ಸಾಗರ: ‘ಪಾಶ್ಚಿಮಾತ್ಯ ಮಾದರಿಯ ಅಭಿವೃದ್ಧಿಯ ಕಲ್ಪನೆಯ ಬೆನ್ನಿಗೆ ಬಿದ್ದರೆ, ಭಾರತೀಯತೆ ಎಂಬ ಪರಿಕಲ್ಪನೆಯಿಂದ ನಾವು ಸಂಪೂರ್ಣವಾಗಿ ದೂರವಾಗುವ ಅಪಾಯವಿದೆ. ಈ ಅಪಾಯವನ್ನು ನಾವು ಗ್ರಹಿಸಬೇಕಿದೆ ಎಂದು ಸಮಾಜ ವಿಜ್ಞಾನಿ, ಚಿಂತಕ ಶಿವವಿಶ್ವನಾಥನ್ ಹೇಳಿದರು.
ಸಮೀಪದ ಹೆಗ್ಗೋಡಿನಲ್ಲಿ ಗುರುವಾರ ಆರಂಭಗೊಂಡ ‘ಭಾರತೀಯ ಎನ್ನುವ ಒಂದು ಚಿಂತನಾ ಕ್ರಮ ಇದೆಯೇ’ ಎಂಬ ವಿಷಯವನ್ನು ಆಧರಿಸಿದ ನೀನಾಸಂ ಸಂಸ್ಕೃತಿ ಶಿಬಿರದ ಆಶಯ ಭಾಷಣ ಮಾಡಿದರು.
ವೈವಿಧ್ಯಮಯ ಜೀವನ ಕ್ರಮಗಳನ್ನು ಒಳಗೊಂಡ ನಾಗರಿಕಾತ್ಮಕ ಕಾಲ ಕಲ್ಪನೆಯಿಂದ ಭಾರತ ತನ್ನತನವನ್ನು ಉಳಿಸಿಕೊಂಡು ಬಂದಿದೆ. ಆದರೆ ಅಮೆರಿಕವನ್ನು ಅನುಕರಿಸುವ ‘ನೆನಪು’ಗಳೆ ಇಲ್ಲದ ರಾಷ್ಟ್ರಕಾಲದ ಕಲ್ಪನೆಯ ಅಭಿವೃದ್ಧಿ ಮಾದರಿಯಿಂದ ನರೇಂದ್ರ ಮೋದಿ ಅವರಂಥವರು ಕೂಡ ‘ಅಭಾರತೀಯ’ ಆಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿಯ ಕಾಲ ಪರಿಕಲ್ಪನೆಯಲ್ಲಿ ಭೂತಕಾಲವನ್ನು ಮರೆಯಲು ಸಾಧ್ಯವೆ ಇಲ್ಲ. ಆದರೆ, ಪಶ್ಚಿಮದ ಮಾದರಿಯ ಅಭಿವೃದ್ಧಿಯನ್ನು ಅನುಸರಿಸುವವರು ಕೇವಲ ಭವಿಷ್ಯದ ಬಗ್ಗೆ ಮಾತನಾಡುತ್ತ ಭೂತಕಾಲವನ್ನು ಮುಚ್ಚಿ ಹಾಕಲು ಹೊಂಚು ಹಾಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಇದೇ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ನರೇಂದ್ರ ಮೋದಿ ಅವರ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಭಾವಾವೇಶದಲ್ಲಿ ನೀಡಿದ್ದ ಹೇಳಿಕೆಯ ಹಿಂದೆ, ಮೂಲಭೂತವಾದದ ಸ್ವರೂಪ ಪಡೆಯುತ್ತಿರುವ ಪಶ್ಚಿಮದ ಅಭಿವೃದ್ಧಿಯ ಮಾದರಿ ಕುರಿತ ವಿಮರ್ಶಾ ಭಾವನೆ ಇತ್ತೆ ವಿನಾ ಅವರ ಮಾತು ವೈಯುಕ್ತಿಕ ಟೀಕೆಯ ಮಟ್ಟದ್ದಾಗಿರಲಿಲ್ಲ. ಪಶ್ಚಿಮದ ಮಾದರಿಯ ಬದಲು ಗಾಂಧಿ ಮಾರ್ಗದ ಸರ್ವೋದಯ ಮಾರ್ಗದಲ್ಲಿ ನಡೆದಾಗ ಮಾತ್ರ ಭಾರತೀಯತೆ ಉಳಿಯಲು ಸಾಧ್ಯ ಎಂಬ ಕಾಳಜಿ ಅವರ ಮಾತಿನ ಹಿಂದಿತ್ತು ಎಂದರು.
ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿ ನಮಗೆ ‘ನೆನಪು’ಗಳೇ ಇಲ್ಲದಂತೆ ಮಾಡುತ್ತದೆ. ಮೋದಿ ಅವರಿಗೆ ಇಂತಹ ನೆನಪು ಇದ್ದಿದ್ದರೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ದೇಶದ ಜನತೆಯ ಕ್ಷಮೆ ಕೇಳುತ್ತಿದ್ದರು. ಆದರೆ ಅವರು ಸಾಗಿರುವ ಅಭಿವೃದ್ಧಿಯ ಹಾದಿಯಲ್ಲಿ ಕಥೆ, ಸಾಹಿತ್ಯ, ಕಲೆ, ಆತ್ಮ ವಿಮರ್ಶೆಗೆ ಅವಕಾಶವಿಲ್ಲದಂತಾಗಿದೆ ಎಂದು ಅವರು ವಿಶ್ಲೇಷಿಸಿದರು.
‘ಭಾರತೀಯ ಎಂಬ ಒಂದು ಚಿಂತನಾ ಕ್ರಮ ಇದೆಯೇ’ ಎಂಬ ಎ.ಕೆ.ರಾಮಾನುಜಮ್ ಅವರ ಪ್ರಬಂಧ ಭಾರತ ವಿರೋಧಾಭಾಸಗಳಿಂದ ತುಂಬಿರುವ ದೇಶ, ಸಂಸ್ಕೃತಿ, ಸಮಾಜ ಎಂಬ ಸೀಮಿತ ಗ್ರಹಿಕೆಯನ್ನು ಒಳಗೊಂಡಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅನಂತಮೂರ್ತಿ ಅವರು ಭಾರತೀಯ ಸಮಾಜವನ್ನು ವಿರೋಧಾಭಾಸಗಳ ಬದಲಿಗೆ ವೈವಿಧ್ಯಮಯ ಎಂದು ಗ್ರಹಿಸಿದ್ದು ಮುಖ್ಯವಾದ ಸಂಗತಿ ಎಂದು ಹೇಳಿದರು.
ಎಸ್ತರ್ ಅನಂತಮೂರ್ತಿ ಅವರು ಶಿಬಿರ ಉದ್ಘಾಟಿಸಿದರು. ಅನಂತಮೂರ್ತಿಯ ಅವರ ಕೊನೆಯ ಕೃತಿ ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯನ್ನು ದೆಹಲಿಯ ಜವಾಹರಲಾಲ್ ನೆಹರೂ ವಿ.ವಿ. ಪ್ರಾಧ್ಯಾಪಕ ಡಾ.ಗೋಪಾಲ್ ಗುರು ಬಿಡುಗಡೆ ಮಾಡಿದರು. ನೀನಾಸಂ ಅಧ್ಯಕ್ಷ ಶ್ರೀಧರ್ ಭಟ್ ಸ್ವಾಗತಿಸಿದರು. ಕೆ.ವಿ.ಅಕ್ಷರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.