ಚಿಕ್ಕಬಳ್ಳಾಪುರ: ‘ಕನಿಷ್ಠ ಪಿಯುಸಿ ಹಂತದ ಪಠ್ಯದಲ್ಲಿಯಾದರೂ ಕೌಶಲ ಅಳವಡಿಸುವ ಚಿಂತನೆ ನಡೆದಿದೆ. ಈ ವಿಚಾರವಾಗಿ ದೆಹಲಿ ಸೇರಿದಂತೆ ವಿವಿಧ ಕಡೆಗಳಿಂದ ತಜ್ಞರಿಂದ ವರದಿಗಳನ್ನು ಸಂಗ್ರಹಿಸಿ ಕ್ರೋಢೀಕರಿಸುತ್ತಿದ್ದೇವೆ. ಜನವರಿಯಿಂದ ಈ ಯೋಜನೆ ಪ್ರಾರಂಭಿಸಿ ಮೂರು ತಿಂಗಳಲ್ಲಿ ಒಂದು ಹಂತಕ್ಕೆ ತರುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಇವತ್ತು ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಶಿಕ್ಷಣ ಪೂರೈಸಿದವರಿಗೆ ಯಾವುದೇ ಬಗೆಯ ಉದ್ಯೋಗವಾಗಲಿ ಸಿಗುವಂತಾಗಬೇಕು. ಇವತ್ತು ಶಿಕ್ಷಣ ಪಡೆದವರಲ್ಲಿ ಶೇ 20–21 ರಷ್ಟು ಯುವಜನರಿಗೆ ಮಾತ್ರ ಉದ್ಯೋಗಾವಕಾಶ ದೊರೆಯುತ್ತಿದೆ. ಉಳಿದವರು ನಿರುದ್ಯೋಗಿಗಳಾಗುತ್ತಿದ್ದಾರೆ’ ಎಂದು ತಿಳಿಸಿದರು.
‘ಹಿಂದಿನಿಂದಲೂ ಯಾರು ಕೂಡ ಈ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬದಲಾವಣೆ ಮಾಡಿದರೆ ತಾನೆ ಶಿಕ್ಷಣವನ್ನು ಗುಣಾತ್ಮಕ ಮಾಡಲು ಸಾಧ್ಯವಾಗುತ್ತದೆ? ನಾವು ಆ ದಿಕ್ಕಿನಲ್ಲಿ ಬದಲಾವಣೆ ತರಲು ಯೋಚಿಸುತ್ತಿದ್ದೇವೆ. ಅದಕ್ಕಾಗಿ ಎರಡ್ಮೂರು ಬಾರಿ ಕುಲಪತಿಗಳ ಸಭೆ ನಡೆಸಿದ್ದೇನೆ. ಕಸ್ತೂರಿ ರಂಗನ್ ಅವರೊಂದಿಗೆ ಕೂಡ ಮಾತನಾಡಿರುವೆ. ಹಿರಿಯ ಶಿಕ್ಷಣ ತಜ್ಞರನ್ನು ಕರೆಯಿಸಿ ಚರ್ಚಿಸಿ ಸಲಹೆ ಪಡೆಯುತ್ತಿದ್ದೇವೆ’ ಎಂದರು.
‘ಇವತ್ತು ಯುವ ಜನರಿಗೆ ಗುಣಮಟ್ಟದ ಶಿಕ್ಷಣ, ಪ್ರತಿಯೊಬ್ಬರಿಗೂ ಸರ್ಕಾರಿಯೋ, ಖಾಸಗಿಯೋ ಉದ್ಯೋಗ ಸಿಗಬೇಕು. ಎಲ್ಲಿ ಪಠ್ಯದಲ್ಲಿ ಕೌಶಲ ಅಳವಡಿಸಲಾಗಿದೆ ಅಲ್ಲಿಗೆ ಹೋಗಿ ಅದರಿಂದ ಆಗಿರುವ ಪ್ರಯೋಜನಗಳ ಅಧ್ಯಯನ ನಡೆಸಲಾಗುತ್ತದೆ. ನ.28ಕ್ಕೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ವಿಚಾರ ಸಂಕೀರಣವೊಂದು ನಡೆಯಲಿದೆ. ಅದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಭೂತ, ಭವಿಷ್ಯದ ಬಗ್ಗೆ ಚರ್ಚೆ ನಡೆಸಿ ಪರಿಣಾಮಕಾರಿ ಬದಲಾವಣೆ ತರಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.
‘ನಮ್ಮ ಕಾಲೇಜುಗಳಲ್ಲಿ ಬಹಳಷ್ಟು ಪ್ರಾಂಶುಪಾಲ, ಉಪನ್ಯಾಸಕರ ಹುದ್ದೆಗಳು ಖಾಲಿ ಉಳಿದಿವೆ. 4,000ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ನೇರ ನೇಮಕಾತಿಗೆ ಹಣಕಾಸು ಇಲಾಖೆಗೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ. ಬೋಧಕ ವರ್ಗಕ್ಕೆ ಮೊದಲು ತರಬೇತಿಯಾಗಬೇಕಿದೆ. ಅದಕ್ಕೂ ಕ್ರಮಕೈಗೊಳ್ಳುತ್ತೇವೆ. ವಿವಿಧ ಕಾರಣಗಳಿಂದ ಈವರೆಗೆ ಇಲಾಖೆಯತ್ತ ಹೆಚ್ಚಿನ ಗಮನ ಕೊಡಲು ಆಗಿರಲಿಲ್ಲ. ಇನ್ನು ಮುಂದೆ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.
‘ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ಬಿಡುಗಡೆ ಮಾಡಿದೆ. ಆದರೆ ಅದನ್ನು ಜಂಟಿ ನಿರ್ದೇಶಕರು ಶಿಕ್ಷಕರಿಗೆ ತಲುಪಿಸಿರಲಿಲ್ಲ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವೆ. ಅತಿಥಿ ಉಪನ್ಯಾಸಕರಿಗೆ ಈ ವಾರದಲ್ಲಿ ಸಂಬಳ ದೊರೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.