ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಧರಣಿ ಕೈ ಬಿಡುವಂತೆ ಮಾಡಿದ ಮನವಿಗೆ ಅಂಗನವಾಡಿ ಕಾರ್ಯಕರ್ತೆಯರು, ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಸಂಘಟನೆಗಳ ಮುಖಂಡರ ಸಭೆಯಲ್ಲಿ ‘ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಸರ್ಕಾರ ಮುಕ್ತವಾಗಿದೆ. ಏ. 14ರ ಬಳಿಕ ಈ ಕುರಿತು ಸಭೆ ಕರೆದು ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಆದ್ದರಿಂದ, ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಮುಖಂಡರು ಧರಣಿ ಸ್ಥಳದಲ್ಲಿ ಮನವಿ ಮಾಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾನಿರತ ಮಹಿಳೆಯರು, ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸ್ಥಳ ಬಿಟ್ಟು ಕದಲುವುದಿಲ್ಲ. ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು.
ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ಇರುವುದರಿಂದ ಏ. ೧೪ರ ಬಳಿಕ ಸಭೆ ನಡೆಸುವುದಾಗಿ ಸಿಎಂ ಹೇಳಿದ್ದರು. ಏ. ೧೯ರಂದು ಸಭೆ ನಡೆಸುವುದಾಗಿ ಸಿಎಂ ಭರಸವೆ ಹಿನ್ನೆಲೆಯಲ್ಲಿ ಧರಣಿ ವಾಪಸ್ ಹಿಂಪಡೆಯುವ ನಿರೀಕ್ಷೆ ಇತ್ತು. ಆದರೆ, ಪ್ರತಿಭಟನಾಕಾರರು ಇದಕ್ಕೆ ಜಗ್ಗುತ್ತಿಲ್ಲ.
ಉಪ ಚುನಾವಣೆಯನ್ನು ನೆಪ ಮಾಡಿ ಭರವಸೆ ನೀಡದೆ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
‘ಮುಖ್ಯಮಂತ್ರಿ ಅವರು ನೀಡಿರುವ ಭರವಸೆಗೆ ಎಲ್ಲಾ ಕಾರ್ಯಕರ್ತೆಯರು ಒಪ್ಪುತ್ತಿಲ್ಲ. ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ, ಪ್ರತಿಭಟನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅವರು ಪ್ರತಿಭಟನಾ ನಿರತರ ಪರವಾಗಿ ನಿರ್ಧಾರ ಪ್ರಕಟಿಸಿದರು.
‘ನಾವು ಮುಖ್ಯಮಂತ್ರಿ ಅವರ ಮಾತನ್ನು ದಿಕ್ಕರಿಸುತ್ತಿಲ್ಲ. ನಮ್ಮ ಹೋರಾಟದ ಮೂಲಕ ಮಹಿಳೆಯರನ್ನು ಬಲಿ ಕೊಡಲು ಬಂದಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ಹಠ ಮಾಡುತ್ತಿಲ್ಲ. ಸಿಎಂ ಮಹಿಳೆಯರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು.
‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸೇವಕಿಯರ ಶೋಷಣೆ ಮಡುಗಟ್ಟಿದೆ, ಬರೀ ಭರವಸೆಗಳು ಬೇಡ. ಬೇಡಿಕೆಗಳನ್ನು ಈಡೇಡಿಸಲು ಚುನಾವಣೆಯನ್ನು ನೆಪವಾಗಿ ಅಡ್ಡ ತರುವುದು ಬೇಡ.
‘ಸಿದ್ಧ ಉಡುಪು ತಯಾರಿಕೆ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹೋರಾಟದ ವೇಳೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಅಂಥ ಹೋರಾಟಕ್ಕೆ ನಮ್ಮನ್ನು ತಳ್ಳಬೇಡಿ.
ನಾಳೇ ತೀವ್ರ ಸ್ವರೂಪ...
‘ನಾಳೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ರಾಜ್ಯದ ವಿವಿಧ ಮೂಲೆಗಳಿಂದ ಇನ್ನೂ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಟ್ಟು 20 ಸಾವಿರ ಮಂದಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮನ್ನು ಬಡಿದರೂ ಸರಿ, ಜೈಲಿಗೆ ಅಟ್ಟಿದರೂ ಸರಿ, ನಮ್ಮ ಹೋರಾಟ ನಿಲ್ಲದು. ನೀವು ಬಡಿದರೂ ನಾವು ಪ್ರತಿಯಾಗಿ ಬಡಿಯುವುದಿಲ್ಲ; ಬಡಿಸಿಕೊಳ್ಳುತ್ತೇವೆ.
ಜೈಲಿಗೆ ಹಾಕಿ
‘ನಾಳೆ 20 ಸಾವಿರ ಮಂದಿ ಪಾಲ್ಗೊಳ್ಳುತ್ತೇವೆ. ಎಲ್ಲರನ್ನೂ ಸೆಂಟ್ರಲ್ ಜೈಲಿಗೆ ಹಾಕಿ, ನೀವು ಜೈಲಿಗೆ ಹಾಕುತ್ತೀರಿ ಎಂದು ಯಾರೂ ಇಲ್ಲಿಂದ ಓಡಿ ಹೋಗುವುದಿಲ್ಲ. ಜೈಲಿನಲ್ಲಿ ಶೌಚಾಲಯ ಇತ್ಯಾದಿ ಸೌಲಭ್ಯವಿದೆ, ನೀರು, ಊಟವೂ ಸಿಗುತ್ತದೆ, ಅಲ್ಲಿಯೇ ಇರುತ್ತೇವೆ. ಆದರೆ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವರಲಕ್ಷ್ಮಿ ಅವರು ಪ್ರತಿಭಟನಾ ನಿರತರ ಪರವಾಗಿ ನಿರ್ಧಾರವನ್ನು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.