ADVERTISEMENT

ನಿಜವಾದ ಪದವಿ ಸಿಕ್ಕಿದ್ದು ಜೈಲಿನಲ್ಲಿ

ರವೀಂದ್ರ ಭಟ್ಟ
Published 24 ಜೂನ್ 2015, 19:30 IST
Last Updated 24 ಜೂನ್ 2015, 19:30 IST

ತುರ್ತು ಪರಿಸ್ಥಿತಿ ವಿರುದ್ಧ ಕರ್ನಾಟಕದಲ್ಲಿಯೂ ಸಾಕಷ್ಟು ಹೋರಾಟ ನಡೆದಿದೆ. ಆ ಸಂದರ್ಭದಲ್ಲಿ ಹೋರಾಟ ನಡೆಸಿದ ಹಲವಾರು ಮುಖಂಡರು ನಮ್ಮ ಜೊತೆ ಇದ್ದಾರೆ. 15 ತಿಂಗಳು ಜೈಲು ವಾಸ ಅನುಭವಿಸಿದ್ದ ಬಿಜೆಪಿ ಮುಖಂಡ ಎಸ್‌.ಸುರೇಶಕುಮಾರ್ ಕೂಡ ಅವರಲ್ಲಿ ಒಬ್ಬರು. ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 40 ವರ್ಷ ಸಂದಿದೆ. ಈ ಸಂದರ್ಭದಲ್ಲಿ ಅವರು ತುರ್ತು ಪರಿಸ್ಥಿತಿಯ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

*ಪ್ರ: ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯಲ್ಲಿ ನೀವು ತೊಡಗಿಕೊಂಡಿದ್ದು ಹೇಗೆ?
ತುರ್ತು ಪರಿಸ್ಥಿತಿ ಘೋಷಣೆಯಾಗುವುದಕ್ಕೆ ಮೊದಲೇ ಕರ್ನಾಟಕದಲ್ಲಿ ಜೆ.ಪಿ. ಚಳವಳಿ ಆರಂಭವಾಗಿತ್ತು. ನಾನೂ ಅದರಲ್ಲಿ ಇದ್ದೆ. 1975ರ ಜೂನ್‌ 24ರಂದು ಟೌನ್‌ ಹಾಲ್‌ನಲ್ಲಿ ಜನಸಂಘದ ಸಭೆ ಇತ್ತು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ ಭಾಷಣ ಮಾಡಿದರು. ನಾನೂ ಅಲ್ಲಿಗೆ ಹೋಗಿದ್ದೆ. ಆಗಲೇ ದೇಶದಲ್ಲಿ ಆಡಳಿತ ವಿರೋಧಿ ಅಲೆ ಸಾಕಷ್ಟು ಇತ್ತು. ಮಾರನೇ ದಿನ ಬೆಳಿಗ್ಗೆ ನಾನು ಮನೆ ಹತ್ತಿರ ಎಲ್ಲಿಗೋ ಹೋಗುತ್ತಿದ್ದೆ. ಆಗ ನರಹರಿ (ಮುಂದೆ ಎಂಎಲ್‌ಸಿ ಆದರು) ಅವರು ಬಂದು ‘ಸುರೇಶ, ತಕ್ಷಣ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಹೋಗು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಅಡ್ವಾಣಿ, ವಾಜಪೇಯಿ, ಮಧು ದಂಡವತೆ, ಶ್ಯಾಮ ನಂದನ್‌ ಮಿಶ್ರಾ ಅವರನ್ನೆಲ್ಲಾ ಬಂಧಿಸಿದ್ದಾರೆ’ ಎಂದರು. ನಾನು ತಕ್ಷಣ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಬಂದೆ. ಅಲ್ಲಿ ಪಿ.ಜಿ.ಆರ್‌.ಸಿಂಧ್ಯಾ ಇದ್ದರು. ಲಕ್ಷ್ಮೀಸಾಗರ್‌, ಪ್ರಮಿಳಾ ನೇಸರ್ಗಿ ಮುಂತಾದವರೂ ಬಂದು ಸೇರಿಕೊಂಡರು. ನಾವು  ನೂರಕ್ಕೂ ಹೆಚ್ಚು ಮಂದಿ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದೆವು.

*ಪ್ರ: ಹೋರಾಟ ಮುಂದುವರಿದಿದ್ದು ಹೇಗೆ?
ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮೆರವಣಿಗೆಯ ನಂತರ ಮಾರನೇ ದಿನ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರತಿಭಟನೆ ಮಾಡಿದೆವು. ಜುಲೈ 1ರಂದು ಕಾಟನ್‌ಪೇಟೆಯ ಮನೆಯಲ್ಲಿ ಸಭೆ ಸೇರಿದೆವು.  ಹೋರಾಟ ಮುಂದುವರಿಸಲು ನಿರ್ಧರಿಸಿದೆವು. ‘ಯಾರೂ ಬಂಧನಕ್ಕೆ ಒಳಗಾಗಬಾರದು. ಕರಪತ್ರ ಹಂಚಬೇಕು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟವನ್ನು ಮುಂದುವರಿಸಬೇಕು’ ಎಂದು ಪಿ.ಜಿ.ಆರ್‌.ಸಿಂಧ್ಯಾ ಹೇಳಿದರು. ಆದರೆ ಅವರನ್ನು ಜುಲೈ 4ರಂದು ಬಂಧಿಸಲಾಯಿತು. ಅಂದೇ  ಆರ್‌ಎಸ್‌ಎಸ್‌ ನಿಷೇಧ ಆಯ್ತು. ಅದರಿಂದ ನಮಗೆ ಆರ್‌ಎಸ್‌ಎಸ್‌ ಚಟುವಟಿಕೆ ನಡೆಸಲು ಸಾಧ್ಯ ಇರಲಿಲ್ಲ. ಅದಕ್ಕೆ ವಾಲಿಬಾಲ್‌ ತಂಡ ಮಾಡಿಕೊಂಡು ವಾಲಿಬಾಲ್‌ ಆಡುವ ನೆಪದಲ್ಲಿ ನಾವೆಲ್ಲಾ ಒಂದೆಡೆ ಸೇರಿ ಚರ್ಚೆ ಮಾಡುತ್ತಿದ್ದೆವು. ಆಗಸ್ಟ್ 14ರಂದು ಒಂದೇ ದಿನ ನಾನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ ಮತ್ತು ಮೈಸೂರುಗಳಿಗೆ ತೆರಳಿ ಕರಪತ್ರ ಹಂಚಿ ಬಂದೆ.

*ಪ್ರ: ನೀವು ಜೈಲಿಗೆ ಹೋಗಿದ್ದು ಹೇಗೆ?
1975ರ ನವೆಂಬರ್ 7 ನನ್ನ ಜೀವನದಲ್ಲಿ ಮರೆಯಲಾಗದ ದಿನ. ಅಂದು ನಾನು ಮನೆಯಲ್ಲಿ ಪತ್ರಿಕೆ ಓದುತ್ತಿದ್ದೆ. ಆಗ ಸಚ್ಚಿದಾನಂದ

ಹೆಗಡೆ ಬಂದು ‘ತಕ್ಷಣ ಹೊರಡು’ ಎಂದರು. ಎಲ್ಲಿಗೆ ಏನು ಎಂದು ಕೇಳದೆ ಅವರ ಜೊತೆ ತೆರಳಿದೆ. ಶಿವಾನಂದ ವೃತ್ತದ ಬಳಿ ಇರುವ ಬಸ್‌ ನಿಲ್ದಾಣಕ್ಕೆ ಬಂದೆವು. ಅಲ್ಲಿಗೆ ಗೋವರ್ಧನ, ಸುರೇಶ ನಾಯ್ಕ, ಸೋಮ ಬಂದರು. ನಮ್ಮ ನಾಲ್ಕು ಜನಕ್ಕೆ ಹೆಗಡೆ ಒಂದು ಕೆಲಸ ಒಪ್ಪಿಸಿದರು. ‘ಅಶೋಕ ಹೋಟೆಲ್‌ನಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಸಭೆ ನಡೆಯುತ್ತಿದೆ. ಅಲ್ಲಿಗೆ ವಿದೇಶಿಗರು ಬಂದಿದ್ದಾರೆ. ಅವರಿಗೆ ನೀವು ಈ ಕರಪತ್ರ ಹಂಚಬೇಕು’ ಎಂದು ಹೆಗಡೆ ನಮಗೆ ಕೊಟ್ಟರು. ನಾವು ಒಂದು ಟ್ಯಾಕ್ಸಿ ತೆಗೆದುಕೊಂಡು ಅಶೋಕ ಹೋಟೆಲ್‌ಗೆ ಹೋದೆವು. ಅಲ್ಲಿಗೆ ಬಂದಿದ್ದ ಪ್ರತಿನಿಧಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಬಸ್‌ಗಳು ಸಿದ್ಧವಾಗಿದ್ದವು. ನಾನು ಒಂದು ಬಸ್‌ ಹತ್ತಿ ಎಲ್ಲರಿಗೂ ಕರಪತ್ರ ಕೊಟ್ಟೆ. ಅವರು ಇದೇನು ಎಂದು ಕೇಳಿದರು. ಆಗ ನನಗೆ ಸರಿಯಾಗಿ ಇಂಗ್ಲಿಷ್‌ ಬರುತ್ತಿರಲಿಲ್ಲ. ಎಮರ್ಜೆನ್ಸಿ ಎಮರ್ಜೆನ್ಸಿ ಎಂದಷ್ಟೇ ಹೇಳಿ ಪಕ್ಕದ ಇನ್ನೊಂದು ಬಸ್‌ ಹತ್ತಿದೆ. ಆಗ ಯಾರೋ ಒಬ್ಬರಿಗೆ ನಾನು ಏನು ಮಾಡುತ್ತಿದ್ದೇನೆ ಎನ್ನುವುದು ಗೊತ್ತಾಗಿ ಜೋರಾಗಿ ಕೂಗಿಕೊಂಡ. ತಕ್ಷಣ ಪೊಲೀಸ್‌ನವರು ಬಂದು ನನ್ನ ಕುತ್ತಿಗೆಗೆ ಕೈಹಾಕಿ ಎಳೆದುಕೊಂಡು ಹೋದರು. ಒಬ್ಬ ಕಪಾಳಕ್ಕೆ ಬಿಗಿದ. ಇನ್ನೊಬ್ಬ ನನ್ನ ಎತ್ತಿ ಜೀಪಿನಲ್ಲಿ ಹಾಕಿದ. ಅಲ್ಲಿಂದ ನನ್ನನ್ನು ಹೈಗ್ರೌಂಡ್‌ ಪೊಲೀಸ್‌ ಠಾಣೆಗೆ ತಂದು ಲಾಕಪ್ ಗೆ ಹಾಕಿದರು.

*ಪ್ರ: ಜೈಲಿನ ಅನುಭವ ಹೇಗಿತ್ತು?
ಪೊಲೀಸ್‌ ಠಾಣೆಗೆ ಹೋದ ಕೆಲವೇ ಹೊತ್ತಿನಲ್ಲಿ 8–10 ಜನ ಪೊಲೀಸ್‌ ಅಧಿಕಾರಿಗಳು ಬಂದರು. ನನ್ನ ವಿಚಾರಣೆ ನಡೆಸಿದರು. ಕರಪತ್ರ ಎಲ್ಲಿಂದ ಬಂತು. ಯಾರು ನಿಮ್ಮ ನಾಯಕ ಎಂದೆಲ್ಲಾ ಕೇಳಿದರು. ನಾನು ಯಾವುದೇ ಪ್ರಶ್ನೆಗೆ ಉತ್ತರ ಹೇಳಲಿಲ್ಲ. ನನ್ನ ಉರುಳಾಡಿಸಿ ಹೊಡೆದರು. ತಕ್ಷಣ ಒಬ್ಬ ಅಧಿಕಾರಿ ‘ಟೇಕ್‌ ಹಿಮ್‌ ಅಪ್‌’ ಎಂದ. ನಾನು ‘ಓಹೋ ಮೊದಲ ಮಹಡಿಗೆ ಕರೆದುಕೊಂಡು ಹೋಗ್ತಾರೆ’ ಎಂದುಕೊಂಡೆ. ಆದರೆ ನನ್ನನ್ನು ಕೆಳಗಿನ ಮಹಡಿಗೆ ಕರೆದುಕೊಂಡು ಹೋದರು. ಬಟ್ಟೆ ಬಿಚ್ಚು ಎಂದರು. ನಾನು ಬಿಚ್ಚಲ್ಲ ಎಂದಿದ್ದಕ್ಕೆ ಚೆನ್ನಾಗಿ ಹೊಡೆದರು. ಏರೋಪ್ಲೇನ್‌ ಹತ್ತಿಸಿದರು. ನನ್ನ ಜೊತೆಗಾರರಿಗೂ ಇದೇ ಗತಿ ಆಯ್ತು. ಒಂದೂ ಮಗ, ಎರಡೂ ಮಗ ಎಂದೆಲ್ಲಾ ಬೈಗಳ ಕೇಳಬೇಕಾಯ್ತು.

ನಮ್ಮಲ್ಲಿ ಯಾರೋ ಒಬ್ಬ ನಮ್ಮ ನಾಯಕ ಎಬಿವಿಪಿಯಲ್ಲಿದ್ದ ಡಿ.ಕೆ.ಶಿವರಾಂ ಎಂದು ಹೇಳಿಬಿಟ್ಟಿದ್ದರು. ಅವರನ್ನು ಬಂಧಿಸಲಾಯಿತು. ನನ್ನ ತಾಯಿಗೆ ನಾನು ಎಲ್ಲಿ ಹೋಗಿದ್ದೇನೆ ಎನ್ನುವುದು ಗೊತ್ತಿರಲಿಲ್ಲ. ಅವರು ರಾಮಾ ಜೋಯಿಸ್‌ ಅವರ ಬಳಿ ಹೋಗಿ ನಾನು ಕಾಣೆಯಾಗಿದ್ದನ್ನು ಹೇಳಿದರು.  ಅವರು ಹೈಕೋರ್ಟ್ ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಹಾಕಿದ್ದರಿಂದ ನನ್ನನ್ನು ಕೋರ್ಟ್ ನಲ್ಲಿ ಹಾಜರು ಪಡಿಸಿ ಸೆಂಟ್ರಲ್‌ ಜೈಲಿಗೆ ಕಳುಹಿಸಿದರು. ನಮ್ಮನ್ನು ಜೈಲಿಗೆ ಕರೆದುಕೊಂಡು ಹೋಗುವಾಗ ಪೊಲೀಸ್‌ ಇನ್‌ಸ್ಪೆಕ್ಟರ್ ವೀರಯ್ಯ ಅವರು ಶಿವರಾಂ ಅವರಿಗೆ, ‘ನಮ್ಮ ಬಗ್ಗೆ ತಪ್ಪು ತಿಳಿಯಬೇಡಿ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಅಷ್ಟೆ. ಮುಂದೆ ನೀವು ಮುಖ್ಯಮಂತ್ರಿಯೂ ಆಗಬಹುದು’ ಎಂದರು. ಇದನ್ನು ಕೇಳಿ ನನಗೆ ಸಿಟ್ಟು ಬಂತು. ‘ಅವರು ಮುಖ್ಯಮಂತ್ರಿ ಆದರೆ ನಾನೇ ಗೃಹ ಸಚಿವ ತಿಳಿದುಕೊಳ್ಳಿ’ ಎಂದು ಕೂಗಿದೆ.

ನಾನು ಜೈಲಿಗೆ ಹೋದಾಗ ಅಲ್ಲಿ ಸಿಂಧ್ಯಾ, ರಮೇಶ್‌ ಬಂದಗದ್ದೆ, ಎನ್‌.ಕೆ.ಗಣಪತಪ್ಪ ಮುಂತಾದವರು ಇದ್ದರು. ಅಡ್ವಾಣಿ, ಮಧು ದಂಡವತೆ ಕೂಡ ಅಲ್ಲಿಯೇ ಇದ್ದರು. ನಾನು ಅಷ್ಟರಲ್ಲಿಯೇ ಬಿಎಸ್‌ಸಿ ಮುಗಿಸಿದ್ದೆ. ಆದರೆ ನನಗೆ ನಿಜವಾದ ಪದವಿ ಸಿಕ್ಕಿದ್ದು ಜೈಲಿನಲ್ಲಿ. ಅಲ್ಲಿ ಸುಮಾರು 40–50 ಪುಸ್ತಕ ಓದಿದೆ. ಪ್ರತಿ ದಿನ ಅಲ್ಲಿ ರಾಜಕೀಯ ಚರ್ಚೆ ನಡೆಯುತ್ತಿತ್ತು. ಅಡ್ವಾಣಿ ಅವರು ಚುನಾವಣಾ ಪದ್ಧತಿ ಸುಧಾರಣೆ ಬಗ್ಗೆ, ತುರ್ತು ಪರಿಸ್ಥಿತಿಯ ಬಗ್ಗೆ ಭಾಷಣ ಮಾಡಿದರು. ಮಧು ದಂಡವತೆ ಅವರು ಮಾತಿನಲ್ಲೇ ನಮ್ಮನ್ನು ಚಂದ್ರಲೋಕಕ್ಕೆ ಕರೆದುಕೊಂಡು ಹೋಗಿ ಬಂದರು.  ಕೊನೆಗೆ 1976ರ ಜನವರಿ 18ಕ್ಕೆ ಅಡ್ವಾಣಿ ಅವರನ್ನು ಬಿಡುಗಡೆ ಮಾಡಿದರು. ನಾವೆಲ್ಲಾ ಅವರನ್ನು ಬೀಳ್ಕೊಟ್ಟೆವು. ಹೊರಕ್ಕೆ ಹೋಗಿದ್ದ ಅಡ್ವಾಣಿ ಮತ್ತೆ ಒಳಕ್ಕೆ ಬಂದು ನನ್ನನ್ನು ಮತ್ತು ಪಟ್ಟಾಭಿ ಅವರನ್ನು ಕರೆದು ನಮ್ಮ ಹೆಗಲ ಮೇಲೆ ಕೈ ಹಾಕಿ ನಿಂತರು. ಸುಮಾರು 15–20 ನಿಮಿಷ ಹಾಗೆಯೇ ನಿಂತಿದ್ದರು. ನಂತರ ಮೌನವಾಗಿ ಹೊರಕ್ಕೆ ಹೋದರು.

ನಾನು ಜ.22ಕ್ಕೆ ಹೊರಕ್ಕೆ ಬಂದೆ. ನಂತರ 1977ರಲ್ಲಿ ಚುನಾವಣೆ ಘೋಷಣೆಯಾಯಿತು. ಕೆ.ಎಸ್‌.ಹೆಗ್ಡೆ ಅವರು ಕೆಂಗಲ್‌ ಹನುಮಂತಯ್ಯ ಅವರ ವಿರುದ್ಧ ಗೆದ್ದರು. ಚುನಾವಣಾ ಪ್ರಚಾರಕ್ಕೂ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೆ ಭಾಷಣ ಮಾಡಲು ಬರುತ್ತಿರಲಿಲ್ಲ. ಬೇರೆಯವರು ನನ್ನ ಕತೆಯನ್ನು ಹೇಳುತ್ತಿದ್ದರು. ತುರ್ತು ಪರಿಸ್ಥಿತಿಯ ಅನುಭವಗಳು ನನಗೆ ಮುಂದಿನ ರಾಜಕೀಯ ಜೀವನಕ್ಕೆ ಅಡಿಪಾಯವಾದವು.

*ಪ್ರ: ಅಡ್ವಾಣಿ ಅವರು ಮತ್ತೆ ತುರ್ತು ಪರಿಸ್ಥಿತಿ ಬರುವ ಆತಂಕ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನೀವೇನಂತೀರಿ?
ಇಲ್ಲ. ಮತ್ತೆ ಅಂತಹ ಪರಿಸ್ಥಿತಿ ಬಾರದಂತೆ ಕಾನೂನು ತಿದ್ದುಪಡಿ ತರಲಾಗಿದೆ. ಇನ್ನು ಭಾರತಕ್ಕೆ ಅಂತಹ ದಿನಗಳು ಬಾರವು. ಆದರೆ ಇಂದಿನ ರಾಜಕೀಯ ಕಾರ್ಯಕರ್ತರಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT