ADVERTISEMENT

ನೇತ್ರಾವತಿ ತಿರುವು ಬದಲು ಕೆರೆಗಳ ಪುನಶ್ಚೇತನವಾಗಲಿ

ಆಳ್ವಾಸ್‌ ನುಡಿಸಿರಿ ಗೋಷ್ಠಿಯಲ್ಲಿ ಪರಿಸರವಾದಿ ದಿನೇಶ್ ಹೊಳ್ಳ ಒತ್ತಾಯ

ಕೋಡಿಬೆಟ್ಟು ರಾಜಲಕ್ಷ್ಮಿ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ರತ್ನಾಕರ ವರ್ಣಿ ವೇದಿಕೆ (ಮೂಡುಬಿದಿರೆ): ಬಯಲು ಸೀಮೆಗಳಲ್ಲಿ ಬತ್ತಿ ಹೋಗಿರುವ ಕೆರೆ, ನದಿಗಳನ್ನು ಪುನಶ್ಚೇತನಗೊಳಿಸಿದರೆ ಅಲ್ಲಿನ ನೀರಿನ ಸಮಸ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಬಗೆಹರಿಸಬಹುದು. ಇಂತಹ ಯೋಜನೆಯನ್ನು ಸರ್ಕಾರ  ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಎತ್ತಿನಹೊಳೆ ತಿರುವು ಯೋಜನೆಯ ಅಗತ್ಯ ಕಂಡುಬರುವುದಿಲ್ಲ ಎಂದು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹೇಳಿದರು.

ಆಳ್ವಾಸ್ ನುಡಿಸಿರಿಯ ಕೊನೆಯ ದಿನ ಭಾನುವಾರ ನಡೆದ ‘ನೇತ್ರಾವತಿ ನೀರಿನ ಬಳಕೆ ಮತ್ತು ಹಂಚಿಕೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು. ಬಯಲು ಸೀಮೆಗೆ ನೀರು ಕೊಡುವುದಕ್ಕೆ ದಕ್ಷಿಣ ಕನ್ನಡ ಜನರ ವಿರೋಧ ಅಲ್ಲ. ಅಲ್ಲಿಗೆ ಕೊಡುವಷ್ಟು ನೀರು ನೇತ್ರಾವತಿಯಲ್ಲಿ ಇಲ್ಲ ಎಂದರು.

ನೇತ್ರಾವತಿಯಿಂದ ಸಮುದ್ರಕ್ಕೆ ಹೋಗುವ ವ್ಯರ್ಥ ನೀರನ್ನು ಯೋಜನೆಗೆ ಬಳಕೆ ಮಾಡಲಾಗುವುದೆಂದು ಹೇಳುತ್ತಾರೆ. ಸಮುದ್ರಕ್ಕೆ ಸೇರಿದ ನೀರು ಮತ್ತೆ ಆವಿಯಾಗಿ ಮಳೆಯ ರೂಪದಲ್ಲಿ ಪಶ್ಚಿಮ ಘಟ್ಟಕ್ಕೆ ಬೀಳುವುದರಿಂದ ಇಲ್ಲಿ ವ್ಯರ್ಥ ನೀರು ಇಲ್ಲ ಎಂದರು.
ನ್ಯಾಯಮಂಡಳಿ ಕೊಟ್ಟ ನೀರು ಬಳಕೆಯಾಗುತ್ತಿಲ್ಲ: ಕಾವೇರಿ ನ್ಯಾಯಮಂಡಳಿ ತಮಿಳುನಾಡು ನಿರೀಕ್ಷಿಸಿದ್ದ 252 ಟಿಎಂಸಿ ಬದಲು 419 ಟಿಎಂಸಿ ನೀರನ್ನು ನೀಡಿದೆ. ಆದರೆ ಕರ್ನಾಟಕಕ್ಕೆ ಕೊಟ್ಟ 270 ಟಿಎಂಸಿ ನೀರನ್ನು ಕೂಡ ಕೃಷಿಗೆ ಸರಿಯಾಗಿ ಸದ್ಬಳಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತ ಮುಖಂಡ ಡಾ.ಕೆ.ಸಿ.ಬಸವರಾಜು ಹೇಳಿದರು.

ಕಾವೇರಿ ನೀರಿನ ಬಳಕೆ ಮತ್ತು ಹಂಚಿಕೆ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ರಾಮಚಂದ್ರನ್‌ ಮತ್ತು ರಾಜ್ಯ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ಕಾವೇರಿ ಜಲವಿವಾದ ಇತ್ಯರ್ಥದ ಹಂತಕ್ಕೆ ಬಂದು ಕೊನೆಯ ಕ್ಷಣದಲ್ಲಿ ಮುರಿದುಬಿತ್ತು.

ನಂತರ ಅಂತರರಾಷ್ಟ್ರೀಯ ಜಲನಿಯಮದ ಪ್ರಕಾರ 2003ರಿಂದ 2007ರವರೆಗೆ ಎರಡು ರಾಜ್ಯಗಳ ತಲಾ 13 ರೈತರನ್ನು ಒಳಗೊಂಡ ಸಮಿತಿ 13 ಬಾರಿ ಸಭೆ ನಡೆಸಿ ಮಾತುಕತೆ ಮಾಡಿದ್ದವು. ಈ ಬಗ್ಗೆ ರಾಜ್ಯದ ರಾಜಕಾರಣಿಗಳು ಮತ್ತು ರೈತರ ಮಧ್ಯೆ ಏಕತೆ ಮೂಡಿಬಂದರೂ ತಮಿಳುನಾಡು ಕಡೆಯಿಂದ ಸಹಮತಕ್ಕೆ ಬರಲು ಸಾಧ್ಯವಾಗದೆ ರಾಜಿ ಸೂತ್ರ ನನೆಗುದಿಗೆ ಬಿತ್ತು.

ತದನಂತರ ಕಾವೇರಿ ಪ್ರಾಧಿಕಾರ ನೀಡಿದ ತೀರ್ಪು ಕನ್ನಡಿಗರಿಗಂತೂ ಅನ್ಯಾಯವೇ ಆಗಿದೆ. ನಮ್ಮ ದುರಾದೃಷ್ಟಕ್ಕೆ ಕೋರ್ಟ್‌  ಅದೇಶದ ಪ್ರಕಾರ ಸಿಕ್ಕ 270 ಟಿಎಂಸಿ ನೀರನ್ನು ಹೊಲಕ್ಕೆ ಸರಿಯಾಗಿ ಬಳಕೆ ಮಾಡಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಆ ಕೆಲಸ  ಆಗಬೇಕು. ಜತೆಗೆ ಕೃಷ್ಣಾ ನದಿಯಿಂದ 179 ಟಿಎಂಸಿ ನೀರು ಕೂಡ ರಾಜ್ಯಕ್ಕೆ ಸಿಗಬೇಕು ಎಂದು ಆಗ್ರಹಿಸಿದರು.

ನರಗುಂದದ ರೈತ ಮುಖಂಡ ವಿಕಾಸ್ ಸೊಪ್ಪಿನ್ ಅವರು ಮಹಾದಾಯಿ ಯೋಜನೆ ಬಗ್ಗೆ ಮಾತನಾಡಿ, ಮಲಪ್ರಭೆಗೆ ಸವದತ್ತಿ ಬಳಿ ಅಣೆಕಟ್ಟೆ ನಿರ್ಮಿಸಿದ್ದರೂ ಇದುವರೆಗೆ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿಲ್ಲ. ಮಲಪ್ರಭೆ ಮತ್ತು ಮಹಾದಾಯಿ ನಡುವಿನ ಅಂತರ 8ಕಿ.ಮೀ 210ನ ಟಿಎಂಸಿ ನೀರಿರುವ ಮಹಾದಾಯಿಯಿಂದ ರಾಜ್ಯದ ಬೇಡಿಕೆಯ 10 ಟಿಎಂಸಿ ನೀರು ತೆಗೆಯಲು ಗೋವಾ ಸರ್ಕಾರ ತಡೆಯೊಡ್ಡುತ್ತಿರುವುದರಿಂದ ಮಹಾದಾಯಿಯ 65 ಉಪನದಿಗಳ ಪೈಕಿ ಒಂದೆನಿಸಿದ ಕಳಸಾ ಬಂಡೂರಿಯಿಂದ 7.56 ಟಿಎಂಸಿ ನೀರನ್ನು ಪಡೆಯುವುದಕ್ಕೆ ಕರ್ನಾಟಕಕ್ಕೆ ಅಡ್ಡಿಯಾಗದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.