ADVERTISEMENT

ನಿತ್ಯಾ ಸುರಭಿಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:45 IST
Last Updated 12 ಮೇ 2014, 19:45 IST
ನಿತ್ಯ ಸುರಭಿ (622/625)
ನಿತ್ಯ ಸುರಭಿ (622/625)   

ಮೈಸೂರು: ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಎ. ನಿತ್ಯಾ ಸುರಭಿ ಅವರು 625ಕ್ಕೆ 622 (ಶೇ 99.52) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ವಿದ್ಯಾರ್ಥಿನಿ ಪ್ರಥಮ ಭಾಷೆ ಸಂಸ್ಕೃತ – 125ಕ್ಕೆ 125, ದ್ವಿತೀಯ ಭಾಷೆ ಇಂಗ್ಲಿಷಿನಲ್ಲಿ 100ಕ್ಕೆ 99, ತೃತೀಯ ಭಾಷೆ ಕನ್ನಡದಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜವಿಜ್ಞಾನದಲ್ಲಿ 100 ಅಂಕ­ಗಳನ್ನು ಗಳಿಸಿದ್ದಾರೆ. ಇವರು ನಗರದ ಮೆಡ್‌ಪಲ್ಸ್‌ ಔಷಧ ಅಂಗಡಿಯ ಫಾರ್ಮಸಿಸ್ಟ್‌ ಬಿ.ಎಸ್‌. ಅನಂತಶಯನಂ ಮತ್ತು ರೂಪಶ್ರೀ ದಂಪತಿಯ ಪುತ್ರಿ.

‘ಈ ಬಾರಿ ರಾಜ್ಯಕ್ಕೇ ಪ್ರಥಮ ಸ್ಥಾನ ನಿನಗೆ ಬರುತ್ತದೆ, ಮಾಧ್ಯಮದವರು ಮನೆಗೆ ಬಂದು ಸಂದರ್ಶನ ಮಾಡು­ತ್ತಾರೆ ಎಂದು ಮೂರು ದಿನಗಳ ಹಿಂದೆ ಮಗಳಿಗೆ ತಮಾಷೆ ಮಾಡಿದ್ದೆ. ಊಹೆ ನಿಜವಾಗಿದೆ, ಮಗಳ ಸಾಧನೆ ಸಹಜವಾಗಿ ಖುಷಿ ತಂದಿದೆ. ಉತ್ತಮ ಸಾಧನೆ ಮಾಡಬೇಕು ಎಂದು ಬಹಳ ಶ್ರಮಪಟ್ಟಿದ್ದಳು ಅದಕ್ಕೆ ತಕ್ಕಂತೆ ಫಲಿತಾಂಶ ಬಂದಿದೆ’ ಎಂದು ಅನಂತಶಯನಂ ಅವರು ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಗಳು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುತ್ತಾಳೆ ಎಂಬ ನಿರೀಕ್ಷೆ ಇರಲಿಲ್ಲ. ಅವಳು ವ್ಯವಸ್ಥಿತವಾಗಿ ಆಸಕ್ತಿಯಿಂದ ವಿಷಯಗಳನ್ನು ಮನನ ಮಾಡಿಕೊಳ್ಳು­ತ್ತಿದ್ದಳು. ಅವಳು ಖಿನ್ನಳಾಗಿದ್ದಾಗ ಉತ್ಸಾಹ ತುಂಬುವ ಕೆಲಸ ಮಾಡು­ತ್ತಿದ್ದೆ, ಓದಿದ ವಿಷಯ ಗಳನ್ನು ಪುನರ್ಮನನ ಮಾಡುವಂತೆ ಸಲಹೆ ನೀಡುತ್ತಿದ್ದೆ. ಹೀಗೆಯೇ ಓದಬೇಕು, ಇಷ್ಟೇ ಅಂಕ ತೆಗೆಯಬೇಕು ಎಂದು ಯಾವತ್ತೂ ಒತ್ತಡ ಹೇರಿಲ್ಲ’ ಎನ್ನುತ್ತಾರೆ ತಾಯಿ ರೂಪಶ್ರೀ.

ತರಗತಿಯಲ್ಲಿ ವಿಷಯಗಳನ್ನು ನಿತ್ಯಾ ಚೆನ್ನಾಗಿ ಗ್ರಹಿಸುತ್ತಿದ್ದಳು. ಗ್ರಹಿಸಿದ ವಿಷಯವನ್ನು ಪರೀಕ್ಷೆ ಯಲ್ಲಿ ಅತ್ಯಂತ ವಿಶ್ಲೇಷಣಾತ್ಮಕವಾಗಿ ಮಂಡಿ ಸುತ್ತಿದ್ದಳು. ಕೈ ಬರಹ ಮುದ್ದಾಗಿತ್ತು. ಅಧ್ಯಯನದಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಳು. ಉತ್ತಮ ಸಾಧನೆ ಮಾಡುತ್ತಾಳೆ ಎಂಬ ಭರವಸೆ ಇತ್ತು ಎಂದು ವಿದ್ಯಾರ್ಥಿನಿಯ ಸಾಧನೆಯನ್ನು ಕನ್ನಡ ಶಿಕ್ಷಕ ಬಿ.ಎಂ. ಹರೀಶ್‌ ಶ್ಲಾಘಿಸಿದರು.

ಹೈಮಾವತಿಗೆ ತೃತೀಯ ಸ್ಥಾನ: ನಗರದ ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಯು. ಹೈಮಾವತಿ ಅವರು 625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಈ ವಿದ್ಯಾರ್ಥಿನಿ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125, ದ್ವಿತೀಯ ಭಾಷೆ ಇಂಗ್ಲಿಷಿನಲ್ಲಿ 100ಕ್ಕೆ 99, ತೃತೀಯ ಭಾಷೆ ಕನ್ನಡ – 100, ವಿಜ್ಞಾನ–100, ಗಣಿತ– 97 ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ಇವರು ವಕೀಲ ಬಿ.ಕೆ. ಉದಯಶಂಕರ್‌ ಮತ್ತು ಎಸ್‌. ಗೌರಮ್ಮ ದಂಪತಿ ಪುತ್ರಿ.

ಟಿಪ್ಪಣಿ ಮಾಡಿಕೊಂಡು ಓದುತ್ತಿದ್ದೆ
ಶೈಕ್ಷಣಿಕ ವರ್ಷದ ಆರಂಭದಿಂದಲೂ ಅಂದಿನ ಪಾಠವನ್ನು ಅಂದೇ ಓದುವ ಅಭ್ಯಾಸ ಇತ್ತು.  ಮೊದಲಿಗೆ ದಿನದಲ್ಲಿ ಎರಡರಿಂದ ಮೂರು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ದಿನಕ್ಕೆ ಏಳೆಂಟು ಗಂಟೆ ಓದುತ್ತಿದ್ದೆ. ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರ ಪ್ರೋತ್ಸಾಹ ಈ ಸಾಧನೆಗೆ ಸ್ಫೂರ್ತಿ. ಆರಂಭದಿಂದಲೂ ಪಾಠದಲ್ಲಿನ ಪ್ರಮುಖ ಅಂಶಗಳನ್ನು ಸ್ವತಃ ಟಿಪ್ಪಣಿ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೆ. ಮನೆಪಾಠಕ್ಕೂ ಹೋಗಿದ್ದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದೆ. ಪಿಯುನಲ್ಲಿ ವಿಜ್ಞಾನ ಸಂಯೋಜನೆ ಆಯ್ದುಕೊಂಡು ಅಭ್ಯಾಸ ಮಾಡುತ್ತೇನೆ ಎಂದರು.

ಗಮನವಿಟ್ಟು ಪಾಠ ಕೇಳುತ್ತಿದ್ದೆ
ತರಗತಿಯಲ್ಲಿ ಗಮನ ಇಟ್ಟು ಪಾಠ ಕೇಳುತ್ತಿದ್ದೆ ತರಗತಿಯಲ್ಲಿ ಗಮನ ಇಟ್ಟು ಪಾಠ ಆಲಿಸುತ್ತಿದ್ದೆ ಮತ್ತು ಮನೆಯಲ್ಲಿಯೂ ಚೆನ್ನಾಗಿ ಓದುತ್ತಿದ್ದೆ. ಪಾಠದಲ್ಲಿನ ಅರ್ಥವಾಗದ ಅಂಶಗಳು ಮತ್ತು ಗೊಂದಲಗಳನ್ನು ಶಿಕ್ಷಕರು ಬಗೆಹರಿಸುತ್ತಿದ್ದರು. ನಿರೀಕ್ಷಿಸಿದಷ್ಟು ಅಂಕ ಬಂದಿರುವುದು ಖುಷಿ ನೀಡಿದೆ.
– ಬಿ.ಯು. ಹೈಮಾವತಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.