ಬೆಂಗಳೂರು: ‘ರಾಷ್ಟ್ರಕವಿ ಕುವೆಂಪು ಅವರ ಮನೆಯಲ್ಲಿ ಪದಕಗಳನ್ನು ಕದ್ದವರಿಗೆ ತಕ್ಕ ಶಿಕ್ಷೆಯಾಗಬೇಕು ನಿಜ. ಆದರೆ, ಭೈರಪ್ಪನವರ ಜ್ಞಾನಪೀಠವನ್ನು ದೋಚುತ್ತಿರುವ ಬುದ್ಧಿಜೀವಿಗಳಿಗೆ, ರಾಜಕಾರಣಿಗಳಿಗೆ ಏನು ಮಾಡಬೇಕು?’ ಇದು ಅಷ್ಟಾವಧಾನದಲ್ಲಿ ಅಪ್ರಸ್ತುತ ಪ್ರಸಂಗಿಯ ಪ್ರಶ್ನೆ.
‘ಈ ಬುದ್ಧಿಜೀವಿಗಳು, ರಾಜಕಾರಣಿಗಳು ಭೈರಪ್ಪನವರ ಪೀಠವನ್ನು ದೋಚಬಹುದೆ ವಿನಾ ಅವರ ಜ್ಞಾನವನ್ನಲ್ಲ. ಅದು ಅವರಿಗೆ ಗೊತ್ತಿದೆ. ಡಿವಿಜಿ, ಪು.ತಿ.ನ ಸೇರಿದಂತೆ ಅನೇಕ ದೊಡ್ಡ ಜನರಿಗೆ ಆ ಪ್ರಶಸ್ತಿ ದೊರೆತಿಲ್ಲ. ದೊಡ್ಡವರಲ್ಲದ ಕೆಲವರಿಗೂ ಅದು ದೊರೆತಿದೆ’ ಎಂದು ಅವಧಾನಿಗಳು ಪ್ರಶ್ನೆಗೆ ಉತ್ತರಿಸುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಆ ಬೃಹತ್ ಸಭೆಯಲ್ಲಿ ಕೆಲ ಹೊತ್ತು ಕರತಾಡನ.
ಹಿರಿಯ ಲೇಖಕ ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಪ್ರಿಯರ ಕೂಟ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಭೈರಪ್ಪನವರ ಕಾದಂಬರಿಗಳನ್ನು ಆಧರಿಸಿದ ಅಷ್ಟಾವಧಾನ’ ಕಾರ್ಯಕ್ರಮದಲ್ಲಿ ಇಂತಹ ಅನೇಕ ಪ್ರಶ್ನೋತ್ತರಗಳಿಗೆ ಕಿವಿಯಾದ ಭೈರಪ್ಪನವರ ಅಭಿಮಾನಿಗಳು ಕೆಲ ಹೊತ್ತು ಜಿಜ್ಞಾಸೆ, ಕುತೂಹಲ, ವಿಸ್ಮಯ, ನಗೆ ಕಡಲಲ್ಲಿ ಮಿಂದು, ಸಾಹಿತ್ಯದ ರಸದೂಟ ಸವಿದರು.
ಶತಾವಧಾನಿ ಆರ್.ಗಣೇಶ್ ಅವರ ನೇತೃತ್ವದಲ್ಲಿ ನಡೆದ ಈ ಅವಧಾನದಲ್ಲಿ ಅಷ್ಟ (ಎಂಟು) ಪೃಚ್ಛಕರಿಂದ (ಪ್ರಶ್ನೆ ಕೇಳುವವರು) ಅನುಕ್ರಮವಾಗಿ ಕೇಳಿಬಂದ ಸವಾಲುಗಳಿಗೆ ಗಣೇಶ್ ಅವರು ಸಾವಧಾನದಿಂದ ಸಮಯೋಚಿತ ಉತ್ತರ ನೀಡಿದರು.
ಭೈರಪ್ಪನವರ ಪ್ರಕಟಿತ 23 ಕಾದಂಬರಿಗಳಲ್ಲಿ ಮಿಳಿತವಾಗಿರುವ ಕಲೆ, ಕಾಮ, ಸಂಗೀತ, ನೃತ್ಯ, ವಿಜ್ಞಾನ, ತತ್ವಶಾಸ್ತ್ರ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಪೃಚ್ಛಕರು ಒಬ್ಬೊಬ್ಬರಾಗಿ ಎತ್ತುತ್ತಿದ್ದ ಪ್ರಶ್ನೆಗಳಿಗೆ ಗಣೇಶ್ ಅವರು ನೀಡುತ್ತಿದ್ದ ಉತ್ತರಗಳು ಭೈರಪ್ಪನವರ ಅಭಿಮಾನಿಗಳಿಗೆ ಓದಿನ ಹೊಸ ಹೊಳಹು ನೀಡಿದವು.
ಏಳು ಪೃಚ್ಛಕರ ಪ್ರಶ್ನೆಗಳಿಗೆ ಅವಧಾನಿಗಳು ಏಕಾಗ್ರತೆಯಿಂದ ಉತ್ತರಿಸುತ್ತಿದ್ದ ವೇಳೆ ಅದನ್ನು ಭಂಗಪಡಿಸಲು ಅಪ್ರಸ್ತುತ ಪ್ರಸಂಗ ಪೃಚ್ಛಕ ಸೋಮಶೇಖರ ಶರ್ಮ ಅವರು ತೂರಿ ಬಿಡುತ್ತಿದ್ದ ತಕರಾರಿನ ಅಕಾಲಿಕ ಪ್ರಶ್ನೆಗಳು, ಅವುಗಳಿಗೆ ಗಣೇಶ್ ಅವರ ಸಮಯ ಸ್ಫೂರ್ತಿಯ ಉತ್ತರಗಳು ಆಗಾಗ ಸಭೆಯಲ್ಲಿ ನಗೆಯ ತೊರೆಯನ್ನು ಮೂಡಿಸುತ್ತಿದ್ದವು.
‘ಭೈರಪ್ಪನವರ ಕಾದಂಬರಿಗಳನ್ನು ಓದದವರಿಗೆ ಏನು ಶಿಕ್ಷೆ? ಎಂಬ ಶರ್ಮ ಅವರು ಕೆಣಕಿದಾಗ, ಗಣೇಶ್ ಅವರು ‘ಓದದೆ ಇರುವುದೇ ಅವರಿಗೆ ಶಿಕ್ಷೆ’ ಎಂದರು.
‘ಭೈರಪ್ಪನವರ ಸಮಗ್ರ ಸಾಹಿತ್ಯ ವಿರೋಧಿಸುವವರ ಕೃತಿಗೆ ನಾ ಕೊಡುವ ಶೀರ್ಷಿಕೆ ಏನು ಗೊತ್ತೆ? ‘ನಾನೇಕೆ ಜರಿಯುತ್ತೇನೆ?’’ ಎಂದು ಶರ್ಮ ಹೇಳುತ್ತಿದ್ದಂತೆ ಸಭೆಯಲ್ಲಿದ್ದವರ ನಗೆ ನೂರ್ಮಡಿಗೊಂಡಿತ್ತು.
‘ಭೈರಪ್ಪನವರ ಕೃತಿಗಳನ್ನು ವೈಚಾರಿಕ ಹಿನ್ನೆಲೆ ಇಟ್ಟುಕೊಳ್ಳದೆ ಓದಿದರೆ ತುಂಬಾ ಸಂತೋಷವಾಗುತ್ತದೆ. ಯಾವುದೋ ಒಂದು ಬದ್ಧತೆಗೆ ಇಟ್ಟುಕೊಂಡು ಓದಿದರೆ ಸಮಸ್ಯೆಯಾಗಿ ಕಾಣುತ್ತದೆ’
‘ಭೈರಪ್ಪನವರು ‘ಪರ್ವ’ ಬರೆದಾಗ ಕೆಲವರು ಅದರಿಂದ ಮೂಲ ಮಹಾ ಭಾರತಕ್ಕೆ ಅನ್ಯಾಯವಾಯಿತು; ಪರ್ವದಲ್ಲಿ ವ್ಯಾಸರ ಬಗ್ಗೆ ಗೌರವವಿಲ್ಲ; ಆ ಕಾದಂಬರಿಗೆ ಯಾವ ಮಹತ್ವವಿಲ್ಲ ಎಂದೆಲ್ಲ ಗೇಲಿ ಮಾಡಿ, ಕುಹಕದ ಮಾತುಗಳನ್ನಾಡಿದ್ದರು. ಈ ವಿಚಾರದಲ್ಲಿ ಆ ಕೃತಿಯನ್ನು ಹೊಗಳುವವರು ಮತ್ತು ತೆಗಳುವವರು ಇಬ್ಬರೂ ಮೂಲ ಸವಿವರ ಓದಿಕೊಂಡಂತಿಲ್ಲ. ವ್ಯಾಸ ಭಾರತದ ಮರು ಸೃಷ್ಟಿಯಂತಿರುವ ಪರ್ವದಲ್ಲಿ ವ್ಯಾಸ ದರ್ಶನಕ್ಕೆ ಎಲ್ಲಿಯೂ ಚ್ಯುತಿಯಾಗಿಲ್ಲ’
‘ಭೈರಪ್ಪನವರ ಕೃತಿಗಳಲ್ಲಿ ಅಶ್ಲೀಲತೆ ಇಲ್ಲ. ಅದು ಓದುವವರ ತಲೆಯಲ್ಲಿ ಇದೆ. ಆಕ್ಷೇಪ ಮಾಡುವವರಿಗೆ ವೇದ, ಓದು ಗೊತ್ತಿಲ್ಲವಷ್ಟೆ. ಒಬ್ಬ ಒಳ್ಳೆಯ ಲೇಖಕ ಪಾತ್ರಗಳಿಗೆ ಸ್ಥಿತಿ ಕಾಣಿಸುತ್ತಾನೆ. ಆದರೆ, ವಿಮರ್ಶಕ ಮನಸ್ಸು ಮಾಡಿದರೆ ಪಾತ್ರಗಳಿಗೆ ಗತಿ ಕಾಣಿಸುತ್ತಾನೆ’ ಎಂದು ಗಣೇಶ್ ಅವರು ಅಭಿಪ್ರಾಯಪಟ್ಟರು.
ಗಣೇಶಭಟ್ಟ ಕೊಪ್ಪತೋಟ (ನಿಷೇಧಾಕ್ಷರ), ಅರ್ಜುನ್ ಭಾರದ್ವಾಜ್ (ಸಮಸ್ಯಾಪೂರಣ), ಕೆ.ಬಿ.ಎಸ್. ರಾಮಚಂದ್ರ (ಪಾತ್ರಕ್ಕೆ ಪದ್ಯ), ರಾಘವೇಂದ್ರ ಹೆಗಡೆ (ಚಿತ್ರ ಪ್ರಶ್ನೆ), ರಂಗನಾಥ ಪ್ರಸಾದ್ (ಸಂಖ್ಯಾಬಂಧ) ಪೃಚ್ಛಕರಾಗಿ ಭಾಗಹಿಸಿದ್ದರು.
ಕೊರ್ಗಿ ಶಂಕರನಾರಾಯಣ ಉಪಾ ಧ್ಯಾಯ ಅವರು ಭೈರಪ್ಪ ಅವರ ಕಾದಂಬರಿಗಳ ಆಯ್ದಭಾಗ ವಾಚನ ಮಾಡಿದಾಗ ಸಭೆಯಲ್ಲಿ ಸಂಚಲನ. ಕಶ್ಯಪ್ ನಾಯಕ್ ಅವರ ರಾಗಾಲಾಪ ಸಭಿಕರನ್ನು ತಲೆದೂಗುವಂತೆ ಮಾಡಿತು.
ಭೈರಪ್ಪನವರ ಅಭಿಮಾನಿಗಳ ಪ್ರಕಾರ ಇದು ‘ಭಾರತೀಯ ಕಾದಂಬರಿ ಪ್ರಪಂಚದಲ್ಲೇ ಪ್ರಥಮ ಪ್ರಯೋಗ’. ಈ ಕಾರ್ಯಕ್ರಮಕ್ಕೆ, ಸ್ವತಃ ಎಸ್.ಎಲ್.ಭೈರಪ್ಪ, ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.
ಭೈರಪ್ಪನವರ ಮೂರು ಕಿರುಕತೆಗಳ ಸಂಕಲನ ‘ಗತಜನ್ಮ’, ಪೃಥ್ವಿಜಿತ್ ಅವರ ‘ಉತ್ತಿಷ್ಠ’, ‘ಎಲ್ಲೆ ದಾಟಿ’ ಮತ್ತು ಶಶಿಧರ್ ವಿಶ್ವಾಮಿತ್ರ ಅವರ ‘ಸಂಚಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.