ADVERTISEMENT

ನಾಳೆಯಿಂದ ‘ಸಾಹಿತ್ಯ ಸಂಭ್ರಮ’

ನಾಲ್ಕನೇ ಆವೃತ್ತಿ ಆರಂಭ; ಡಾ. ಎಂ.ಎಂ. ಕಲಬುರ್ಗಿ ಹೆಸರಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿದರು.  ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಡಾ. ಜಿ.ಎಸ್.ಆಮೂರ ಇದ್ದಾರೆ
ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿದರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಡಾ. ಜಿ.ಎಸ್.ಆಮೂರ ಇದ್ದಾರೆ   

ಧಾರವಾಡ: ‘ಪ್ರಾಯೋಗಿಕವಾಗಿ ಆರಂಭವಾದ ‘ಧಾರವಾಡ ಸಾಹಿತ್ಯ ಸಂಭ್ರಮ’ ಎಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸು ಕಂಡಿದ್ದು, ಇದೇ 22ರಿಂದ ನಾಲ್ಕನೇ ಆವೃತ್ತಿ ಆರಂಭವಾಗಲಿದೆ’ ಎಂದು ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಇಲ್ಲಿ ಹೇಳಿದರು.

‘ಕಳೆದ ಮೂರು ಆವೃತ್ತಿಗಳಲ್ಲಿ ನಮ್ಮೊಂದಿಗಿದ್ದು, ಸಂಭ್ರಮದ ಯಶಸ್ಸಿಗೆ ದುಡಿದ ಗೌರವಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಈ ಬಾರಿ ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ. ಅವರಿಲ್ಲದೇ ಸಂಭ್ರಮ ಆಚರಿಸಲು ಹೇಗೆ ಸಾಧ್ಯ? ಎಂಬ ಗೊಂದಲವೂ ಮನಸ್ಸಿನಲ್ಲಿ ಮೂಡಿತ್ತು. ಆದರೆ ಈ ಬಾರಿಯ ಸಂಭ್ರಮವನ್ನು ಅವರ ಹೆಸರಿನಲ್ಲೇ ನಡೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ತೀರ್ಮಾನಕ್ಕೆ ಬರಲಾಯಿತು’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳಿಗೆ ಸಾಹಿತ್ಯ ಸಂಭ್ರಮ ಪರ್ಯಾಯ ಮಾದರಿಯೇ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಆದರೆ ಸಂಭ್ರಮ ಯಾವುದಕ್ಕೂ ಪರ್ಯಾಯವಲ್ಲ. ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ, ನೀನಾಸಂ ಸಂಸ್ಕೃತಿ ಶಿಬಿರ, ಆಳ್ವಾಸ್ ನುಡಿಸಿರಿ ಮೊದಲಾದವಕ್ಕೆ ವಿಶಿಷ್ಟವಾದ ಉದ್ದೇಶಗಳಿವೆ, ಪ್ರಯೋಜನಗಳೂ ಇವೆ. ನಮ್ಮ ಸಂಭ್ರಮ ಆ ಪ್ರಯತ್ನಗಳನ್ನೆಲ್ಲ ಗೌರವಿಸುತ್ತದೆ. ನಮ್ಮ ಉದ್ದೇಶವೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಬದುಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸುವುದೇ ಆಗಿದೆ. ಇಂಥ ಎಷ್ಟು ಬಗೆಯ ಪ್ರಯತ್ನಗಳು ನಡೆದರೂ ಅವು ಸ್ವಾಗತಾರ್ಹವೇ’ ಎಂದು ಗಿರಡ್ಡಿ ಹೇಳಿದರು.

‘ಈ ಬಾರಿಯ ಸಂಭ್ರಮದಲ್ಲಿ 150 ಹಿರಿಯ ಹಾಗೂ ಕಿರಿಯ ಸಾಹಿತಿಗಳನ್ನು ಒಂದೆಡೆ ಸೇರಿಸಲಾಗುತ್ತಿದೆ. ಎಲ್ಲ ಸಾಹಿತಿ ಗಳೂ ಒಂದು ಸಲವಾದರೂ ಸಂಭ್ರ ಮದಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಕೆಲವರನ್ನು ಕರೆಯಲು ಇನ್ನೂ ಸಾಧ್ಯವಾಗಿಲ್ಲ. ಕ್ರಮೇಣ ಅದು ಸಾಧ್ಯವಾಗಬೇಕು’ ಎಂದರು.

‘ಈ ಹಿಂದೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತರ ನಿರ್ದಿಷ್ಟ ಸಂಖ್ಯೆ ಮೊದಲ ಎರಡು ದಿನಗಳಲ್ಲೇ ಮೀರಿತ್ತು. ಈಗಲೂ ಒತ್ತಡ ಬರುತ್ತಲೇ ಇದೆ. ಹೀಗಾಗಿ ಯಾರನ್ನೂ ನಿರಾಶೆಗೊಳಿಸ ದಂತೆ ಅಂತರ್ಜಾಲದ ಮೂಲಕ ಸಂಭ್ರಮದ ಗೋಷ್ಠಿಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಜತೆಗೆ ಸಭಾಂಗಣಕ್ಕೆ ಪ್ರವೇಶ ಸಿಗದವರಿಗಾಗಿ ಪುಸ್ತಕ ಮಳಿಗೆಯಲ್ಲಿ ಬೃಹತ್‌ ಎಲ್‌ಇಡಿ ಪರದೆ ಹಾಕಲಾಗಿದೆ’ ಎಂದರು.

‘ಈ ಸಲದ ಸಂಭ್ರಮಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸೇರಿದಂತೆ ಇತರ ಸಂಘ– ಸಂಸ್ಥೆಗಳು ನೆರವಾಗಿವೆ. ಸಾಹಿತ್ಯ ಸಂಭ್ರಮ ಒಂದು ಸಿದ್ಧ ಮಾದರಿಯಾಗಿ ಜಡಗೊಳ್ಳದಂತೆ ಆ ಪ್ರಯೋಗಶೀಲತೆಯನ್ನು ನಿರಂತರವಾಗಿ ಉಳಿಸಿಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ’ ಎಂದು ಗಿರಡ್ಡಿ  ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.