ಮಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಧರ್ಮವನ್ನೇ ಸಂಸ್ಕೃತಿ ಎಂದು, ಧರ್ಮ ಮತ್ತು ಧಾರ್ಮಿಕತೆ ಒಂದೇ ಎಂದು, ಧರ್ಮ ಮತ್ತು ರಾಷ್ಟ್ರೀಯತೆ ಒಂದೇ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸಹಬಾಳ್ವೆ ಸಾಗರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಧರ್ಮ ಮತ್ತು ಧಾರ್ಮಿಕತೆಯ ಹೇಳಿಕೆಗಳು ಸಂಸ್ಕೃತಿಗೆ ಇರುವ ವ್ಯಾಪ್ತಿಯನ್ನು ತಪ್ಪಿಸುತ್ತಿವೆ. ಸಂಸ್ಕೃತಿ ಎಂದರೆ ಜೀವನ ವಿಧಾನ. ರಾಜ್ಯದಲ್ಲಿ, ದೇಶದಲ್ಲಿ ಸಾವಿರಾರು ವಿಧದ ಸಂಸ್ಕೃತಿಗಳಿವೆ. ಧರ್ಮದ ಬಗ್ಗೆ ಮಾತನಾಡುವವರು ಧಾರ್ಮಿಕರೆ ಎಂಬುದನ್ನು ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡಿರುವವರು ಯೋಚಿಸಬೇಕು’ ಹೇಳಿದರು.
‘ಶಬರಿ ಗುಡಿಸಲು ಕಟ್ಟಿದ್ದಳೇ ಹೊರತು ದೇವಾಲಯವನ್ನಲ್ಲ. ಹಣ್ಣನ್ನು ಎಂಜಲು ಮಾಡಿ ರಾಮನಿಗೆ ಕೊಟ್ಟಳು ಎನ್ನುವ ಪ್ರತೀತಿ ಇದೆ. ಇದು ಧಾರ್ಮಿಕತೆಯ ಪ್ರತೀಕ. ಧಾರ್ಮಿಕತೆಯಲ್ಲಿ ಭಕ್ತಿ ಇದೆ, ಬೈಲಾ ಇಲ್ಲ. ಹಳ್ಳಿಗಳಲ್ಲಿ ಗರಿಕೆ, ಕಲ್ಲು ಪೂಜೆ ಇದೆ. ಆದರೆ ಬೆಂಗಳೂರಿನಲ್ಲಿ ಕಲ್ಲಿಟ್ಟರೆ ಅಲ್ಲಿ ಒಂದು ದೇವಾಲಯವಾಗಿ ಬಿಡುತ್ತದೆ. ಧರ್ಮ ಎನ್ನುವ ಸಂಸ್ಥೆಯ ಕೈಗೆ ಸಿಗುವ ಕಲ್ಲೇ ಬೇರೆ, ಧಾರ್ಮಿಕತೆಯ ಕಲ್ಲೇ ಬೇರೆ’ ಎಂದು ವಿಶ್ಲೇಷಿಸಿದರು.
‘ಬಲಪಂಥೀಯರು ಮತ್ತು ಎಡಪಂಥೀಯರೆಲ್ಲರೂ ಮೊದಲು ಜೀವಪಂಥೀಯರಾಗಬೇಕಿದೆ. ಧರ್ಮದ ನೆಪದಲ್ಲಿ ಸರ್ಕಾರ ಮತ್ತು ರಾಜಕಾರಣಿಗಳ ಅಪವ್ಯಾಖ್ಯಾನವನ್ನು ತಡೆಗಟ್ಟುವುದೇ ಸಹಬಾಳ್ವೆಯ ಸಾಗರದ ಆಶಯವಾಗಲಿ. ತೋಳು ಚಾಚುವ ಕಾಲ ಇದು. ಬದಲಿಗೆ ತೊಡೆ ತಟ್ಟುವ ಕಾಲವಲ್ಲ. ಮಾತುಕತೆಗೆ ಕರೆಯುತ್ತಿದ್ದೇವೆ. ಉತ್ತರ ಕೊಡುವ ಜವಾಬ್ದಾರಿ ನಿಮಗಿದೆ ಬನ್ನಿ ಉತ್ತರಿಸಿ’ ಎಂದು ಹೇಳಿದರು.
ಅಸಹಿಷ್ಣುತೆಯ ಇತಿಹಾಸವಿದೆ: ‘ಬುಕ್ಕನ ಶಾಸನದಲ್ಲಿ ಜೈನರಿಗೂ ವೈಷ್ಣವರಿಗೂ ಗಲಾಟೆಯಾಗಿತ್ತು. ಆಗಿನ ಕಾಲದ ರಾಜ ಜೈನರು ವೈಷ್ಣವರ ದೇವಾಲಯಗಳಿಗೆ ಬಣ್ಣ ಹಚ್ಚಬೇಕು ಮತ್ತು ವೈಷ್ಣವರು ಜೈನರ ದೇವಾಲಯಗಳಲ್ಲಿ ಪೂಜೆಗೆ ಸಹಾಯ ಮಾಡಬೇಕೆಂದು ಆದೇಶ ಮಾಡಿದ್ದನು. ಅವತ್ತಿನ ರಾಜಪ್ರಭುತ್ವವೂ ಸಹಿಷ್ಣುತೆಯನ್ನು ಬೋಧಿಸಿತ್ತು. ಆದರೆ ಇಂದು ಪ್ರಜಾಪ್ರಭುತ್ವಗಳು ಅಸಹಿಷ್ಣುತೆಯನ್ನು ಬೋಧಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿದರು.
ಅಭಿವೃದ್ಧಿ ಎಂಬುದೊಂದು ಜೋಕ್: ‘ದೇಶದಲ್ಲಿ ಜನರ ಪಾಲುದಾರಿಕೆ ಇಲ್ಲ. ಕೋಟ್ಯಾಧೀಶರ ಪಾಲುದಾರಿಕೆ ಮಾತ್ರ ಇದೆ. ಆದ್ದರಿಂದಲೇ ನಾನು ಅಭಿವೃದ್ಧಿಯನ್ನು ಜೋಕ್ ಎಂದು ಹೇಳುತ್ತೇನೆ. ಜನಸಾಮಾನ್ಯರಿಗೆ ಪಾಲು ಇಲ್ಲದಿರುವುದರಿಂದ ಅಭಿವೃದ್ದಿ ಒಂದು ವ್ಯಂಗ್ಯ’ ಎಂದು ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ಅಧ್ಯಕ್ಷತೆ ವಹಿಸಿದ್ದರು. ಯು.ಎಚ್. ಉಮ್ಮರ್, ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ), ಯೋಗೇಂದ್ರ ಯಾದವ್, ಬಿ.ಟಿ. ಲಲಿತಾ ನಾಯಕ್ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.