ADVERTISEMENT

ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿ

9ನೇ ತರಗತಿಯ ಬಾಲಕಿಗೆ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2015, 19:30 IST
Last Updated 16 ಫೆಬ್ರುವರಿ 2015, 19:30 IST

ಚಾಮರಾಜನಗರ: ಪೋಷಕರು ಮಾಡಿರುವ ಮದು­ವೆಯ ನಿಶ್ಚಿತಾರ್ಥ ರದ್ದುಪಡಿಸಿ ಓದಲು ಅವಕಾಶ ಮಾಡಿಕೊಡುವಂತೆ 9ನೇ ತರಗತಿ ವಿದ್ಯಾರ್ಥಿನಿಯು ಕಾರ್ಯ­ಕ್ರಮಕ್ಕೆ ಬಂದಿದ್ದ ನ್ಯಾಯಾಧೀಶರಿಗೆ ಮನವಿ ಮಾಡಿ ಕಣ್ಣೀರಿಟ್ಟ ಘಟನೆ ನಗರದ ಖಾಸಗಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆಯಿತು.

ಶಾಲೆಯಲ್ಲಿ ಕಾನೂನು ಅರಿವು ಮತ್ತು ಮಕ್ಕಳ ಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಭೃಂಗೇಶ್‌ ಭಾಷಣ ಮಾಡಿದರು. ಬಳಿಕ ಮಕ್ಕಳಿಗೆ ಕಾನೂನು ಸಂಬಂಧ ಪ್ರಶ್ನೆ ಕೇಳಲು ಸೂಚಿಸಲಾಯಿತು.
12 ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಿಸಿ ದಂತೆ ಪ್ರಶ್ನೆ ಕೇಳಿದರು. ಈ ವೇಳೆ ವಿದ್ಯಾರ್ಥಿನಿ­ಯೊಬ್ಬಳು ‘ಬಾಲ್ಯವಿವಾಹ ತಡೆಯಲು ಕಾನೂನು ಇಲ್ಲವೇ? ಬಾಲ್ಯವಿವಾಹ ಮಾಡುವವರಿಗೆ ಶಿಕ್ಷೆ ವಿಧಿಸುವು­ದಿಲ್ಲವೇ?’ ಎಂದು ಪ್ರಶ್ನಿಸಿದಳು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಭೃಂಗೇಶ್‌, ‘ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಇದನ್ನು ತಡೆಯಲು ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಇಲಾಖೆ ಕಾರ್ಯ ನಿರ್ವಹಿಸುತ್ತಿವೆ’ ಎಂದರು.

ಆ ವೇಳೆ ‘ನನ್ನ ತಂದೆ–ತಾಯಿ ನನ್ನ ಮದುವೆಗೆ ನಿಶ್ಚಿತಾರ್ಥ ಮಾಡಿದ್ದಾರೆ. ನಾನು ಉನ್ನತ ಶಿಕ್ಷಣ ಪಡೆಯಬೇಕು. ನನ್ನ ಮದುವೆ ನಿಲ್ಲಿಸಿ ಓದಲು ಅವಕಾಶ ಮಾಡಿಕೊಡಬೇಕು’ ಎಂದು ಕಣ್ಣೀರಿ­ಟ್ಟಳು. ಇದರಿಂದ ಕಾರ್ಯಕ್ರಮ ದಲ್ಲಿ ಹಾಜರಿದ್ದವರು ತಬ್ಬಿಬ್ಬು ಗೊಂಡರು.
ನ್ಯಾಯಾಧೀಶರು, ‘ಕೂಡಲೇ, ವಿದ್ಯಾರ್ಥಿನಿಯ ಮನೆಗೆ ತೆರಳಿ ಆಕೆಯ ತಂದೆ– ತಾಯಿಗೆ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಬೇಕು. ಅವರು ಒಪ್ಪದಿದ್ದರೆ  ನನ್ನ ಬಳಿಗೆ ಕರೆತರಬೇಕು’ ಎಂದು ಸ್ಥಳ­ದಲ್ಲಿಯೇ ಹಾಜರಿದ್ದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮತ್ತು ಡಿವೈಎಸ್‌ಪಿ ಅವರಿಗೆ ಸೂಚಿಸಿದರು. ‘ಮಂಗಳವಾರ ವಿದ್ಯಾರ್ಥಿನಿಯ ಪೋಷಕರ ಮನೆಗೆ ತೆರಳಿ ಅವರ ಮನವೊಲಿಸ ಲಾಗುವುದು’ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಟಿ.ಜೆ. ಸುರೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.