ADVERTISEMENT

ಪತ್ರ ಪಠಣ ತೆರೆದಿಟ್ಟ ಸ್ವಾರಸ್ಯ!

ಧಾರವಾಡ ಸಾಹಿತ್ಯ ಸಂಭ್ರಮ

ಶೈಲಜಾ ಹೂಗಾರ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ನನಗೆ ಬಂದ ಸಾಹಿತಿಗಳ ಪತ್ರ’ ಗೋಷ್ಠಿಯಲ್ಲಿ ಸಾಹಿತಿಗಳಾದ ಮೀನಾ ಮೈಸೂರು, ವೀರಣ್ಣ ರಾಜೂರು, ಮಲ್ಲಿಕಾರ್ಜುನ ಹಿರೇಮಠ, ಬಿ.ಆರ್‌.ಲಕ್ಷ್ಮಣರಾವ್‌, ನಾ.ಡಿಸೋಜ ಹಾಗೂ ವೀಣಾ ಶಾಂತೇಶ್ವರ
ನನಗೆ ಬಂದ ಸಾಹಿತಿಗಳ ಪತ್ರ’ ಗೋಷ್ಠಿಯಲ್ಲಿ ಸಾಹಿತಿಗಳಾದ ಮೀನಾ ಮೈಸೂರು, ವೀರಣ್ಣ ರಾಜೂರು, ಮಲ್ಲಿಕಾರ್ಜುನ ಹಿರೇಮಠ, ಬಿ.ಆರ್‌.ಲಕ್ಷ್ಮಣರಾವ್‌, ನಾ.ಡಿಸೋಜ ಹಾಗೂ ವೀಣಾ ಶಾಂತೇಶ್ವರ   

ಧಾರವಾಡ: ಸಾಹಿತ್ಯ ಸಂಭ್ರಮದ ಐದನೇ ಆವೃತ್ತಿಯ ಎರಡನೇ ಗೋಷ್ಠಿ ‘ನನಗೆ ಬಂದ ಸಾಹಿತಿಗಳ ಪತ್ರ’. ಸಾಹಿತಿ ಬಿ.ಆರ್‌. ಲಕ್ಷ್ಮಣ್‌ರಾವ್‌ ಅವರ ನಿರ್ದೇಶನದಲ್ಲಿ ಆರಂಭವಾದಾಗ ಸಭಿಕರ ಮುಖದಲ್ಲಿ ಕಣ್ಣುಗಳಲ್ಲಿ ಕುತೂಹಲವೊಂದೇ ಎದ್ದು ಕಾಣುತ್ತಿದ್ದುದು. ಪತ್ರ ಸಂಸ್ಕೃತಿ, ಪರಂಪರೆಯೇ ನಮ್ಮದು, ಈಗ ಅದರ ಸವಿನೆನಪಷ್ಟೆ ಎನ್ನುತ್ತ ಮಾತಿಗೆ ಮೊದಲಿಟ್ಟರು ಲಕ್ಷ್ಮಣ್‌ರಾವ್‌.

ಸುಮತೀಂದ್ರ ನಾಡಿಗರ ಸಂಪಾದಕತ್ವದಲ್ಲಿ ಬಂದ ಗೋಪಾಲಕೃಷ್ಣ ಅಡಿಗರ ಪತ್ರಗಳು, ಎ.ಎನ್‌. ಮೂರ್ತಿರಾಯರ ಚಿತ್ರಗಳು ಪತ್ರಗಳು, ಪುತಿನ ಟ್ರಸ್ಟ್‌ನಿಂದ ಬಂದ ಪು.ತಿ.ನ ಮತ್ತು ತಿ.ನಂ.ಶ್ರೀ ನಡುವಣ ಪತ್ರ ವ್ಯವಹಾರ ಹೀಗೆ ಸಾಹಿತ್ಯಿಕ ವಲಯದಲ್ಲಿ ಸಾಹಿತಿಗಳ ಪತ್ರಗಳೂ ಒಂದು ಸಾಹಿತ್ಯ ಪ್ರಕಾರದಂತೆಯೇ ಮೌಲ್ಯ ಗಳಿಸಿ ದಾಖಲಾದ ಉದಾಹರಣೆಗಳನ್ನು ಅವರು ಸ್ಮರಿಸಿದಂತೆ ಗೋಷ್ಠಿಗೆ ಗಾಂಭೀರ್ಯ ಒದಗಿತು.

ಮದುವೆ ನಿಶ್ಚಯವಾದ ಬಳಿಕ ಒಂದೂವರೆ ವರ್ಷ ಪ್ರೊಬೆಷನರಿ ಅವಧಿಯಲ್ಲಿ ಪತ್ನಿಗೆ ಬರೆದ ಪತ್ರಗಳ ಪ್ರಸ್ತಾಪವಾದಾಗ ಯುವಕರ ಕಡೆಯಿಂದ ಹೋ ಎಂಬ ನಗು ಅಲೆಯಾಯಿತು. ಬೇರೆ ಅಮೂಲ್ಯ ಪತ್ರಗಳೂ ಇವೆ ಎಂದು ಚಟಾಕಿ ಹಾರಿಸಿದರು ಲಕ್ಷ್ಮಣ್‌ರಾವ್‌.

ಸಾಹಿತ್ಯ ಕ್ಷೇತ್ರಕ್ಕೆ ಬಂದ ಹೊಸತರಲ್ಲಿ ಬೆಂಗಳೂರಿನಲ್ಲಿ ಲಂಕೇಶ್‌ ಬಣ ಮತ್ತು ಮೈಸೂರಿನಲ್ಲಿ ಯು.ಆರ್‌. ಅನಂತಮೂರ್ತಿ ಬಣ ಎಂದೆಲ್ಲ ರಾಜಕೀಯ ಇತ್ತು. ಇವರ ಐದಾರು ಕವನಗಳನ್ನು ಎಚ್‌.ಎಸ್‌. ವೆಂಕಟೇಶಮೂರ್ತಿ ಅಕ್ಷರ ಹೊಸ ಕಾವ್ಯದಲ್ಲಿ ಸೇರಿಸಿದ್ದರು.  ಅನಂತಮೂರ್ತಿ ‘ಡ್ಯಾಂಡಿ ಪೋಯೆಟ್‌’, ‘ಬೊಹೆಮಿಯನ್‌ ಕವಿ’ ಅಂತೆಲ್ಲ ಕರೆದಿದ್ದಿದೆ.

ಮುಂದೆ 1973ರಲ್ಲಿ  ಅಡಿಗರು ಸಂಪಾದಿಸಿದ ‘ಸಾಕ್ಷಿ’ಯಲ್ಲಿ ಇವರ ‘ಟುವಟಾರ’ ಎಂಬ ಕವನ ಪ್ರಕಟವಾಗಿತ್ತು. ಅದು ಅಭಿಮಾನದ ಸಂಗತಿಯಾಗಿತ್ತು. ಚಿಂತಾಮಣಿಯಲ್ಲಿದ್ದ ಲಕ್ಷ್ಮಣ್‌ರಾವ್‌ ಅವರಿಗೆ ಯು.ಆರ್‌. ಅನಂತಮೂರ್ತಿ ಅವರಿಂದ ಪೋಸ್ಟ್‌ಕಾರ್ಡ್‌ ಬಂತು. ಪದ್ಯ ತುಂಬಾ ಇಷ್ಟವಾಗಿರುವುದಾಗಿ ಹೇಳುತ್ತ, ‘ನೀವು ಏನೇ ಬರೀರಿ ಓದಬೇಕು ಅನಿಸುತ್ತೆ. ‘ಪ್ರಜಾವಾಣಿ’ಯಲ್ಲಿನ ಪದ್ಯವೂ ಚೆನ್ನಾಗಿತ್ತು. ನೀವು ತೀರ ಅಪಕ್ವ ಎಂದು ಹಿಂದೆ ನಾನು ಆಡಿದ ಮಾತು ಅವಸರದ್ದು ಎನಿಸುತ್ತೆ.

ಈಚೆಗೆ ನೀವೆಂದರೆ ನನಗೆ ತುಂಬ ಕುತೂಹಲ. ನಿಮ್ಮಲ್ಲಿ ಸುಳ್ಳಿಲ್ಲ ಆಡಂಬರವಿಲ್ಲ. ರಾಮಾನುಜಂ ದಾಟಬೇಕು ಅಷ್ಟೆ ನೀವು’ ಎಂದು ಓದುತ್ತಿದ್ದಂತೆ ಅಂದಿನ ಕಾಲಘಟ್ಟದ ಭಾಷೆ, ಹೆಸರು ಮಾಡಿದ ಸಾಹಿತಿಗಳ ವರ್ತನೆ, ನಂತರ ತುಸುವೂ ಹಿಂಜರಿಯದೇ ಚಿಕ್ಕವರನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ರೀತಿಯೆಲ್ಲವೂ ಬರಿಯ ಪತ್ರದ ಸಾಲುಗಳ ಮುಖೇನವೇ ಸಭಿಕರಲ್ಲಿ ಹಲವು ಭಾವ ಸ್ಫುರಿಸಿದಂತಿತ್ತು.

‘ದ್ವೀಪ’ ಚಿತ್ರದ ಹಿನ್ನೋಟ: ಕಾಗದವನ್ನು ಓದಿ ಕಾಲ ಕಳೆಯುವ ಕಾಲವನ್ನು ಕಳೆದುಕೊಂಡಿದ್ದೇವೆ ಎಂದು ಡಿಸೋಜ ಹೇಳಿದಾಗ ಸಭಿಕರೆಲ್ಲ ತಲೆಯಾಡಿಸಿ ಹೌದು ಎಂಬಂತೆ ನೋಡಿದರು. 1974ರಲ್ಲಿ ನಿರಂಜನ ಅವರಿಂದ ಬಂದ ಪತ್ರದಲ್ಲಿ ‘ಬರೆಯುವ ಕಾಗದ ಬಹಳ ದುಬಾರಿಯಾಗಿದೆ. ಮುದ್ರಣ ಅದಕ್ಕೂ ದುಬಾರಿಯಾಗಿದೆ. ಆರೋಗ್ಯ ತಕ್ಕಮಟ್ಟಿಗಿದೆ.

ನಡಿಗೆ ಕಷ್ಟಕರ. ಮಾತು ಜಾಸ್ತಿಯಾಗಿದೆ’ ಅಂತೆಲ್ಲ ಪದಜೋಡಣೆ ಸರಳ ಸುಂದರ. ಶರಾವತಿ ಯೋಜನೆಗೆ ಸಂಬಂಧಿಸಿದ ಕೆಲವು ಕತೆಗಳು ಹಾಗೂ ಕಾದಂಬರಿಯನ್ನು ತರಿಸಿಕೊಂಡ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ, ಅವನ್ನು ಓದಿ, ‘ದ್ವೀಪ’ ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಹೇಳಿದ್ದು 1986ಕ್ಕೂ ಮೊದಲು. ದ್ವೀಪವನ್ನು ಪುಸ್ತಕರೂಪದಲ್ಲಿ ಹೊರತಂದವರು ಅವರು. ಕೆಲವು ದಿನಗಳ ನಂತರ ಗಿರೀಶ್‌ ಕಾಸರವಳ್ಳಿ ಪತ್ರ ಬರೆದು, ಸುಬ್ಬಣ್ಣ ದ್ವೀಪವನ್ನು ಗಮನಕ್ಕೆ ತಂದುದಾಗಿ ಉಲ್ಲೇಖಿಸಿದ್ದಾರೆ. 

ತಬರನ ಕತೆ ಮುಗಿದ ಬಳಿಕ ಕೆಲಸ ಕೈಗೆತ್ತಿಕೊಳ್ಳುವುದಾಗಿ ಹೇಳಿ, ನಂತರ 1987ರಲ್ಲಿ ಲೊಕೇಶನ್‌ ಎಲ್ಲಿ ಸೂಕ್ತವಾಗಬಹುದು ಎಂದು ಮತ್ತೊಂದು ಪತ್ರದಲ್ಲಿ ಬರೆಯುತ್ತಾರೆ.

‘ನೀರು ಬಂದರೆ ಚೆನ್ನ ಎನ್ನುತ್ತಲೇ ಛೆ, ಆ ಮನೆಯವರು ನೀರು ಬರದಿರಲಿ ಎಂದು ಹಾರೈಸುತ್ತಿದ್ದಾರೆ’ ಎಂದೂ ಪತ್ರ ಮುಗಿಸುತ್ತಾರೆ. ಸುಬ್ಬಣ್ಣ ಅವರೂ ಸ್ಕ್ರಿಪ್ಟ್‌ ತಾವೇ ಬರೆಯುವುದಾಗಿ ಹೇಳಿ ಪತ್ರ ಬರೆಯುತ್ತಾರೆ. ಕಡೆಗೆ 2000ನೇ ಇಸ್ವಿಯಲ್ಲಿ ನಟಿ ಸೌಂದರ್ಯ ಅವರ ಸಹೋದರ ಸಿನಿಮಾ ಮಾಡಲು ಮುಂದೆ ಬರುತ್ತಾರೆ.

ಸೆಟ್‌ ಕೂಡ ಹಾಕಿ ಅಂತೂ ಇನ್ನೇನು ಶೂಟಿಂಗ್‌ ಆರಂಭವಾಗುವ ಹಂತ, ಡಾ.ರಾಜಕುಮಾರ್‌ ಅಪಹರಣವಾಗುತ್ತದೆ. ಸಿನಿಮಾಗಾಗಿ ಹಾಕಿದ ಸುಂದರ ಮನೆಯ ಕಲಾತ್ಮಕ ಸೆಟ್‌ನಲ್ಲಿ ಒಂದು ವರ್ಷ ಕಾಡುಕೋಣ ಬಂದು ಮಲಗುತ್ತದೆ. ಅಂತೂ ಈ ಪತ್ರ ವ್ಯವಹಾರಗಳಲ್ಲಿ ವಿವರ ಬಿಚ್ಚಿಡುತ್ತ ಹೇಗೆ 30 ವರ್ಷಗಳ ನಂತರ ‘ದ್ವೀಪ’ ಹೊರಬಿದ್ದು ವಿಶ್ವದ ಗಮನ ಸೆಳೆಯುತ್ತದೆ ಅಂತೆಲ್ಲ ಪೂರಕ ಮಾಹಿತಿ ನೀಡಿದುದು ವಿಶೇಷವಾಗಿತ್ತು.

ವೀರಣ್ಣ ರಾಜೂರ ಓದಿದ ಜೋಳದ ರಾಶಿ ದೊಡ್ಡನಗೌಡರ ಪತ್ರವಂತೂ ನೆಲದ ಭಾಷೆಯ ಸೊಗಡಿನೊಂದಿಗೆ ಹಕ್ಕಿನಿಂದ ಸಂಬೋಧಿಸಿದ ದಾಟಿಯಲ್ಲಿ ಆಕರ್ಷಿಸಿತು.ವೀಣಾ ಶಾಂತೇಶ್ವರ ಓದಿದ ಪತ್ರ 12 ವರ್ಷಗಳ ಹಿಂದೆ ವಿಮರ್ಶಕಿ ಎಂ. ಎಸ್‌. ಆಶಾದೇವಿ ಅವರದ್ದು. ಅದು ಸ್ತ್ರೀಯರ ನಡುವಿನ ಆತ್ಮೀಯ ಸಂವಾದದಂತಿತ್ತು. ‘ನಿಮ್ಮ ಕತೆಗಳ ನಾಯಕಿಯರು ಆ ಕಾಲದ ಎಷ್ಟೋ ಲೇಖಕರನ್ನು ನಿದ್ದೆ, ಎಚ್ಚರಗಳಲ್ಲಿಯೂ ಕಾಡಿದ್ದು ಹೌದಂತೆ. ನಿಜವೆ? ಮತ್ತೆ ಕೆಲವು ಗಂಡಸರಿಗೆ ಅವರ ನಿಜರೂಪವೇ ನಿಮ್ಮ ಕತೆಗಳಲ್ಲಿ ಅನಾವರಣಗೊಂಡಂತಾಗಿ ತುಂಬ ಅಸ್ವಸ್ಥರಾದರಂತೆ ಹೌದೆ?...’ ಎಂದು ಬರೆದುದು ಓದುತ್ತಲೇ ಸಭಿಕರ ಕಡೆಯಿಂದ ಸಶಬ್ದ ನಗು.

‘ನೀವು ಬರೆಯೋದಕ್ಕೆ ಪ್ರಾರಂಭಿಸಿದಾಗ ಕತೆಗಳ ಬಗ್ಗೆ ಲಂಕೇಶರ ಪ್ರತಿಕ್ರಿಯೆ ಕೇಳಿದ್ದು ನೆನಪಾಗುತ್ತದೆ. ‘ಮುಳ್ಳುಗಳು’ ಪ್ರಕಟವಾದಾಗ ‘ಪ್ರಜಾವಾಣಿ’ಯಲ್ಲಿ ಆ ಕೃತಿಯ ಬಗ್ಗೆ ಒಳ್ಳೆಯ ವಿಮರ್ಶೆ ಬರೆದಿದ್ದ ಲಂಕೇಶರು ಬೆಂಗಳೂರಿಗೆ ಬಂದಾಗ ತಿಳಿಸಿ, ನಿಮ್ಮನ್ನು ಭೇಟಿಯಾಗಬೇಕು ಅಂತ ಪತ್ರ ಬರೆದದ್ದಕ್ಕೆ ನೀವು ಕೊಟ್ಟ ಉತ್ತರ ನೆನಪಿಸಿಕೊಂಡರೆ ಈಗಲೂ ನಗು ಉಕ್ಕುತ್ತೆ. ಹೌದು, ನೀವು ‘ಹಾಸಿಗೆ ಹಿಡಿದಿದ್ದೇನೆ.

ಬೆಂಗಳೂರಿಗೆ ಬರಲಿಕ್ಕೆ ಆಗೋದಿಲ್ಲ. ಪ್ರಯಾಣ ಮಾಡಲಾಗದಷ್ಟು ವಯಸ್ಸಾಗಿದೆ ಅಂತ ಉತ್ತರಿಸಿದ್ದು ತಮಾಷೆಗಾ? ಅಥವಾ ಹೆಣ್ಣಿನ ಸಹಜ ರಕ್ಷಣಾ ತಂತ್ರವೆ?’ ಎಂಬುದು ಮುಗಿಯುವ ಮುನ್ನವೇ ಸಭಿಕರು ಜೋರಾಗಿ ನಗುತ್ತಿದ್ದರು. ‘ಆಗ ನನಗೆ 23 ವರ್ಷ ಅಷ್ಟೆ’ ಅಂತ ವೀಣಾ ಶಾಂತೇಶ್ವರ ನಸುನಗುತ್ತ ಸಭಿಕರಿಗೆ ತಿಳಿಸಿದರು.

ಮೀನಾ ಮೈಸೂರು ಅವರು ಓದಿದ ಪತ್ರಗಳಲ್ಲಿಯೂ ಅನಂತಮೂರ್ತಿ ವ್ಯಕ್ತಿತ್ವದ ಹಲವು ಅಂಶಗಳು ದಾಖಲಾಗಿದ್ದುದು, ಅವರ ಜತೆಗಿನ ಇತರರ ಅನು ಬಂಧ ಇತ್ಯಾದಿಯೆಲ್ಲ ಅನಾವರಣ ಗೊಂಡವು.

ಪು.ತಿ.ನ ಅವರಿಗೆ ಅಮಿತಾನಂದ
ಸಿ. ಅಶ್ವತ್ಥ್‌ ಅವರ ರಾಗಸಂಯೋಜನೆ ಯಲ್ಲಿ ಆಕಾಶವಾಣಿಯಲ್ಲಿ ಪ್ರಸಾರ ವಾದ ಲಕ್ಷ್ಮಣ್‌ರಾವ್‌ ಅವರ ಭಾವಗೀತೆ ‘ಶ್ರುತಿ ಮೀರಿದ ಹಾಡು’ ಶಿವಮೊಗ್ಗದ ವಿಜಯ ರಾಘವನ್‌ ದನಿಯಲ್ಲಿ ಮೂಡಿಬಂದಿತ್ತು. ‘ತಿಂಗಳ ಹೊಸ ಹಾಡು’ ಎಂಬ ಕಾರ್ಯಕ್ರಮದಲ್ಲಿ ಐದು ಭಾನುವಾರ ಪ್ರಸಾರವಾದ ಗೀತೆಯದು. 

ಆಕಾಶವಾಣಿಯಿಂದ ವಿಳಾಸ ಪಡೆದು ಪುತಿನ ಬರೆದ ಪತ್ರದ ಸಾಲುಗಳೂ ಕಾವ್ಯಮಯವಾಗೇ ಸೆಳೆದವು. ‘ಮೊನ್ನೆ ತಮ್ಮ ಗೀತ ಕೇಳಿದೆ. ಅಮಿತಾನಂದವಾಯಿತು.

ಯಾವುದೋ ದಾರುಣ ವಿರಹ ವ್ಯಥೆಯ ದಿವ್ಯ ಪರಿಮಳದ ಸೆರಗೊಂದು ನನ್ನ ಮನಸ್ಸಿನ ಮೇಲೆ ಬೀಸಿ ಹೋದಂತಾಯಿತು. ಮೂರು ವಾರ ಕೇಳಿದರೂ ಪರಿಣಾಮ ಪೇಲವವಾಗಿಲ್ಲ. ಆಶ್ಚರ್ಯ! ಗೀತಕಾರ, ಸ್ವರಕಾರ ಹಾಗೂ ಹಾಡುಗಾರ ಇವರು ಮೂವರ ಬಹು ಮನೋಜ್ಞವಾದ ಮಿಲನ ಇಂತಹ ರಚನೆಯಲ್ಲಿ ಮೂಡಿ ರುವುದು ಮರ್ತ್ಯರ ಕೈಯಲ್ಲಿರದ ಅಮರ್ತ್ಯರ ವಿಲಾಸಕ್ಕೆ ಸೇರಿದೆಯೊ ಏನೊ...’ ಈ ಎರಡೂ ಪತ್ರಗಳು ತಮಗೆ ದೊರೆತ ಎರಡು ಶ್ರೇಷ್ಠ ಪ್ರಶಸ್ತಿಗಳೆಂದೇ ಭಾವಿಸಿರುವುದಾಗಿ ಹೃದಯತುಂಬಿ ನುಡಿದರು ಲಕ್ಷ್ಮಣ್‌ರಾವ್‌.

ನಂತರ ಪತ್ರ ಓದಿದ ನಾ.ಡಿಸೋಜ, ವೀರಣ್ಣ ರಾಜೂರ, ಮಲ್ಲಿಕಾರ್ಜುನ ಹಿರೇಮಠ, ಮೀನಾ ಮೈಸೂರು ಅವರ ಪತ್ರಗಳೂ ಅಂದಿನ ಸಾಹಿತಿಗಳ ಸ್ವಭಾವ, ಆತ್ಮೀಯತೆ, ಓದಿನ ವಿನಿಮಯ ಇತ್ಯಾದಿ ಹಲವು ಅಂಶಗಳನ್ನು ಮತ್ತೆ ಕಣ್ಮುಂದೆ ತಂದು ನಿಲ್ಲಿಸಿದಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT