ಬೆಂಗಳೂರು: `ಪತ್ರಿಕೆಗಳು ಜನಪರ ಆಗಿರಬೇಕು. ಜನರ ಮನಸ್ಸನ್ನು ತಿದ್ದುವ ಕೆಲಸ ಮಾಡಬೇಕು. ಈ ಜವಾಬ್ದಾರಿಯನ್ನು `ಪ್ರಜಾವಾಣಿ' ಪತ್ರಿಕೆ ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದೆ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
`ವಿಕಾಸ ಪ್ರಕಾಶನ'ದ ಆಶ್ರಯದಲ್ಲಿ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ `ಪ್ರಜಾವಾಣಿ' ಬಳಗದ ನಾಲ್ವರು ಪತ್ರಕರ್ತೆಯರ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
`ದಿನಪತ್ರಿಕೆಗಳು ದೇಶದ ಚರಿತ್ರೆ ಬರೆಯುತ್ತವೆ. ನಾಳೆಯ ದಿನಚರಿ ದಾಖಲೀಕರಣ ಮಾಡುವ ಜವಾಬ್ದಾರಿ ನಿರ್ವಹಿಸುತ್ತಿವೆ. ಸಮಾಜ ಕಟ್ಟುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು. `ಪ್ರಜಾವಾಣಿ'ಯಲ್ಲಿ ಮೀಸಲಾತಿ ಕುರಿತ ಸಂವಾದ ಬಹಳ ಚೆನ್ನಾಗಿ ಬರುತ್ತಿದೆ' ಎಂದು ಶ್ಲಾಘಿಸಿದರು.
`ಕನ್ನಡಿಗರ ಮನಸ್ಸಿನ, ಚಿಂತನೆಯ ಹಾಗೂ ಭಾವಪ್ರಪಂಚದ ಭಾಗವಾಗಿ `ಪ್ರಜಾವಾಣಿ' ಬೆಳೆದಿದೆ. ಕನ್ನಡದ ಹಿತಚಿಂತನೆಯ ಕೆಲಸ ಮಾಡುತ್ತಿರುವ ಪತ್ರಿಕೆ ಕನ್ನಡ ಕಟ್ಟುವ ಹಾಗೂ ಕನ್ನಡ ಮನಸ್ಸುಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ. ನವ್ಯ ಚಳವಳಿ, ರಂಗ ಚಳವಳಿಗೆ ಪತ್ರಿಕೆ ಪ್ರೋತ್ಸಾಹ ನೀಡಿದೆ' ಎಂದರು.
`ಈ ಕೃತಿಗಳಲ್ಲಿ ಸೊಗಸಾದ, ಸುಸಂಸ್ಕೃತ ಕನ್ನಡ ಇದೆ. ಈ ಕೃತಿಗಳು ಇತಿಹಾಸದ ತುಂಡುಗಳು. ವಿಶಿಷ್ಟ ಆಲೋಚನಾ ಕ್ರಮಗಳು ಈ ಕೃತಿಗಳಲ್ಲಿ ಇವೆ' ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯವಾಹಿನಿಗೆ ಬರಬೇಕು: `ಪ್ರಜಾವಾಣಿ'ಯ ಸಂಪಾದಕ ಕೆ.ಎನ್.ಶಾಂತಕುಮಾರ್ ಮಾತನಾಡಿ, `ಪರ್ತಕರ್ತೆಯರಿಗೆ ಬಹಳ ಕಷ್ಟಗಳು ಹಾಗೂ ಸವಾಲುಗಳು ಇವೆ. ಸಮಾಜ ಬಹುಪಾಲು ಪುರುಷ ಪ್ರಧಾನವಾಗಿದೆ. ಅನೇಕ ಸವಾಲುಗಳನ್ನು ಎದುರಿಸಿ ಪತ್ರಕರ್ತೆಯರು ಮುಖ್ಯವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಹೊಸಪೀಳಿಗೆಯ ಯುವತಿಯರು ಪತ್ರಿಕೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಡಿಮೆ' ಎಂದು ಬೇಸರ ವ್ಯಕ್ತಪಡಿಸಿದರು.
`ಪತ್ರಿಕೆಗಳಲ್ಲಿ ಸಮಾಜದ ಚಿತ್ರಣ ಆಮೂಲಾಗ್ರವಾಗಿ ಬರಲು ಪತ್ರಕರ್ತೆಯರ ದೃಷ್ಟಿಕೋನ ಸಹ ಬಹಳ ಮುಖ್ಯ. ಯುವತಿಯರು ಎಲ್ಲ ರೀತಿಯ ನೆಪ ಹೇಳಿ ಸುದ್ದಿಮನೆಯ ಅಂಚಿನಲ್ಲಿ ಕೆಲಸ ಮಾಡಲು ಇಷ್ಟಪಡುತ್ತಿದ್ದಾರೆ. ಈ ಮನೋಭಾವ ಬಿಟ್ಟು ಯುವತಿಯರು ವರದಿಗಾರರು, ಜಿಲ್ಲಾ ವರದಿಗಾರರಾಗಬೇಕು. ಅವರು ರಾಜಕೀಯ ಹಾಗೂ ಅಪರಾಧ ಸಂಬಂಧಿ ಸುದ್ದಿಗಳನ್ನು ವರದಿ ಮಾಡಲು ಆಸಕ್ತಿ ತೋರಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.
ಅಭಿನಂದನೆಗೆ ಪಾತ್ರರು: `ತರಂಗ'ದ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್.ಪೈ ಮಾತನಾಡಿ, `ಮಾಧ್ಯಮಗಳಲ್ಲಿ ಪತ್ರಕರ್ತೆಯರು ದೊಡ್ಡ ಸ್ಥಾನ ಪಡೆದಿದ್ದಾರೆ. ಮನೆಕೆಲಸ ಸೇರಿದಂತೆ ಹಲವು ಬಗೆಯ ಒತ್ತಡಗಳ ನಡುವೆ ಮಾಧ್ಯಮಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆಯರು ಅಭಿನಂದನೆಗೆ ಅರ್ಹರು' ಎಂದರು.
`ಈಚಿನ ದಿನಗಳಲ್ಲಿ ಗ್ಲಾಮರಸ್ ಎಂಬ ಕಾರಣಕ್ಕೆ ಹುಡುಗಿಯರು ದೃಶ್ಯಮಾಧ್ಯಮಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದೊಂದು ವಿಶೇಷ ಬೆಳವಣಿಗೆ' ಎಂದು ಅವರು ಅಭಿಪ್ರಾಯಪಟ್ಟರು. `ಪ್ರಜಾವಾಣಿ'ಯ ಮುಖ್ಯ ಉಪಸಂಪಾದಕ ಎನ್.ಎ.ಎಂ.ಇಸ್ಮಾಯಿಲ್ ಪುಸ್ತಕ ಪರಿಚಯ ಮಾಡಿದರು.
ಪುಸ್ತಕಗಳ ಬಿಡುಗಡೆ
ಸಮಾರಂಭದಲ್ಲಿ `ಪ್ರಜಾವಾಣಿ'ಯ ಸಹಸಂಪಾದಕಿ ಸಿ.ಜಿ.ಮಂಜುಳಾ ಅವರ `ಮಾತುಕತೆ' ಪತ್ರಿಕಾ ಸಂದರ್ಶನಗಳ ಸಂಕಲನ, ಪತ್ರಿಕೆಯ ಸಹಾಯಕ ಸಂಪಾದಕಿ ಆರ್.ಪೂರ್ಣಿಮಾ ಅವರ `ಮಣ್ಣಿನ ಕಣ್ಣು' ಅಂಕಣ ಬರಹಗಳ ಸಂಕಲನ, ಹಿರಿಯ ಪತ್ರಕರ್ತೆ ಕುಶಲಾ ಡಿಮೆಲೊ ಅವರ `ಪ್ರಜಾವಾಣಿಯಲ್ಲಿ ನನ್ನ ದಿನಗಳು' ಅನುಭವ ಕಥನ, `ಸುಧಾ' ವಾರಪತ್ರಿಕೆಯ ಹಿರಿಯ ಉಪಸಂಪಾದಕಿ ಉಮಾ ಅನಂತ್ ಅವರ `ವಾದ್ಯ ವೈವಿಧ್ಯ' ಸಂಗೀತ ವಾದ್ಯಗಳ ಪರಿಚಯ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.