ಮೈಸೂರು: ರಾಷ್ಟ್ರಕವಿ ಕುವೆಂಪು ಬಾಲ್ಯದಲ್ಲಿ ಹೇಗಿದ್ದರು? ಯೌವನದ ದಿನಗಳಲ್ಲಿ ಹೇಗೆ ಕಾಣಿಸುತ್ತಿದ್ದರು? ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಕೊಂಡ ಪ್ರಿಫೆಕ್ಟ್ ಫೋರ್ಡ್ ಕಾರು ಹೇಗಿತ್ತು?... ಇಂಥ ಸಂಗತಿಗಳಿಗೆ ಉತ್ತರವಾಗಿ `ಕುವೆಂಪು ಚಿತ್ರಶಾಲೆ' ಶನಿವಾರ (ಮೇ 4) ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ಮಾನಸಗಂಗೋತ್ರಿಯ ವಸ್ತುಸಂಗ್ರಹಾಲಯದಲ್ಲಿ ಉದ್ಘಾಟನೆಗೊಳ್ಳಲಿದೆ.
ಕುವೆಂಪು ಬದುಕಿನ ಅಪರೂಪದ ಕ್ಷಣಗಳ ದಾಖಲಾತಿಯ 35 ಛಾಯಾಚಿತ್ರಗಳು ಚಿತ್ರಶಾಲೆಯಲ್ಲಿವೆ. ಇವುಗಳನ್ನು ಕುವೆಂಪು ಪುತ್ರಿ ತಾರಿಣಿ ಚಿದಾನಂದ ಕೊಡುಗೆಯಾಗಿ ನೀಡಿದ್ದಾರೆ. ಈ ಎಲ್ಲ ಛಾಯಾಚಿತ್ರಗಳನ್ನು ತೆಗೆದವರು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ಕಪ್ಪು ಹಾಗೂ ಬಿಳಿ ಛಾಯಾಚಿತ್ರಗಳ ಜತೆಗೆ ಬಣ್ಣದ ಛಾಯಾಚಿತ್ರಗಳೂ ಇಲ್ಲಿವೆ. `ಯಮನ ಸೋಲು' ನಾಟಕದಲ್ಲಿ ಕುವೆಂಪು ಸತ್ಯವಾನ ಪಾತ್ರ ನಿರ್ವಹಿಸಿದ ಛಾಯಾಚಿತ್ರ, ಮೈಸೂರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕುವೆಂಪು ಪಾಲ್ಗೊಂಡಿದ್ದು, ಕವಿಶೈಲದಲ್ಲಿ ತಮ್ಮ ಸಾಹಿತಿ ಗೆಳೆಯರೊಂದಿಗೆ ಕುಳಿತು ತೆಗೆಸಿಕೊಂಡ ಛಾಯಾಚಿತ್ರ... ಹೀಗೆ ಅನೇಕ ಬಗೆಯವು ಅಲ್ಲಿವೆ. ಇವುಗಳೊಂದಿಗೆ ಕುವೆಂಪು ಕುಲಪತಿಯಾಗಿದ್ದಾಗ (1956-1960) ಮಾನಸಗಂಗೋತ್ರಿ ಹೆಸರನ್ನು ಇಟ್ಟ ವಿವರ ಉಳ್ಳ ಮಾಹಿತಿ ಅಲ್ಲಿದೆ. ವಿಶ್ವ ಮಾನವ ಸಂದೇಶದ ಸಪ್ತಸೂತ್ರ, ಅದರ ಇಂಗ್ಲಿಷ್ ಅವತರಣಿಕೆ, ವಿಶ್ವ ಮಾನವ ಗೀತೆಯಾದ `ಓ ನನ್ನ ಚೇತನ ಆಗು ನೀ ಅನಿಕೇತನ' ಜತೆಗೆ ವಿ.ಕೃ. ಗೋಕಾಕರು ಇಂಗ್ಲಿಷ್‌ಗೆ ಅನುವಾದಿಸಿದ್ದನ್ನು ಅಲ್ಲಿ ದಾಖಲಿಸಲಾಗಿದೆ. ಜತೆಗೆ ಕುವೆಂಪು ಕವಿತೆಯ ಸಾಲುಗಳನ್ನು ಅಲ್ಲಲ್ಲಿ ಬರೆಯಲಾಗಿದೆ.
ಇಂಥದೊಂದು ಚಿತ್ರಶಾಲೆ 3 ವರ್ಷಗಳಿಂದ ಉದ್ಘಾಟನೆಯಾಗದೆ ನೆನೆಗುದಿಗೆ ಬಿದ್ದಿತ್ತು. 2010ರಲ್ಲಿ ಕುವೆಂಪು ಕಾವ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಪ್ರೊ.ರಾಮೇಗೌಡ (ರಾಗೌ) ರೂಪಿಸಿದ ಯೋಜನೆ ಈಗ ಕಾರ್ಯಗತಗೊಳ್ಳುತ್ತಿದೆ. `ಅನಗತ್ಯವಾಗಿ ವಿಳಂಬವಾಗಿತ್ತು. ಸದ್ಯ ಉದ್ಘಾಟನೆ ಆಗುತ್ತಿದೆ. ಧಾರವಾಡದ ಸಾಧನಕೇರಿಯಲ್ಲಿರುವ ಬೇಂದ್ರೆ ಭವನದಲ್ಲಿ ಬೇಂದ್ರೆ ಅವರ ಅಪರೂಪದ ಫೋಟೊ ಗ್ಯಾಲರಿಯಿದೆ. ಅದನ್ನು ನೋಡಿದ ಮೇಲೆ ಕುವೆಂಪು ಅವರ ಭಾವಚಿತ್ರಗಳನ್ನು ಸಂಗ್ರಹಿಸಿ ಚಿತ್ರಶಾಲೆ ಆರಂಭಿಸುವ ಯೋಜನೆ ರೂಪಿಸಿದೆ' ಎನ್ನುತ್ತಾರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ರಾಮೇಗೌಡ.
`ವಸ್ತುಸಂಗ್ರಹಾಲಯದ ಭಾಗವಾಗಿ ಚಿತ್ರಶಾಲೆ ಇರುತ್ತದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಡಿ ಅದು ಕಾರ್ಯನಿರ್ವಹಿಸುತ್ತದೆ. ಕುವೆಂಪು ಛಾಯಾಚಿತ್ರಗಳ ಜತೆಗೆ ಅವರ ನಾಟಕಗಳು ರಂಗಕ್ಕೇರಿದ್ದು, ಅವುಗಳ ಛಾಯಾಚಿತ್ರಗಳನ್ನೂ ಸಂಗ್ರಹಿಸುವ ಉದ್ದೇಶವಿದೆ. ಜತೆಗೆ ಸಾಹಿತಿ ಚದುರಂಗ ಅವರು ನಿರ್ದೇಶಿಸಿದ್ದ ಸಾಕ್ಷ್ಯಚಿತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಗ್ರಹಿಸಿ ಇಲ್ಲಿ ಇಡಲಾಗುತ್ತದೆ. ಆಸಕ್ತರ ಅಪೇಕ್ಷೆ ಮೇರೆಗೆ ಅದನ್ನು ಆಗಾಗ ತೋರಿಸಲಾಗುತ್ತದೆ' ಎನ್ನುತ್ತಾರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ. ತಳವಾರ.
`ಛಾಯಾಚಿತ್ರಗಳ ಜತೆಗೆ ಕುವೆಂಪು ಅವರ ಒಟ್ಟು ಕೃತಿಗಳ ಹಸ್ತಪ್ರತಿ ಹಾಗೂ ಪ್ರಕಟಿತ ಕೃತಿಗಳ ಪ್ರದರ್ಶನ ಇಡಲಾಗುತ್ತದೆ. ಇದರಿಂದ ಓದುಗರಿಗೆ ಅವರ ಕೃತಿಗಳ ಪರಿಚಯವಾದಂತಾಗುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಕರು ಹೀಗೆ ಎಲ್ಲರಿಗೂ ಇಷ್ಟವಾಗುತ್ತದೆ ಚಿತ್ರಶಾಲೆಗೆ ಉಚಿತ ಪ್ರವೇಶ ಇರುತ್ತದೆ' ಎಂದು ವಿವರಿಸುತ್ತಾರೆ ಪ್ರೊ.ತಳವಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.