾಷ್ಟ್ರದ ಪುನರ್ ನಿರ್ಮಾಣ ಮಾಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ದೇಶದ ಪ್ರಾಚೀನ ಮೌಲ್ಯಗಳ ಆಧಾರದ ಮೇಲೆ ನಮ್ಮ ಜೀವನ ರೂಪಿಸಿಕೊಳ್ಳಬೇಕಿದೆ. ಹಿಂದುತ್ವ ನಮ್ಮ ಜೀವನಶೈಲಿಯಾಗಿದ್ದು ಅದು ಎಲ್ಲರನ್ನೂ ಒಗ್ಗೂಡಿಸುವ, ಸರ್ವರ ಕಲ್ಯಾಣ ಬಯಸುವ ಗುಣವನ್ನು ಹೊಂದಿದೆ. ಆದರೆ ಈಗ ಹಿಂದುತ್ವದ ಮೇಲೆಯೇ ಆಕ್ರಮಣ ನಡೆಯುತ್ತಿದೆ.  ಅಲ್ಪಸಂಖ್ಯಾತವಾದದ ಮೂಲಕ ನಿರ್ದಿಷ್ಟ ಕೋಮಿನವರನ್ನು ಓಲೈಸುವ ಕೆಲಸ ನಡೆಯುತ್ತಿದೆ ಎಂದು ವಿಷಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.