ಸಿದ್ದಾಪುರ (ಉತ್ತರ ಕನ್ನಡ): ‘ಇಂಡಿಯನ್ ಗೋಲ್ಡನ್ ಡಿಜಿಟಲ್ ಸರ್ಕಿಟ್- 2014’ ಎಂಬ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಕಲಾತ್ಮಕ ವರ್ಣಚಿತ್ರ ವಿಭಾಗದಲ್ಲಿ ತಾಲ್ಲೂಕಿನ ನಾಗೇಂದ್ರ ಮುತ್ಮುರ್ಡು ಅವರ ‘ಚಿಮ್ಮಿದ ಖುಶಿ ಚಿಲುಮೆ- 3’ ಎಂಬ ಶೀರ್ಷಿಕೆಯ ಛಾಯಾಚಿತ್ರಕ್ಕೆ ಅಮೆರಿಕದ ಫೋಟೋಗ್ರಾಫಿಕ್ ಸೊಸೈಟಿಯ ಚಿನ್ನದ ಪದಕ ಲಭಿಸಿದೆ.
ಮೂರು ಸ್ಥಳಗಳಲ್ಲಿ ಮತ್ತು ನಾಲ್ಕು ವಿಭಾಗಗಳಲ್ಲಿ ನಡೆಸಲಾಗಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರಗಾರರ 7 ಸಾವಿರಕ್ಕೂ ಅಧಿಕ ಚಿತ್ರಗಳು ಇದ್ದವು. ಈ ಸ್ಪರ್ಧೆಯ ‘ಡಿಜಿಫೋಕಸ್ ಕ್ಲಬ್’ ಆವೃತ್ತಿಯ ವರ್ಣಚಿತ್ರ ವಿಭಾಗದಲ್ಲಿ ಭಾರತಕ್ಕೆ ತಲಾ ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಬಂದಿದೆ. ಇದರಲ್ಲಿ ನಾಗೇಂದ್ರ ಮುತ್ಮುರ್ಡು ಅವರಿಗೆ ಲಭಿಸಿದ ಚಿನ್ನದ ಪದಕವೂ ಸೇರಿದೆ.
ರಾಷ್ಟ್ರೀಯ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ನಲ್ಲಿ ನಡೆದ ರಾಷ್ಟ್ರಮಟ್ಟದ ಇನ್ನೊಂದು ಸ್ಪರ್ಧೆಯಲ್ಲಿಯೂ ನಾಗೇಂದ್ರ ಮುತ್ಮುರ್ಡು ಅವರ ಇದೇ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ. ಇಲ್ಲಿ ನಾಗೇಂದ್ರ ಅವರ 16 ಚಿತ್ರಗಳಲ್ಲಿ 15 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
‘ಚಿಮ್ಮಿದ ಖುಷಿ ಚಿಲುಮೆ’ಯ ಸರಣಿ ಚಿತ್ರಗಳು- ಈವರೆಗೆ ಏಳು ವಿವಿಧ ದೇಶಗಳಲ್ಲಿ ನಡೆದ ಸ್ಪರ್ಧೆಗಳೂ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ 40ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರದರ್ಶನ ಕಂಡಿದ್ದು, 8 ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.