ಮೈಸೂರು: ‘ನನ್ನ ಮೂವರು ಮಕ್ಕಳಿಗಿಂತ ಆನೆ ‘ಅರ್ಜುನ’ನ ಮೇಲೆ ಬಹಳ ಪ್ರೀತಿ. ಅವನೇ ನನ್ನ ದೊಡ್ಡ ಮಗ’ ಎಂದು ಹೆಮ್ಮೆಯಿಂದ ಹೇಳಿದರು ಮಾವುತ ದೊಡ್ಡಮಾಸ್ತಿ.
ಕಳೆದ 16 ವರ್ಷಗಳಿಂದ ಅರ್ಜುನನ ಒಡನಾಟದಲ್ಲಿರುವ ದೊಡ್ಡಮಾಸ್ತಿ ಅವರು, ಅರಮನೆ ಆವರಣದಲ್ಲಿ ದಸರಾ ಗಜಪಡೆಯೊಂದಿಗೆ ಬೀಡು ಬಿಟ್ಟಿದ್ದು, ಗುರುವಾರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದರು.
‘ನನಗೆ ಸಣ್ಣಪ್ಪ, ಬೋಳ, ಗಣೇಶ ಎಂಬ ಮೂವರು ಮಕ್ಕಳಿದ್ದಾರೆ. ಇವರಿಗಿಂತ ದೊಡ್ಡ ಮಗ ಅರ್ಜುನ. ಅವನೇ ನಮ್ಮ ಆಸ್ತಿ. ತಪ್ಪು ಮಾಡಿದ್ರೆ ಅಂಕುಶ ತೋರಿಸ್ತೇನೆ ಅಷ್ಟೆ, ಹೊಡೆಯಲ್ಲ. ಶನಿವಾರ ಬೆಳಿಗ್ಗೆ ಸ್ನಾನ ಮಾಡಿಸಿದ ಮೇಲೆ ಪೇಂಟ್ ಆಗುತ್ತದೆ. ಆಮೇಲೆ ಆಭರಣ ತೊಡಿಸಿ, ಗಾದಿ, ಮಾಲ್ದಾ ಹಾಕಿ ಸಜ್ಜುಗೊಳಿಸುತ್ತೇವೆ. ಅಲ್ಲಿಂದ ಅಂಬಾರಿ ಕಟ್ಟುವ ಜಾಗಕ್ಕೆ ಕರೆದೊಯ್ಯುತ್ತೇವೆ.
‘ಜಂಬೂಸವಾರಿ ದಿನ ನಿಶಾನೆ ಆನೆ ‘ಬಲರಾಮ’ ಮುಂದಿರುತ್ತದೆ. ಇದರ ಹಿಂದೆ ಮೊಹಬ್ಬತ್ ಆನೆ ‘ಹರ್ಷ‘. ಅದರ ಹಿಂದೆ ಆನೆಗಾಡಿ ಜವಾಬ್ದಾರಿ ‘ಅಭಿಮನ್ಯು’ವಿನದು. ಆಮೇಲೆ ಅಂಬಾರಿ ಹೊತ್ತ ಅರ್ಜುನ. ಅದರ ಬಲಗಡೆ ‘ಕಾವೇರಿ’, ಎಡಗಡೆ ‘ಮೇರಿ’. ಇವುಗಳ ಹಿಂದೆ ಸಾಲಾನೆ. ಅಂಬಾರಿಯೊಂದಿಗೆ ಅರ್ಜನನನ್ನು ಕರೆದುಕೊಂಡು ಹೋಗುವ ಮುನ್ನ ತಾಯಿ ಚಾಮುಂಡೇಶ್ವರಿಗೆ ಕೈ ಮುಗಿವೆ. ಆಮೇಲೆ ಬನ್ನಿಮಂಟಪದವರೆಗೆ ಹೋಗಿಬಂದರೆ ಮತ್ತೊಂದು ದಸರಾ ಮುಗಿದ ಹಾಗೆ. ಇದಕ್ಕಾಗಿ ಕಾಯುತ್ತಿದ್ದೇನೆ.
‘ಈಗಾಗಲೇ ಅರ್ಜುನ ಪೆಸಲ್ ಆಹಾರ ತಿಂದು ತಯಾರಾಗುತ್ತಿದ್ದಾನೆ. ಭತ್ತ, ಕಾಯಿ, ಬೆಲ್ಲ, ಹಸಿಹುಲ್ಲು, ಆಲದ ಸೊಪ್ಪು ಕೊಡ್ತೇವೆ. ಆಮೇಲೆ ಹಿಂಡಿ, ಕುಸುಬಲಕ್ಕಿ, ಗೋಧಿ, ಉದ್ದು, ಹೆಸರು, ಬೆಣ್ಣೆ, ತರಕಾರಿ ಹಾಕಿ ಬೇಯಿಸಿದ್ದನ್ನು ದಿನವೂ ಬೆಳಿಗ್ಗೆ, ಸಂಜೆ ತಿನ್ನಿಸ್ತೇವೆ. ಎಲ್ಲ ಆನೆಗಿಂತ ಅರ್ಜುನನೇ ಜಾಸ್ತಿ ತಿಂತಾನೆ. ತಂಪಾಗಿರಲೆಂದು ಹರಳೆಣ್ಣೆ ಹಚ್ತೇವೆ.
ರಾತ್ರಿ 10ಕ್ಕೆ ಮಲಗಿದ್ರೆ ಬೆಳಗಿನ ಜಾವ ಒಂದೂವರೆಗೆ ಏಳ್ತಾನೆ. ಅವನ ಪಕ್ಕದಲ್ಲೇ ಮಲಗಿರ್ತೀನಿ. ಯಾಕೆಂದ್ರೆ ಸರಪಣಿ ಕಳಚಿದ್ರೆ? ಏನೂ ಅಪಾಯ ಆಗದೆ ಇರ್ಲಿ ಅಂತ ಸದಾ ಅವನ ಪಕ್ಕ ಮಲಗ್ತೇನೆ. ಒಮ್ಮೊಮ್ಮೆ ರಾತ್ರಿ ಎಚ್ಚರವಾಗದಾಗ ಸೊಂಡಿಲಿನಿಂದ ಎಬ್ಬಿಸ್ತಾನೆ. ಆಗ ಹುಲ್ಲು ಹಾಕಿ, ನೀರು ಕುಡಿಸಿದ್ರೆ ಆಯ್ತು. ಬೆಳಿಗ್ಗೆ ಆರು ಗಂಟೆಯವರೆಗೆ ಏಳಲ್ಲ. ಎದ್ದ ಕೂಡಲೇ ಆಹಾರ. ಆಮೇಲೆ ಸ್ನಾನ, ತಾಲೀಮು. ಹೀಗಿರುವ ಅರ್ಜುನ ಮೂರನೇ ಬಾರಿಗೆ ಅಂಬಾರಿ ಹೊರುತ್ತಿದ್ದಾನೆ.
‘16 ವರ್ಷಗಳ ಹಿಂದೆ ಬಳ್ಳೆ ಹತ್ತಿರ ಗುಂಡಿಗೆ (ಅಂದರೆ ನಾವು ಕಪ್ ಅಂತೇವೆ) ಅರ್ಜುನ ಬಿದ್ದಾಗ ಆರೂವರೆ ಅಡಿ ಇದ್ದ. ಈಗ 10 ಅಡಿ ಇದ್ದಾನೆ. ಇವನಿಗಿಂತ ದ್ರೋಣ ಎತ್ತರವಾಗಿದ್ದ. ದ್ರೋಣನಿಗಿಂತ ರಾಜೇಂದ್ರ ಎತ್ತರ. ಇವರೆಲ್ಲ ಅಂಬಾರಿ ಹೊತ್ತಿದ್ದಾರೆ.
‘ನನ್ನ ತಾತ ಲಚ್ಚಿಮ ಹಾಗೂ ಅಪ್ಪ ಮಾಸ್ತಿ ಸೆಲ್ವಂ ಮಾವುತರಾಗಿದ್ದರು. ನಾನು ಇಸ್ಕೂಲಿಗೆ ಹೋಗಲಿಲ್ಲ. ನಮ್ಮದು ಆನೆ ನೋಡಿಕೊಳ್ಳುವ ವಂಶ. ಆನೆ ಜತೆನೇ ಬೆಳೆದೆ. ವಯಸ್ಸಿಗೆ ಬಂದ ಮೇಲೆ ಬಸಪ್ಪ ಸಾಹೇಬ್ರು ಕರೆದು ಕಾವಾಡಿ ಕೆಲ್ಸ ಕೊಟ್ರು. ಮಾವುತ ಆದ ಮೇಲೆ ‘ಹುಸೇನ್’ ಆನೆ ನೋಡಿಕೊಂಡೆ. ಅದು ಜರ್ಮನಿಗೆ ಹೋಯ್ತು. ಆಮೇಲೆ ‘ಭಾಸ್ಕರ್’ ಆನೆ. ಅದು ದಸರಾಕ್ಕೆ 4–5 ಬಾರಿ ಬಂದಿತ್ತು. ಮೂರನೆಯದು ‘ರಾಮ’. ನಾಲ್ಕನೆಯದೇ ‘ಅರ್ಜುನ’. ನನ್ನ ಹತ್ರ ಬರುವ ಮುನ್ನ ಅರ್ಜುನ ಬಹಳ ತುಂಟ ಇದ್ದ. ಈಗ ತುಂಟಾಟ ಕಡಿಮೆ ಆಗಿದೆ. 53–54 ವಯಸ್ಸಾದರೂ ಗಟ್ಟಿಯಾಗಿದ್ದಾನೆ.
ವಜ್ರಮುಷ್ಟಿ ಕಾಳಗ ಇಂದು
ಪ್ರತಿ ವರ್ಷ ವಿಜಯದಶಮಿಯಂದು ಪ್ರದರ್ಶನಗೊಳ್ಳುವ ವಜ್ರಮುಷ್ಟಿ ಕಾಳಗವು ಶುಕ್ರವಾರ ಅಂಬಾವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯಲಿದೆ. ಈ ಕಾಳಗದಲ್ಲಿ ನಾಲ್ವರು ಜಟ್ಟಿಗಳ ಎರಡು ಜೋಡಿಗಳನ್ನು ನಿಗದಿಪಡಿಸಲಾಗಿದೆ. ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಮೈಸೂರಿನ ಮಾಧವಜಟ್ಟಿ ಮತ್ತು ಚನ್ನಪಟ್ಟಣದ ಸುಬ್ಬಾಜಟ್ಟಿಯವರನ್ನು ಜೋಡಿ ಮಾಡಲಾಯಿತು. ಬೆಂಗಳೂರು ವಾಸುದೇವ ಜಟ್ಟಿ ಮತ್ತು ಚಾಮರಾಜನಗರ ಮಹೇಶ ಜಟ್ಟಿಯವರನ್ನು ಜೊತೆ ಮಾಡಲಾಯಿತು.
‘ಶುಕ್ರವಾರ ಬೆಳಿಗ್ಗೆ ನವಮಿ ಮುಗಿಯತ್ತದೆ. ಮಧ್ಯಾಹ್ನದ ನಂತರ ದಶಮಿ ಕೂಡಲಿದೆ. ಆದ್ದರಿಂದ ಸಂಜೆ 4ರಿಂದ 5.30ವರೆಗೆ ವಜ್ರಮುಷ್ಟಿ ಕಾಳಗ ನಡೆಯಲಿದೆ. ಅದಕ್ಕಾಗಿ ಜಟ್ಟಿ ಕುಟುಂಬಗಳ ನಾಲ್ವರನ್ನು ಆಯ್ಕೆ ಮಾಡಿ ಜೊತೆ ಕಟ್ಟಲಾಗಿದೆ’ ಎಂದು ವಸ್ತಾದ್ ಎಂ.ಎನ್. ತಿಲಕ್ ಜಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ನಾಳೆ ಜಂಬೂಸವಾರಿ
ನಾಡಹಬ್ಬ ಮೈಸೂರಿನ ದಸರಾ ಆಕರ್ಷಣೆಯಾದ ಜಂಬೂಸವಾರಿ ಶನಿವಾರ (ಅ. 4) ನಡೆಯಲಿದೆ.ಅಂದು ಮಧ್ಯಾಹ್ನ 1.01ರಿಂದ 1.31 ಗಂಟೆಯೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದೀಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸುವರು. ನಂತರ ಜಂಬೂಸವಾರಿ ಮೆರವಣಿಗೆಗೆ ಅಂದು ಮಧ್ಯಾಹ್ನ 1.40ರಿಂದ 2.10 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್, ಎಚ್.ಎಸ್. ಮಹದೇವಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಭಾಗವಹಿಸುವರು. ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತನ್ನು ರಾಜ್ಯಪಾಲ ವಜುಭಾಯಿ ವಾಲಾ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಚಿವರು ಹಾಜರಿರುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.