ಬೆಂಗಳೂರು: ‘ಸಂಪ್ರದಾಯದ ದಿಗ್ಬಂಧನ ಹಾಗೂ ಪುರುಷ ಪ್ರಧಾನ ಮನಸ್ಥಿತಿಯ ನಡುವೆಯೂ ಆ ಕಾಲಕ್ಕೆ ಸ್ವತಂತ್ರ ಮನಸ್ಸನ್ನು ಹೊಂದಿ ಅದನ್ನು ಸಾರಸ್ವತ ಲೋಕದ ಮೂಲಕ ಪ್ರಚುರ ಪಡಿಸಿದ ಧೀಮಂತ ಮಹಿಳೆ ಸರಸ್ವತಿ ಬಾಯಿ ರಾಜವಾಡೆ’ ಎಂದು ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.
ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರವು ನಗರದ ಸುಚಿತ್ರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸರಸ್ವತಿಬಾಯಿ ರಾಜವಾಡೆ ನೂರರ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳೆಯರ ಪ್ರಪಂಚವನ್ನು ತೆರೆದಿಡುತ್ತಲೇ ಒಟ್ಟು ಸಮಾಜವನ್ನು ಕಟ್ಟಿಕೊಡಲು ಪ್ರಯತ್ನಿಸಿದ ಕೊಡಗಿನ ಗೌರಮ್ಮ, ನಂಜನಗೂಡು ತಿರುಮಲಾಂಬ ಹಾಗೂ ಸರಸ್ವತಿ ಬಾಯಿ ರಾಜವಾಡೆ ಅವರು ಮಹಿಳಾ ಸಾಹಿತ್ಯ ಪರಂಪರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ’ ಎಂದು ತಿಳಿಸಿದರು.
‘ಹಾಡು, ಹಾರ್ಮೋನಿಯಂ, ಬರವಣಿಗೆ, ನಾಟಕ, ಸಿನಿಮಾ. ಪರ್ಯಟನೆ, ಭಾಷಣ, ಪತ್ರಿಕೆ ಹೀಗೆ ಸಾಹಿತ್ಯದ ಎಲ್ಲ ಅಭಿವ್ಯಕ್ತಿಗಳಲ್ಲೂ ತನ್ನನ್ನು ಕಂಡುಕೊಂಡು ಸಾಧನೆಯ ಬಗ್ಗೆ ನಿರ್ಮೋಹಿಯಾಗಿ ಬದುಕಿದ ಅವರ ಜೀವನ ಇತರರಿಗೆ ಅನುಸರಣೀಯ’ ಎಂದರು.
ಸಂತಳಂತೆ ಬದುಕು: ‘ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡರು, ಬರೀ ಬಡತನವನ್ನೇ ಉಂಡರು. ಮದುವೆಯಾಗಿ ಸುಖದ ಸುಪತ್ತಿಗೆಯನ್ನು ಕಂಡರು. ತನ್ನ 29ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡರು. ಅಪ್ರತಿಮ ಚೆಲುವು, ಅಪರಿಮಿತ ಬುದ್ಧಿ ಶಕ್ತಿ, ಓದು, ಬರವಣಿಗೆ ಎಲ್ಲದರ ನಡುವೆಯು ಸಂತಳಂತೆ ಬದುಕಿದರು’ ಎಂದು ಬಣ್ಣಿಸಿದರು.
‘ಇಡೀ ಜೀವನವನ್ನು ಬಹಳ ನಾಜೂಕು ಹಾಗೂ ಉಪಾಯ ಹಾದಿಯಿಂದಲೇ ನಿರ್ವಹಿಸಿದ್ದರು. ಅದೇ ಸಲಹೆಯನ್ನು ಇತರ ನೊಂದ ಹೆಣ್ಣುಮಕ್ಕಳಿಗೂ ನೀಡು ತ್ತಿದ್ದರು’ ಎಂದು ನೆನಪಿಸಿಕೊಂಡ ಅವರು, ‘ಗಿರಿಬಾಲೆ ಕಾವ್ಯನಾಮದ ಮೂಲಕವೇ ಅಕ್ಷರ ಪ್ರಪಂಚದಲ್ಲಿ ಬರಹಗಾರ್ತಿಯರ ದಾರಿಯನ್ನು ಸ್ಫುಟಗೊಳಿಸಿದ್ದರು’ ಎಂದರು.
ನಿರ್ಲಕ್ಷ್ಯಕ್ಕೆ ಒಳಪಟ್ಟ ರಾಜವಾಡೆ ಅವರ ಪ್ರತಿಭೆ: ಲೇಖಕಿ ಡಾ.ಬಿ.ಎನ್. ಸುಮಿತ್ರಾ ಬಾಯಿ ಮಾತ ನಾಡಿ, ‘ಮಹಿಳಾ ಚಳವಳಿ ಹಾಗೂ ಸಾಹಿತ್ಯ ಪರಂಪರೆಯು ವೈಚಾರಿಕ ನೆಲೆಯಲ್ಲಿ ವಿಶ್ಲೇಷಣೆಗೊ ಳ್ಳುತ್ತಿರುವ ದಿನಗಳಲ್ಲಿ ಉಡುಪಿಯಲ್ಲಿ ಶಾರಾ ದಾಂಬ ಗುಡಿಯನ್ನು ನಿರ್ಮಿಸಿ, ಆ ಚಟುವಟಿಕೆಯಲ್ಲಿ ಮಗ್ನರಾದ ರಾಜವಾಡೆ ಅವರ ಬೌದ್ಧಿಕ ಅಭಿವ್ಯಕ್ತಿ ಹಾಗೂ ಪ್ರತಿಭೆ ನಿರ್ಲಕ್ಷ್ಯಕ್ಕೆ ಒಳಪಟ್ಟಿತು’ ಎಂದು ವಿಷಾದ ವ್ಯಕ್ತಪಡಿಸಿದರು.
ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ‘ರಾಜವಾಡೆ ಅವರ ಶಾರಾದಾಂಬೆಯ ಪ್ರತಿಮೆ ಸ್ಥಾಪನೆಯು ಕೇವಲ ದೈವಕ್ಕೆ ಶರಣಾದ ಪ್ರಕ್ರಿಯೆ ಎಂದು ಅನಿಸುವುದಿಲ್ಲ. ಬದಲಿಗೆ ತನ್ನೊಳಗೆ ಇರುವ ಸ್ತ್ರೀಶಕ್ತಿಯ ವಿನ್ಯಾಸವಾಗಿ ಶಾರಾದಾಂಬೆಯನ್ನು ಆರಾಧಿಸಿ ಅನಾವರಣ ಮಾಡಿದಂತೆ ಭಾಸವಾಗುತ್ತದೆ’ ಎಂದರು.
ಆದಿಮ ಸ್ತ್ರೀವಾದದ ರೂಪಕ!: ‘ಹೊರಗಿನಿಂದ ತಿಳಿದುಕೊಂಡ, ಓದಿನಿಂದ ಲಭಿಸಿದ ಸ್ತ್ರೀವಾದಕ್ಕಿಂ ತಲೂ ಒಳಗಿನಿಂದಲೇ ಹುಟ್ಟುವ ಆದಿಮ ಸ್ತ್ರೀವಾದದ ರೂಪಕವಾಗಿ ರಾಜವಾಡೆಯವರು ಕಾಣುತ್ತಾರೆ. ಹಾಗೇ ನೋಡಿದರೆ ಪ್ರತಿ ಹೆಣ್ಣು ಮೂಲದಲ್ಲಿ ಬಂಡಾಯಗಾರ್ತಿಯೇ ಆಗಿರುತ್ತಾಳೆ’ ಎಂದರು.
‘ದೇವಿಯಿಂದ ದೇವಿಯೆಡೆಗೆ ನಡೆಸಿದ ಪರಿಭ್ರಮ ಣವಾದರೂ ಕೂಡ ವೈರಾಗ್ಯದ ಕಡೆಗಿನ ಚಲನೆಯಲ್ಲ. ಬದಲಿಗೆ ಶುದ್ಧಾಂಗ ಜೀವನ ಪ್ರೀತಿ ಯನ್ನು ಒಡಲೊಳಗೆ ಇರಿಸಿಕೊಂಡ ಪರಿ’ ಎಂದು ಬಣ್ಣಿಸಿದರು.
ಆ ಹೆಂಗಸು ಇನ್ನೂ ಬದುಕಿದ್ದಾಳೆಯೇ: ‘ಆ ಹೆಂಗಸು ಇನ್ನೂ ಬದುಕಿದ್ದಾಳೆಯೇ ಎಂದು ಹಿರಿಯ ಲೇಖಕರೊಬ್ಬರು ರಾಜವಾಡೆಯವರ ಬಗ್ಗೆ ಹೇಳಿದ್ದರು. ಈ ಬಗ್ಗೆ ಅವರಿಗೆ ಕೊನೆಯ ಗಳಿಗೆ ಯವರೆಗೂ ಆಕ್ರೋಶವಿತ್ತು. ಇದು ಎಲ್ಲ ವೈರಾಗ್ಯದ ನಡುವೆಯು ರಾಜವಾಡೆಯವರಿಗಿದ್ದ ಸ್ವತಂತ್ರ ಬೌದ್ಧಿಕ ಮನೋಧರ್ಮವನ್ನು ಅಭಿವ್ಯಕ್ತಿಸುತ್ತದೆ’ ಎಂದರು.
‘ಗಿರಿಬಾಲೆ’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಏಕವ್ಯಕ್ತಿ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.