ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಶುಕ್ರವಾರ ಹಿರಿಯ ವಕೀಲ ಫಾಲಿ ನಾರಿಮನ್ ಅವರನ್ನು ಭೇಟಿ ಮಾಡಿ ಕಾವೇರಿ ಜಲವಿವಾದ ಪ್ರಕರಣದ ಕುರಿತು ಚರ್ಚೆ ನಡೆಸಿದರು.
ನಾರಿಮನ್ ಅವರ ನಿವಾಸಕ್ಕೆ ಮಧ್ಯಾಹ್ನ ತೆರಳಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದ ಅವರು, ಕಾವೇರಿ ಜಲವಿವಾದ ಪ್ರಕರಣದಲ್ಲಿ ಹಿನ್ನಡೆ ಆಗಿದ್ದರಿಂದ ರಾಜ್ಯದಲ್ಲಿ ಕೇಳಿಬಂದ ಟೀಕೆಗಳ ಬಗ್ಗೆ ಬೇಸರ ಪಟ್ಟುಕೊಳ್ಳದಿರುವಂತೆ ಮನವಿ ಮಾಡಿದರು ಎನ್ನಲಾಗಿದೆ.
‘ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಮುಖ್ಯ ಪ್ರಕರಣದ ವಿಚಾರಣೆ ಇದೇ 18ರಂದು ಆರಂಭವಾಗಲಿದೆ. ರಾಜ್ಯ ಸರ್ಕಾರದ ಪರ ವಾದ ಮಂಡಿಸಲಿರುವ ನಾರಿಮನ್ ಅವರೊಂದಿಗೆ ಈ ಕುರಿತು ಚರ್ಚಿಸಲಾಯಿತು’ ಎಂದು ದೇವೇಗೌಡ ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು.
‘ನಾನು ಮುಖ್ಯಮಂತ್ರಿ ಆಗಿದ್ದಾಗಲೂ ನಾರಿಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಜಲವಿವಾದ ಕಾಯ್ದೆಗೆ ಸಂಬಂಧಿಸಿದಂತೆ ಸಾಕಷ್ಟು ಜ್ಞಾನ ಹೊಂದಿರುವ ಅವರು ದೇಶದ ಅತ್ಯುತ್ತಮ ಕಾನೂನು ತಜ್ಞರಾಗಿದ್ದಾರೆ. ಕಾವೇರಿ ಪ್ರಕರಣದಲ್ಲಿ ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.