ಮೈಸೂರು: ‘ಸಮಾಜದಲ್ಲಿ ನಾಸ್ತಿಕರಿಗೆ ಪಾಲು ಕೊಡಬಾರದು ಎನ್ನುವುದಾದರೆ ನಮ್ಮ ಸಾಂಸ್ಕೃತಿಕ ಜೀವನ ಬಡವಾಗುತ್ತದೆ’ ಎಂದು ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ಚಾಮುಂಡಿಬೆಟ್ಟದಲ್ಲಿ ಗುರುವಾರ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಬಾರಿಯ ದಸರಾವನ್ನು ನಾನು ಉದ್ಘಾಟಿಸುತ್ತೇನೆ ಎಂದು ಮುಖ್ಯಮಂತ್ರಿ ಅವರು ಪ್ರಕಟಿಸಿದಾಗ, ನಾಸ್ತಿಕನಾಗಿರುವ ವ್ಯಕ್ತಿ ಈ ಉತ್ಸವದಲ್ಲಿ ಭಾಗಿಯಾಗಬಾರದು ಎನ್ನುವ ಚರ್ಚೆ ನಡೆಯಿತು. ಇದು ಮೊದಲ ಬಾರಿ ನಡೆದ ಚರ್ಚೆಯಲ್ಲ. ಹಾಗೆ ಆಪಾದಿಸಿದವರಿಗೆ ನಾಸ್ತಿಕ ಶಬ್ದದ ಅರ್ಥ ಗೊತ್ತಿಲ್ಲ. ನಾಸ್ತಿಕ ಎಂದರೆ ದೇವರನ್ನು ಅಲ್ಲಗಳೆಯುವವ, ದೇವರು ಬೇಡ ಎನ್ನುವವ ಎಂಬುದು ಈಚೆಗೆ ಬೆಳೆದ ಅರ್ಥ. ನಮ್ಮ ದರ್ಶನಗಳಲ್ಲಿ ನಾಸ್ತಿಕ ಎಂದರೆ ಚಾತುರ್ವರ್ಣವನ್ನು ಒಪ್ಪದವರು ಮತ್ತು ವೇದಗಳನ್ನು ಅಪೌರುಷೇಯ ಎಂದು ನಂಬದವರು ಎಂಬ ಅರ್ಥ’ ಎಂದರು.
‘ಹೀಗಾಗಿ, ಚಾತುರ್ವರ್ಣ ಅಲ್ಲಗಳೆಯುವ ನನ್ನನ್ನು ನಾಸ್ತಿಕ ಎಂದರೆ ಒಪ್ಪಿಕೊಳ್ಳುವೆ. ಆದರೆ, ಆಪಾದಿಸುವವರ ವರ್ಗೀಕರಣದ ಪ್ರಕಾರ ಎಲ್ಲರೂ ನಾಸ್ತಿಕರೇ. ಜೈನರು, ಬೌದ್ಧರು, ಚಾರ್ವಾಕರು ಕೂಡ ನಾಸ್ತಿಕರು. ಹೀಗೆ ನಾಸ್ತಿಕರನ್ನು ಸಂಸ್ಕೃತಿಯಿಂದ ಹೊರಗಿಟ್ಟರೆ ಪಂಪ, ರನ್ನ, ಜನ್ನ ಎಲ್ಲರನ್ನೂ ಹೊರಗಿಡಬೇಕಾಗುತ್ತದೆ. ಬೌದ್ಧ ಧರ್ಮದಿಂದ ನಮಗೆ ಸಿಕ್ಕ ಚೈತನ್ಯ ಕೂಡಾ ಹೊರಗಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ದೇವರನ್ನು ಅಲ್ಲಗಳೆಯುವ ವ್ಯಕ್ತಿ ಸಂಸ್ಕೃತದಲ್ಲಿ ನಾಸ್ತಿಕ ಅಲ್ಲ, ನಿರೀಶ್ವರ. ಈಶ್ವರನನ್ನು ಅಲ್ಲಗಳೆಯುವವನು ನಿರೀಶ್ವರವಾದಿ. ಈ ವಾದ ಹಿಂದೆಯೂ ನಮ್ಮಲ್ಲಿ ಇತ್ತು. ಆಸ್ತಿಕ ಸಂಪ್ರದಾಯಗಳಲ್ಲಿ ಅನೇಕರು ನಿರೀಶ್ವರವಾದಿಗಳಿದ್ದರು. ಅವರು ಮೀಮಾಂಸಕರು. ನಮಗೆ ದೇವರೇ ಬೇಡ. ಇಂದ್ರ, ವರುಣ, ವಾಯು–ಇವುಗಳಿಗೆ ವಿಗ್ರಹ ಬೇಕಿಲ್ಲ ಎಂದು ಪ್ರತಿಪಾದಿಸಿದರು.
ನಿರೀಶ್ವರರು ನಾಸ್ತಿಕ ಸಂಪ್ರದಾಯದ ಜತೆಗೆ ದೇವರನ್ನು ಅಲ್ಲಗಳೆಯುವವರು. ಹೀಗಿರುವ ನಮ್ಮ ಸಾಂಸ್ಕೃತಿಕ ಸಂಪ್ರದಾಯ ಸುಲಭವಾದುದಲ್ಲ, ಸರಳವಾದುದಲ್ಲ. ಇದು ಹೊರಗಿಡುವ, ಒಳಗಿಡುವ ಪ್ರಶ್ನೆಯಲ್ಲ. ಇದು ಚರ್ಚೆಯಿಂದ ಬೆಳೆದುದು. ಹೀಗಾಗಿ, ನನ್ನ ವಿರುದ್ಧ ಪ್ರತಿಭಟಿಸುವವರನ್ನು ಪೊಲೀಸ್ ವ್ಯಾನಿನಲ್ಲಿ ಕಳುಹಿಸಬೇಕಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರತಿಭಟನೆಗೆ ಅವಕಾಶ ಕೊಡಬೇಕಿತ್ತು. ಜತೆಗೆ, ನನಗೆ ಮಾತನಾಡಲೂ ಅವಕಾಶ ಕೊಡಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.
‘ನಾಸ್ತಿಕರ ಕುರಿತು ಮಾತನಾಡುವಾಗ ಮಹಾಭಾರತ ನೆನಪಾಗುತ್ತದೆ. ಕುರುಕ್ಷೇತ್ರದಲ್ಲಿ ಗೆದ್ದು ಬಂದ ಯುಧಿಷ್ಠಿರನಿಗೆ ಚಾರ್ವಾಕ ಕೇಳುತ್ತಾನೆ; ಇಷ್ಟೆಲ್ಲದರಿಂದ ಏನು ಸಾಧಿಸಿದೆ? ಲಕ್ಷಾಂತರ ಸೈನಿಕರು ಸತ್ತಿದ್ದಾರೆ, ಲಕ್ಷಾಂತರ ವಿಧವೆಯರು, ಮಕ್ಕಳು ಅಳುತ್ತಿದ್ದಾರೆ. ಇದು ನಿನ್ನ ಜೀವನದ ಶ್ರೇಯಸ್ಸೇ ಎಂದು ಕೇಳುತ್ತಾನೆ. ಆಗ ಚಾರ್ವಾಕನನ್ನು ಕೊಂದು ಹಾಕಲಾಗುತ್ತದೆ. ಇದು ಸೂಕ್ಷ್ಮವಾದುದು. ಹೀಗಾಗಿ, ಇಂದಿನ ಸಮಾಜದಲ್ಲಿ ನಾಸ್ತಿಕರಿಗೆ ನೈತಿಕ ನೆಲೆ ಬೇಕು. ಪ್ರಶ್ನಿಸುವವರು ನೈತಿಕ ನೆಲೆ ಮೇಲೆ ನಿಂತು ಪ್ರಶ್ನಿಸಬೇಕು. ಆದರೆ, 25 ವರ್ಷಗಳಿಂದ ಅಂಧಪ್ರಜ್ಞೆ ಬೆಳೆಯುತ್ತಿದೆ, ಅಂಧವಿಶ್ವಾಸ ಹೆಚ್ಚುತ್ತಿರುವುದನ್ನು ಕಂಡಾಗ ಗಾಬರಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ವಾಸ್ತು, ಜ್ಯೋತಿಷ ಇವೆಲ್ಲ ನಮ್ಮ ಸಂಪ್ರದಾಯಗಳು. ಇವು ಸಂಪ್ರದಾಯಗಳಾಗಿ ಬೆಳೆದು ಬಂದ ಬಗೆ ಕುರಿತು ಅಭ್ಯಾಸ ಮಾಡಬಹುದು. ಆದರೆ, ಶಾಸ್ತ್ರವೆಂದು, ವಿಜ್ಞಾನವೆಂದು ಕಲಿಸುವುದು ಎಷ್ಟು ಸರಿ? ಮಂಗಳ ಗ್ರಹಕ್ಕೆ ನೌಕೆ ಕಳಿಸುವ ಈ ಕಾಲದಲ್ಲಿ ನಮಗೆ ಅವು ಅಗತ್ಯವೇ? ಇದಕ್ಕಾಗಿ ನಮಗೆ ಚಾರ್ವಾಕರು, ಲೋಕಾಯತರು ಬೇಕು. ಚಾರ್ವಾಕರಿಗೆ ಲೋಕಾಯತ ಎನ್ನುತ್ತಾರೆ. ಲೋಕಾಯತ ಎಂದರೆ ಜನರಲ್ಲಿ ಒಂದುಗೂಡಿರುವವನು, ಜನರಲ್ಲಿ ಜೀವಂತವಾಗಿರುವವನು. ಇಂತಹ ಲೋಕಾಯತರು ಹೆಚ್ಚಲಿ, ಅವರೆಲ್ಲ ಸಮಾಜಕ್ಕೆ ದರ್ಶನ ನೀಡಲಿ’ ಎಂದು ಸಲಹೆ ನೀಡಿದರು.
ಮಾನವತಾವಾದಿಗಳಾಗೋಣ; ಸಿಎಂ
‘ಆಸ್ತಿಕ, ನಾಸ್ತಿಕ, ವಿಚಾರವಾದಿ, ಸಂಪ್ರದಾಯವಾದಿಗಿಂತ ಮಾನವತಾವಾದಿಗಳಾಗೋಣ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಮನುಷ್ಯರಾಗೋಣ’ ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
‘ಹುಟ್ಟುವಾಗ ಅರ್ಜಿ ಹಾಕಿ ಹುಟ್ಟುವುದಿಲ್ಲ. ಹಾಗೆ ಅರ್ಜಿ ಹಾಕುವುದಿದ್ದರೆ ಮೇಲಿನ ಜಾತಿ ಕೊಡಿ ಎಂದು ಕೇಳುತ್ತಿದ್ದೆವು. ಹುಟ್ಟು ಆಕಸ್ಮಿಕ. ಆದರೆ, ಸಮಾಜಮುಖಿಯಾಗಿ ಬಾಳಬೇಕು. ನಮ್ಮ ಜನರನ್ನು ಗೌರವಿಸಿ, ವಿಶ್ವಾಸದಿಂದ ಕಾಣಬೇಕು’ ಎಂದರು.
‘ನಾನು ಕೂಡಾ ನಾಸ್ತಿಕ. ಪೂಜೆ ಮಾಡುವುದಿಲ್ಲ. ಮನೆಯಲ್ಲಿ ಪತ್ನಿ, ಮಕ್ಕಳು ಪೂಜೆ ಮಾಡುತ್ತಾರೆ. ಮಂಗಳಾರತಿ ತಂದರೆ ಸ್ವೀಕರಿಸುವೆ. ದೇವರು ಇಲ್ಲವೆಂದು ವಾದ ಮಾಡುವುದಿಲ್ಲ. ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ಆದರೆ, ಗೊಡ್ಡು ಸಂಪ್ರದಾಯ, ಮೌಢ್ಯಗಳನ್ನು ವಿರೋಧಿಸಬೇಕು. ಕೆಳಜಾತಿಯಲ್ಲಿ ಹುಟ್ಟಿದೆ, ಬಡವನಾಗಿ ಹುಟ್ಟಿದೆ ಎನ್ನುವ ಕೊರಗು ಬೇಡ’ ಎಂದು ಕಿವಿಮಾತು ಹೇಳಿದರು.
‘ಕಳೆದ 404 ವರ್ಷಗಳಿಂದ ದಸರಾ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಜಾತಿ, ಧರ್ಮಕ್ಕೆ ಸೀಮಿತವಾಗದ ಜಾತ್ಯತೀತವಾದ ನಾಡಹಬ್ಬ. ನಾಡಿನ ಜನರಿಗೆ ಒಳ್ಳೆಯದಾಗಲಿ, ದಸರಾ ಹಬ್ಬದ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಶುಭ ಕೋರಿದರು.
ಧಾರವಾಡದಲ್ಲಿ ನಾಡಹಬ್ಬ
‘ನಾಡಹಬ್ಬ ಶಬ್ದ ಹುಟ್ಟಿದ್ದು ಧಾರವಾಡದಲ್ಲಿ, ಮೈಸೂರಿನಲ್ಲಿ ಅಲ್ಲ’ ಎಂದು ಗಿರೀಶ ಕರ್ನಾಡ ಹೇಳಿದರು. ‘ಅದು 1926, ಧಾರವಾಡದಲ್ಲಿ ಚಿಂತಕರು, ಗೆಳೆಯರ ಗುಂಪಿತ್ತು. ಅದರಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಬೆಟಗೇರಿ ಕೃಷ್ಣಶರ್ಮ ಮೊದಲಾದವರಿದ್ದರು. ಅವರೆಲ್ಲ ನಾಡಹಬ್ಬ ಆಚರಿಸಿದರು.
ಇದಕ್ಕೆ ಮಹಾರಾಷ್ಟ್ರದಲ್ಲಿ ಜೋರಾಗಿ ನಡೆಯುತ್ತಿದ್ದ ಗಣೇಶ ಹಬ್ಬವೇ ಸ್ಫೂರ್ತಿ. ಆಗ ಕನ್ನಡಕ್ಕೆ ಬೆಲೆ ಇರಲಿಲ್ಲ. ಕನ್ನಡಕ್ಕೆ ಬೆಲೆ ಬರಬೇಕು, ಮೈಸೂರಿನ ದಸರಾಕ್ಕೆ ಸ್ಪಂದಿಸಬೇಕೆಂದು ಗೆಳೆಯರ ಗುಂಪು ನಾಡಹಬ್ಬ ಆಚರಿಸಿತು.
ಆ ಗೆಳೆಯರ ಗುಂಪಿನ ಒಡನಾಟ ನನಗಿತ್ತು. ಅವರು ನಡೆಸಿದ ಉತ್ಸವದಲ್ಲಿ ಭಾಗವಹಿಸುವುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬೆರೆತು ಬೆಳೆದಿರುವೆ. ಈಗ ಮೈಸೂರು ದಸರಾ ಉದ್ಘಾಟನೆಗೆ ಬಂದು ನಿಂತಿರುವೆ’ ಎಂದು ಖುಷಿಯಾಗಿ ಹೇಳಿದರು.
ಜೀವನದ ಅದ್ಭುತ ಕ್ಷಣ
‘ನನ್ನ ಜೀವನದ ಅದ್ಭುತವಾದ ಕ್ಷಣವಿದು. ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಾಗಿದ್ದರಿಂದ ಮೈಸೂರು ನಮಗೆ ದೂರ. ಆದರೆ, ಕರ್ನಾಟಕ ಸಂಸ್ಕೃತಿಯಲ್ಲಿ ಉತ್ತುಂಗವಾದ ಕೊಡುಗೆ ಮೈಸೂರಿನದು’ ಎಂದು ಗಿರೀಶ ಕಾರ್ನಾಡ ಶ್ಲಾಘಿಸಿದರು.
ಶಿರಸಿಯ ಮಾರಿಕಾಂಬೆ ಸನ್ನಿಧಾನದಲ್ಲಿ ಬೆಳೆದೆ. ಅದು 1950ರ ಹೊತ್ತು . ಮಹಾತ್ಮ ಗಾಂಧಿ ಅವರ ಅಹಿಂಸಾ ಚಳವಳಿ ಜೋರಾಗಿತ್ತು. ಹೀಗಾಗಿ, ಶಿರಸಿಯಲ್ಲಿ ಆಗ ನಡೆದ ಮಾರಿಕಾಂಬೆ ಜಾತ್ರೆಯಲ್ಲಿ ಕೋಣವನ್ನು ಬಲಿ ಕೊಡಲಿಲ್ಲ. ಅಲ್ಲಿದ್ದ ಕೋಣ ಅದ್ಭುತವಾಗಿ ಬೆಳೆಯುತ್ತಿತ್ತು. ಕರಿಯ ಬಣ್ಣದ ಮಹಿಷನನ್ನು ನೋಡಿದಾಗ ಬೆರಗಾಗುತ್ತಿತ್ತು. ಇದೆಲ್ಲ ಮೈಸೂರಿನ ಮಹಿಷಮರ್ಧಿನಿ ನೋಡಿದಾಗ ಬಾಲ್ಯದ ದಿನಗಳು ನೆನಪಾದವು.
1956ರಲ್ಲಿ ಮೈಸೂರಿಗೆ ಬಂದಿದ್ದೆ. ಅದೇ ವರ್ಷ ಕರ್ನಾಟಕದ ಏಕೀಕರಣವಾಗಿತ್ತು. ಹೀಗಾಗಿ, ದಸರಾ ನಡೆಯುವುದಿಲ್ಲ ಎನ್ನುವ ಮಾತಿತ್ತು. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದ ನಾನು, ಮೈಸೂರಿಗೆ ಬಂದು ಆ ವರ್ಷ ಅರಮನೆಯಲ್ಲಿ ನಡೆದ ದರ್ಬಾರ್ ನೋಡಿದ್ದೆ. ಜತೆಗೆ, ಜಂಬೂಸವಾರಿಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೋಡಿದ್ದೆ. ಹೀಗೆ ಅರಮನೆ ಹಾಗೂ ದರ್ಬಾರ್ ನೋಡಿ ಖುಷಿಪಟ್ಟಿದ್ದೆ.
ದಸರಾ ಉದ್ಘಾಟಿಸಲು ಆಹ್ವಾನಿಸಿದಾಗ ರಾಜವಂಶಸ್ಥೆ ಪ್ರಮೋದಾದೇವಿ ಅವರನ್ನು ಬೆಂಗಳೂರಲ್ಲಿ ಭೇಟಿಯಾಗಿದ್ದೆ. ಅವರು ವಿಷಾದಯೋಗದಲ್ಲಿದ್ದರೂ ಪ್ರೀತಿ–ವಿಶ್ವಾಸ ತೋರಿಸಿದರು. ಅದೊಂದು ಅವಿಸ್ಮರಣೀಯ ಅನುಭವ’ ಎಂದು ಸಂತೋಷದಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.