ADVERTISEMENT

ಧರ್ಮದಿಂದ ಹುಟ್ಟಿದ ಅಸಹನೆ ಅಪಾಯಕಾರಿ

ಅಸಹಿಷ್ಣುತೆ ನಿರ್ವಹಿಸುವಲ್ಲಿ ಸೋತ ಪ್ರಭುತ್ವ * ಸ್ಪಷ್ಟ ಸೈದ್ಧಾಂತಿಕ ಹೋರಾಟ ಅಗತ್ಯ * ಭಗವಾನ್‌ಗೆ ಪ್ರಶಸ್ತಿ: ಸಮರ್ಥನೆ

ವಿಶಾಲಾಕ್ಷಿ
Published 22 ಜನವರಿ 2016, 19:57 IST
Last Updated 22 ಜನವರಿ 2016, 19:57 IST
‘ಅಸಹಿಷ್ಣುತೆ’ ಗೋಷ್ಠಿಯಲ್ಲಿ ಮಾತನಾಡಿದ ಬಿ. ಎಲ್‌. ಶಂಕರ್ (ಬಲತುದಿ). ಜಿ.ಬಿ. ಹರೀಶ್‌, ನಟರಾಜ್‌ ಹುಳಿಯಾರ, ರಾಜೇಂದ್ರ ಚೆನ್ನಿ ಮತ್ತು ಕೆ.ಮರುಳಸಿದ್ಧಪ್ಪ ಭಾಗವಹಿಸಿದ್ದರು.
‘ಅಸಹಿಷ್ಣುತೆ’ ಗೋಷ್ಠಿಯಲ್ಲಿ ಮಾತನಾಡಿದ ಬಿ. ಎಲ್‌. ಶಂಕರ್ (ಬಲತುದಿ). ಜಿ.ಬಿ. ಹರೀಶ್‌, ನಟರಾಜ್‌ ಹುಳಿಯಾರ, ರಾಜೇಂದ್ರ ಚೆನ್ನಿ ಮತ್ತು ಕೆ.ಮರುಳಸಿದ್ಧಪ್ಪ ಭಾಗವಹಿಸಿದ್ದರು.   

ಧಾರವಾಡ: ಎಡ ಮತ್ತು ಬಲಪಂಥೀಯ ವಿಚಾರಧಾರೆಯನ್ನು ಮಗ್ಗುಲಾಗಿಸಿ, ‘ಮಧ್ಯಮ ಮಾರ್ಗ’ವೊಂದು ತೆರೆದುಕೊಳ್ಳುವ ನಿಟ್ಟಿನಲ್ಲಿ ಸಹನೀಯ ಬದುಕಿನ ಮೂಲಗಳ ಹುಡುಕಾಟ... ಎಲ್ಲೆಡೆ ತಣ್ಣಗೆ ಅಪಾಯದ ಅಲೆಗಳನ್ನೆಬ್ಬಿಸುತ್ತಲೇ ಇರುವ ಅಸಹಿಷ್ಣುತೆಯನ್ನು ನಿರ್ವಹಿಸುವ ಬಗೆಯನ್ನು ಕಂಡುಕೊಳ್ಳುವಲ್ಲಿ ಅಸ್ಪಷ್ಟ ದಿಕ್ಕಿನಲ್ಲಿಯೇ ಸಾಗಿದ ಆಲೋಚನೆಗಳು... ಸಮಾಜ ಹಾಗೂ ಸರ್ಕಾರದ ನಡೆಯನ್ನು ವಿಮರ್ಶಿಸುತ್ತಲೇ ತಾರ್ಕಿಕ ಅಂತ್ಯ ಕಾಣದ ವಿಚಾರ ಮಂಡನೆ... ಚರ್ಚೆಗೆ ಮುಂದಾದ ಸಭಿಕರಿಗೆ ಸಿಗದ ಸ್ಪಷ್ಟ ಉತ್ತರ...

ಧಾರವಾಡ ಸಾಹಿತ್ಯ ಸಂಭ್ರಮದ ಮೊದಲ ದಿನವಾದ ಶುಕ್ರವಾರ ನಡೆದ ‘ಅಸಹಿಷ್ಣುತೆ’ ಕುರಿತ ಮೊದಲ ಗೋಷ್ಠಿಯು ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದನ್ನಷ್ಟೇ ಒತ್ತಿ ಹೇಳಲು ಸೀಮಿತವಾಯಿತು.

ಅಸಹಿಷ್ಣುತೆಯ ಅಪಾಯಗಳನ್ನು ಮನಗಾಣಿಸುತ್ತಲೇ ಚರ್ಚೆಗೆ ಚಾಲನೆ ನೀಡಿದ ಗೋಷ್ಠಿಯ ನಿರ್ದೇಶಕ ರಾಜೇಂದ್ರ ಚೆನ್ನಿ, ಅದರ ಮರು ವ್ಯಾಖ್ಯಾನದ ಅಗತ್ಯವನ್ನು ಪ್ರತಿಪಾದಿಸಿದರು. ಮನುಷ್ಯ ಹತ್ಯೆಯನ್ನೇ ಕೇಂದ್ರೀಕರಿಸಿಕೊಂಡ ಈ ಪದಕ್ಕೆ ಹೊಸದೊಂದು ನುಡಿಗಟ್ಟು ಹುಡುಕಿಕೊಳ್ಳಬೇಕೆಂಬ ಇಂಗಿತ ವ್ಯಕ್ತಪಡಿಸಿದರು.

ಅಸಹನೆಯನ್ನೇ ಆಂತರ್ಯದಲ್ಲಿ ಹುದುಗಿಸಿಕೊಂಡ ಬಲಪಂಥೀಯ ಸಿದ್ಧಾಂತಕ್ಕೆ ರಾಜಕೀಯ ಅಧಿಕಾರ ಸಿಕ್ಕಾಗ ಅದು ಹಿಂಸೆಯ ರೂಪದಲ್ಲಿ ಅಭಿವ್ಯಕ್ತವಾಗುತ್ತಿದೆ. ಚರಿತ್ರೆಗಾದ ಗಾಯವನ್ನು ಪ್ರಶ್ನಿಸಿಕೊಳ್ಳುವ ಮೂಲಕ ಹಾಗೂ ಸ್ಪಷ್ಟ ಸೈದ್ಧಾಂತಿಕ ಹೋರಾಟದಿಂದ ಇದನ್ನು ಎದುರಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಅಸಹಿಷ್ಣುತೆ ನಿರ್ವಹಿಸುವಲ್ಲಿ ಪ್ರಭುತ್ವವು ಸೋತಿದೆ ಎಂದು ಆರೋಪಿಸಿದರು.

ರಾಜಕೀಯ ಅಧಿಕಾರ ಬಲ, ಕಾರ್ಪೊರೇಟ್ ಶಕ್ತಿ ಹಾಗೂ ಮಾಧ್ಯಮದ ಬೆಂಬಲದಿಂದ ಹುಟ್ಟು ಪಡೆಯುತ್ತಿರುವ ‘ವ್ಯವಸ್ಥಿತ ಹಾಗೂ ನಿರ್ದೇಶಿತ ಅಸಹನೆ’ ಬಗ್ಗೆ ಎಚ್ಚರಿಸಿದ ನಟರಾಜ್‌ ಹುಳಿಯಾರ್‌, ರಾಜಕಾರಣದಿಂದ ಹುಟ್ಟಿದ ಅಸಹನೆಯನ್ನು ಬದಲಾಯಿಸಬಹುದು. ಆದರೆ ಮನುಷ್ಯತ್ವ ಹಾಗೂ ಅಧ್ಯಾತ್ಮವನ್ನು ಕಳೆದುಕೊಂಡ ಧರ್ಮದಿಂದ ಹುಟ್ಟಿದ ಅಸಹನೆ ಅತ್ಯಂತ ಅಪಾಯಕಾರಿ ಎಂದು ವಿಶ್ಲೇಷಿಸಿದರು.

ಆಶಯ ಭಾಷಣದಲ್ಲಿ ಪ್ರೊ. ಕೆ.ಎಸ್. ಭಗವಾನ್  ಹೆಸರು  ಪ್ರಸ್ತಾಪಿಸದೇ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರಿಗೆ ಪ್ರಶಸ್ತಿ ನೀಡಿರುವುದಕ್ಕೆ ವಿಮರ್ಶಕ ಟಿ.ಪಿ. ಅಶೋಕ ಮಾಡಿದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ಭಗವಾನ್ ಮಾತುಗಳಲ್ಲಿ ತೀವ್ರತೆ ಇದೆ. ಆದರೆ ಅವರು ಅಕಾಡೆಮಿ ಪ್ರಶಸ್ತಿಗೆ ಅರ್ಹರಲ್ಲ ಎಂಬ ಮಾತನ್ನು ವಿರೋಧಿಸುವುದಾಗಿ ಹೇಳಿದರು.

ಪರಾಕಾಷ್ಠೆ  ತಲುಪಿರುವ ‘ಅಸಹನೆ’ಯ ವಿರುದ್ಧ ಚರ್ಚಿಸುವಾಗ ಸ್ಪಷ್ಟತೆ ಬೇಕು. ಆಲೋಚನೆಗಳಲ್ಲಿ ಸ್ಪಷ್ಟತೆ ಇಲ್ಲದೇ ಹೋದರೆ ಬರುವ ದಿನಗಳು ಇನ್ನೂ ಕರಾಳವಾಗಿರಲಿವೆ ಎಂದು ಕೆ. ಮರಳುಸಿದ್ಧಪ್ಪ ಎಚ್ಚರಿಸಿದರು. ನಂಬಿಕೆಯಂತೆ ನಡೆಯುವ ಅವಕಾಶ ನಿರಾಕರಿಸುವ ಈ ವಾತಾವರಣದಲ್ಲಿ ಅಸಹಿಷ್ಣುತೆ ಕುರಿತ ಚರ್ಚೆ ದಿಕ್ಕು ತಪ್ಪದಂತೆಯೂ ಎಚ್ಚರ ವಹಿಸಬೇಕು ಎಂದರು.

ತಾವು ಎಡ, ಬಲ ಎರಡೂ ವಾದವನ್ನು ಒಳಗೊಂಡ ಮಧ್ಯಮ ಮಾರ್ಗದ ಪರ ಎಂದು ಹೇಳಿಕೊಂಡ ಜಿ.ಬಿ. ಹರೀಶ್, ವಿಶ್ವವಿದ್ಯಾಲಯದ ಬುದ್ಧಿಜೀವಿಗಳಿಗೆ ಈ ದೇಶದ ಸಂಸ್ಕೃತಿ ಅರ್ಥವಾಗಿಲ್ಲ ಎಂದು ಟೀಕಿಸಿದರು. ಒಂದು ಸಮುದಾಯ ನಂಬಿರುವ ಪಠ್ಯಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಯನ್ನು ಖಂಡಿಸಿದರು. ಸಾಹಿತಿಗಳು, ಅಧ್ಯಾಪಕರಿಗೆ ತಾವು ಬಳಸುವ ಭಾಷೆಯ ಬಗ್ಗೆ ಎಚ್ಚರವಿರಬೇಕು. ಅಂಬೇಡ್ಕರ್ ಮಾಡಿದ ಟೀಕೆಗಳಲ್ಲಿ ಈ ಸಮಾಜವನ್ನು ಪರಿವರ್ತಿಸುವ ಕಾಳಜಿ ಇತ್ತು, ಈಗಿನವರ ಟೀಕೆಗಳು ಕೆರಳಿಸುವಂಥವು ಎಂದರು.

ಈ ಮಧ್ಯದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಎದ್ದು ನಿಂತು, ‘ಭಗವಾನ್ ಅವರನ್ನು ವಿರೋಧ ಮಾಡಿದವರು ಬಲಪಂಥಿಯ ಚೆಡ್ಡಿಗಳು’ ಎಂದರು. ಆಗ ಹರೀಶ್, ಚಂಪಾ ಬಳಸಿದ ಭಾಷೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಸೈದ್ಧಾಂತಿಕ ಸಂಘರ್ಷವೇ ಇಲ್ಲ!: ಜಾಗತೀಕರಣ, ಉದಾರೀಕರಣ. ಖಾಸಗೀಕರಣದಿಂದಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಇಲ್ಲದ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ವಿಧಾನಪರಿಷತ್‌ ಮಾಜಿ ಸಭಾಪತಿ ಬಿ. ಎಲ್. ಶಂಕರ್ ಅಭಿಪ್ರಾಯಪಟ್ಟರು.

ಆಚಾರ್ಯ ಕೃಪಲಾನಿ- ನೆಹರೂ, ಸುಭಾಷಚಂದ್ರ ಬೋಸ್-ಗಾಂಧಿ, ಮಾಸ್ತಿ-ಕುವೆಂಪು, ಅನಂತಮೂರ್ತಿ-ಲಂಕೇಶ್ ಅವರ ನಡುವಿನ ಸಂವಾದಗಳನ್ನು ಜವಾಬ್ದಾರಿಯುತ ಸಂವಾದಗಳು ಎಂದು ಗುರುತಿಸಿದ ಅವರು, ಸಂವಾದಗಳಿಲ್ಲದ ಇಂದಿನ ಸ್ಥಿತಿಗೆ ಕಳವಳ ವ್ಯಕ್ತಪಡಿಸಿದರು. ಸದನದ ಕಲಾಪ ನಡೆಯುತ್ತಿರುವ ರೀತಿ, ಅಲ್ಲಿನ ಯಾವ ಬಗೆಯ ಸುದ್ದಿಗಳಿಗೆ ಮಾಧ್ಯಮದಲ್ಲಿ ಆದ್ಯತೆ ಸಿಗುತ್ತಿದೆ ಎಂಬುದನ್ನು ವಿಡಂಬಿಸಿದರು.

ಸಂವಾದ: ‘ಸೆಕ್ಯುಲರ್ ಎಂಬುದು  ರಾಜಕೀಯ ಪಲ್ಲಟದಿಂದ ಕುಸಿದುಹೋಗುವಷ್ಟು ದುರ್ಬಲವೇ’ ಎಂಬ ರವೀಂದ್ರ ರೇಷ್ಮೆ ಅವರ ಪ್ರಶ್ನೆಗೆ ಉತ್ತರಿಸಿದ ರಾಜೇಂದ್ರ ಚೆನ್ನಿ, ‘ಅದಕ್ಕೆ ರಾಜಕೀಯ ಸ್ವರೂಪ ನೀಡಿದರೆ ತಾಳಿಕೆ ಬರುತ್ತದೆ’ ಎಂದರು. ‘ಕಲಬುರ್ಗಿ ಅವರ ಹತ್ಯೆ ನಂತರದ ಪ್ರಶಸ್ತಿ ವಾಪಸಾತಿ, ಪ್ರತಿಭಟನೆಗಳಲ್ಲಿ ಸಾಹಿತಿಗಳ ನಿಲು ವಿನಲ್ಲೇ ಸಂಶಯವಿದ್ದು, ಅವರಲ್ಲಿಯೇ ಸಂವಾದ ಸಾಧ್ಯವಾಗದಿರುವಾಗ ಪ್ರಭುತ್ವಕ್ಕೆ ನಿಮ್ಮ ಉತ್ತರವೇನು’ ಎಂಬ ಅನಿಲ್ ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬರಹಗಾರರಷ್ಟೇ ಅಲ್ಲ; ವಿಜ್ಞಾನಿಗಳು, ಕಲಾವಿದರು ತೋರುವ ಐತಿಹಾಸಿಕ ಪ್ರತಿಕ್ರಿಯೆಯಲ್ಲೂ ವಿಶ್ವಾಸಾರ್ಹತೆ ಇಲ್ಲ’ ಎಂದರು. ಈ ಉತ್ತರದಿಂದ ಸುಮ್ಮನಾಗದ ಸಭಿಕರು ಸ್ಪಷ್ಟ ಉತ್ತರಕ್ಕೆ ಆಗ್ರಹಿಸಿದರು.

‘ಅಸತ್ಯ-ಸುಳ್ಳುಗಳಿಗೆ ಪ್ರಚಾರ ಕೊಟ್ಟು, ಟಿಆರ್‌ಪಿ ಹೆಚ್ಚಿಸಿಕೊಂಡ ಮಾಧ್ಯಮಗಳೇ ಕಲಬುರ್ಗಿ ಅವರ ಹತ್ಯೆಗೆ ಸುಪಾರಿ ಕೊಟ್ಟಿದ್ದು’ ಎಂದು ಆರ್.ಜಿ. ಹಳ್ಳಿ ನಾಗರಾಜ್‌ ಆರೋಪಿಸಿದರು. ‘ಅಸ ಹಿಷ್ಣುತೆಯ ವಾತಾವರಣದಿಂದ ಹೊರ ಬರುವ ಮಾರ್ಗವೇನು’ ಎಂಬ ಸಭಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟರಾಜ್‌, ‘ಭಾರತ್- ಜೋಡೊ ಎಂಬ ಅಭಿಯಾನ ಮಾಡಬೇಕು. ಅಲ್ಪಸಂಖ್ಯಾತರಿಗೆ, ಸ್ತ್ರೀಯರಿಗೆ ಅಭದ್ರತೆ ಉಂಟಾಗಿದೆ. ಅತಿಭದ್ರತೆ ಇರುವ ಬಹು ಸಂಖ್ಯಾತರಿಗೆ ಎಲ್ಲಿಯ ಅಭದ್ರತೆ? ಎಲ್ಲ ಸಿಕ್ಕ ಮೇಲೆ ಅವರಿಗೆ ಗುರುತಿಸಿಕೊಳ್ಳುವ ಪ್ರಶ್ನೆ ಬಂದಿದೆ. ಇವರೆಲ್ಲರ ನಡುವೆ ಸಂವಾದ ಸಾಧ್ಯವಾಗಿಸಬೇಕು’ ಎಂದರು.
*
‘ಚಂಪಾ’ ಒಬ್ಬರೇ ಮಾತಾಡಬೇಕೇ?
ಇಂದು ಭ್ರಷ್ಟಾಚಾರ ಜೀವನ ಪದ್ಧತಿಯೇ ಆಗಿದೆ. ಲಂಚ ಸರ್ವೀಸ್ ಚಾರ್ಜ್ ಆಗಿದೆ. ಗ್ರಾ.ಪಂ. ಸದಸ್ಯರೊಬ್ಬರಿಗೆ ₹ 1 ಲಕ್ಷ ಕೊಡುವ, ವಿಧಾನ ಪರಿಷತ್ ಚುನಾವಣೆಗೆ ₹ 20ರಿಂದ 60 ಕೋಟಿ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ‘ಬಂ’ , ‘ಗುಂ’ ಗಳೆಲ್ಲ ಎಲ್ಲಿ ಹೋದರು? ಚಂಪಾ ಅವರೊಬ್ಬರೇ ಮಾತನಾಡಬೇಕೇ? ಉಳಿದವರೆಲ್ಲ ಸುಮ್ಮನಿದ್ದರೆ ಹೇಗೆ ಎಂದು ಭ್ರಷ್ಟ ರಾಜಕಾರಣಿಗಳನ್ನು ಸಹಿಸಿಕೊಂಡ ಚಿಂತಕರನ್ನು, ಬರಹಗಾರರನ್ನು, ಸಾಹಿತ್ಯ ವಲಯದ ಮೌನವನ್ನು ಬಿ.ಎಲ್. ಶಂಕರ್‌ ತರಾಟೆಗೆ ತೆಗೆದುಕೊಂಡರು.
*
‘ಅಸಹನೆ’ ಎಂಬ ಮಾರಬಲ್ಲ ಸರಕು
ಬರಗಾಲದಿಂದ ತತ್ತರಿಸಿದ ರೈತರು, ಸಂಕಷ್ಟದಲ್ಲಿರುವ ಜನರು, ಮಹಿಳೆಯರು ಹಾಗೂ ಶ್ರಮಿಕರು ಅಸಹನೆ ವ್ಯಕ್ತಪಡಿಸುತ್ತಿಲ್ಲ. ಆರಾಮಜೀವಿಗಳು ತಮ್ಮ ಅಸ್ತಿತ್ವದ ಪ್ರಶ್ನೆ ಎದುರಾದಾಗ ಇದನ್ನು ಹುಟ್ಟು ಹಾಕುತ್ತಾರೆ. ಮಾಧ್ಯಮಗಳು ಯಾವಾಗ ಇದಕ್ಕೆ ಹೆಚ್ಚಿನ ಪ್ರಚಾರಕ್ಕೆ ಮುಂದಾದವೋ ಆಗ ಅದು ಇನ್ನಷ್ಟು ಹೆಚ್ಚಿತು. ಈ ಪ್ರಚಾರದಿಂದಾಗಿಯೇ ಇದೊಂದು ಮಾರುಕಟ್ಟೆಯ ಸರಕೂ ಆಯಿತು ಎಂದು ನಟರಾಜ್ ಅಭಿಪ್ರಾಯಪಟ್ಟರು.
***
ಕಲಬುರ್ಗಿ ಕಂಡ ಕ್ಷಣ
ಧಾರವಾಡ: ಈ ಬಾರಿಯ ಧಾರವಾಡ ಸಾಹಿತ್ಯ ಸಂಭ್ರಮವನ್ನು ಡಾ. ಎಂ.ಎಂ.ಕಲಬುರ್ಗಿ ಅವರಿಗೆ ಅರ್ಪಿಸಲಾಯಿತು. ಸಂಭ್ರಮದ ಉದ್ಘಾಟನೆಗೆ ಅರ್ಪಣೆಯ ರೂಪದಲ್ಲಿ ಬೇಂದ್ರೆ ಅವರ ಅನುವಾದಿತ ಕವನ ‘ನಾಳೆ ಐತೆ ಮಹಾ ಮರಣ’ವನ್ನು ಡಾ. ಕಲಬುರ್ಗಿಅವರು ಲಾವಣಿ ಶೈಲಿಯಲ್ಲಿ ಓದಿದ ದೃಶ್ಯಾವಳಿ ತೋರಿಸಲಾಯಿತು.

ಜಿ.ಬಿ.ಜೋಶಿ ಸ್ಮಾರಕ ಟ್ರಸ್ಟ್ 2011ರ ಅ. 14ರಂದು ಇಲ್ಲಿನ ಆಲೂರು ವೆಂಟಕರಾವ್ ಭವನದಲ್ಲಿ ಆಯೋಜಿಸಿದ್ದ ಬೇಂದ್ರೆ ಕಾವ್ಯದ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ. ಕಲಬುರ್ಗಿ, ಬೇಂದ್ರೆ ಅನುವಾದಿಸಿರುವ ಫಿಲಿಪ್ಪೀನ್ಸ್‌ ಕವಿ ಬೋಸ್‌ ರಿಝುಲ್ಫರ್‌ ಅವರ ‘ಮೈ ಲಾಸ್ಟ್‌ ಜರ್ನಿ’ ಎಂಬ ಕವಿತೆಯನ್ನು ಲಾವಣಿ ರೂಪದಲ್ಲಿ ಪ್ರಸ್ತುತಪಡಿಸಿದ್ದರು.

ರಿಝುಲ್ಫರ್‌ ತನಗೆ ಮರಣ ದಂಡನೆ ನಿಗದಿಯಾದ ಮುನ್ನಾದಿನ ಬರೆದಿದ್ದ ಕವಿತೆ ಇದು. ಡಾ. ಕಲಬುರ್ಗಿ ಅವರು ಈ ಕವಿತೆಯನ್ನು ಓದಿದ ಧಾಟಿಯನ್ನು ಅಂದು ಪ್ರತ್ಯಕ್ಷ ವಾಗಿ ಕಾಣದ ಹಲವರು ಪರದೆ ಮೇಲೆ ಕಂಡು ಭಾವುಕರಾದರು. 

ಜನರು ಒಳ ಹೋದ ಮೇಲೆ  ಶೋಧ: ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಂತರ ನಡೆಯುತ್ತಿರುವ ಸಂಭ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಲೋಹ ಶೋಧಕವನ್ನೂ ಅಳವಡಿಸಲಾಗಿತ್ತು. ಆದರೆ ಲೋಹ ಶೋಧಕ ಅಳವಡಿಸುವ ಹೊತ್ತಿಗೆ ಕಾರ್ಯಕ್ರಮ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT