ADVERTISEMENT

ನವಶಿಲಾಯುಗದ ಕುರುಹು ಪತ್ತೆ!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2015, 19:40 IST
Last Updated 24 ಅಕ್ಟೋಬರ್ 2015, 19:40 IST

ಹಾವೇರಿ: ‘ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕುಂದೂರು ಗ್ರಾಮದ ವರದಾ ನದಿ ದಡದ ಗುಡ್ಡದಲ್ಲಿನ ಗುಹೆಯೊಂದರಲ್ಲಿ ನವಶಿಲಾಯುಗದಂತೆ ಕಂಡು ಬಂದ ರೇಖಾಚಿತ್ರಗಳು ಪತ್ತೆಯಾಗಿವೆ. ಇದು ಜಿಲ್ಲೆಯಲ್ಲಿ ಪತ್ತೆಯಾದ ನವ ಶಿಲಾಯುಗದ ಚೊಚ್ಚಲ ರೇಖಾಚಿತ್ರಗಳು’ ಎಂದು ಉಪನ್ಯಾಸಕ ಪ್ರಮೋದ ಸೋ. ನಲವಾಗಲ, ಮಾರುತಿ ಸೋ. ಹೊಸತಳವಾರ ಮತ್ತು ಮಾಬುಷ ಎಸ್‌. ಲಮಾಣಿ ಅವರು ತಿಳಿಸಿದ್ದಾರೆ.

‘ಪಾಂಡವರು ವಾಸವಾಗಿದ್ದರು’ ಹಾಗೂ ‘ಕುಂತಿ (ಕುಂದಲೆಮ್ಮ) ದೇವಸ್ಥಾನ ಇದೆ’ ಎನ್ನಲಾದ ಕುಂದೂರಿನ ಬೆಟ್ಟದಲ್ಲಿ ಹುಡುಕಾಟ ಆರಂಭಿಸಿದ್ದೆವು. ಆಗ ಕುರಿಕಾಯುವ ಹುಡಗನೊಬ್ಬ ವರದಾ ನದಿ ದಡದಲ್ಲಿನ ಗುಡ್ಡದಲ್ಲಿ ಗುಹೆ ಇರುವ ಮಾಹಿತಿ ನೀಡಿದ್ದನು. ಆ ಗುಹೆಯ ಹೊರಭಾಗದಲ್ಲಿ ಕಲ್ಲಿನ ಮೇಲೆ ಸಿಂಹದ ಚಿತ್ರ ಹಾಗೂ ಒಳಭಾಗದಲ್ಲಿ ಸೂರ್ಯ, ಜಿಂಕೆ ಹಾಗೂ ಗಂಡು ನವಿಲಿನ ಚಿತ್ರ ಕಾಣಿಸಿತು. ಒಂದು ಕಲ್ಲಿನ ಆಯುಧ ದೊರೆಯಿತು’ ಎಂದು ಉಪನ್ಯಾಸಕ ಪ್ರಮೋದ ಸೋ. ನಲವಾಗಲು ತಿಳಿಸಿದ್ದಾರೆ.

ಈ ಮಾಹಿತಿಗಳನ್ನು ಪರಿಶೀಲಿಸಿದ ಜಿ.ಎಚ್ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರೊ. ಕೋರಿಶೆಟ್ಟರ, ‘ಅದೊಂದು ನವಶಿಲಾಯುಗದ ನೆಲೆ ಎಂದು ಗ್ರಹಿಸಬಹುದು. ಇಲ್ಲಿನ ಬೆಟ್ಟದ ಮೇಲ್ಭಾಗದ ಸಮತಟ್ಟಾದ ಪ್ರದೇಶದಲ್ಲಿ ಕಲ್ಲಿನ ಆಯುಧಗಳನ್ನು ಹರಿತ ಮಾಡಲು ಉಪಯೋಗಿಸಿದ ಕಲ್ಲಿನ ಗುಂಡಿಗಳು ಹಾಗೂ ಪೂರಕವಾಗಿ ಕೈಕೊಡಲಿ ದೊರೆತಿದೆ.

ಗುಹೆಗಳಲ್ಲಿನ ರೇಖಾ ಚಿತ್ರಗಳು ಸಿಂಹ, ಗಂಡು ನವಿಲು, ಸಾರಂಗ, ಪಕ್ಷಿ , ಸೂರ್ಯ, ಪ್ರಾಣಿ ಹಾಗೂ ನಿಸರ್ಗ ಚಿತ್ರಗಳೇ ಆಗಿವೆ. ಹಾವೇರಿ ಜಿಲ್ಲೆಯ ಇತಿಹಾಸ ಪೂರ್ವ ನೆಲಗಳ ಸಂಶೋಧನೆಯಲ್ಲಿ ಇತ್ತೀಚಿನವರೆಗೆ ಕೇವಲ ಆಯುಧಗಳು ಮಾತ್ರ ಸಿಕ್ಕಿವೆ. ರೇಖಾಚಿತ್ರ ಸಿಕ್ಕಿರುವುದು ಇದೇ ಮೊದಲು. ಇದು ಕರ್ನಾಟಕದ ಇತರ ಪ್ರದೇಶಗಳ ನವಶಿಲಾಯುಗದಲ್ಲಿ ಕಂಡು ಬಂದಿರುವ ಸಾಮಾನ್ಯ ಲಕ್ಷಣಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ ಇನ್ನಷ್ಟು ತಜ್ಞರು ಸಂಶೋಧನೆ ಕೈಗೊಂಡಲ್ಲಿ ಹೆಚ್ಚಿನ ಆಧಾರಗಳು ದೊರೆಯುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

‘ನಳಪುರಿ ದರ್ಶನ’ (ಹಾವೇರಿ ಸಮಗ್ರ ಮಾಹಿತಿ) ಹಾಗೂ ಅಂಕಣ ಬರೆಯುವ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಲು ನಮ್ಮ ತಂಡವು ಜಿಲ್ಲೆಯ ವಿವಿಧೆಡೆ ಸುತ್ತಾಟ ನಡೆಸಿದ ವೇಳೆ ಈ ಸ್ಥಳ ಪತ್ತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.