ಬೇಲೂರು: ಬೆಂಗಳೂರಿನ ಭಕ್ತರೊಬ್ಬರು ಇಲ್ಲಿನ ಜಗತ್ಪ್ರಸಿದ್ಧ ಚನ್ನಕೇಶವನಿಗೆ ಬಗೆಬಗೆಯ 4.5 ಸಾವಿರ ಕೆ.ಜಿ. ಹೂವಿನಿಂದ ಅಭಿಷೇಕ ಮಾಡಿದರು.
ಸುಮಾರು 80 ವರ್ಷಗಳ ಬಳಿಕ ನಡೆದ ಈ ಅಪೂರ್ವ ಪುಷ್ಪಾರ್ಚನೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಕಳೆದ ವರ್ಷ ನಡೆದ ಕೋಟಿ ವಿಷ್ಣು ಸಹಸ್ರನಾಮದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಭಕ್ತ ಬಿ.ಎಸ್. ಕೇಶವನ್ ಎಂಬುವವರು ಚನ್ನಕೇಶವನಿಗೆ ಪುಷ್ಪಾರ್ಚನೆ ಮತ್ತು ಅನ್ನಕೂಟೋತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ.
ಶನಿವಾರ ನಡೆದ ಪುಷ್ಪಯಾಗದಲ್ಲಿ ತಮಿಳುನಾಡಿನ ಮದುರೆ, ಕಂಚಿ, ಶ್ರೀರಂಗಂ, ವೆಲ್ಲೂರು ಮತ್ತು ಬೆಂಗಳೂರಿನಿಂದ ತರಿಸಿದ್ದ 35 ಬಗೆಯ ವಿವಿಧ ಹೂವುಗಳನ್ನು ಬಳಸಿ ಅಲಂಕಾರ ಮಾಡಲಾಗಿತ್ತು. ಹೂವಿಗೆ ಸುಮಾರು ₹ 6 ಲಕ್ಷ ವೆಚ್ಚ ಮಾಡಲಾಗಿದೆ. ಅಭಿಷೇಕದ ವೇಳೆ ಪೀಠ ಸೇರಿ 12.9 ಅಡಿ ಎತ್ತರವಿರುವ ಚನ್ನಕೇಶವನ ಮೂರ್ತಿ ಪೂರ್ಣವಾಗಿ ಹೂವಿನಿಂದ ಮುಚ್ಚಿ ಕಂಗೊಳಿಸುತ್ತಿತ್ತು. ಭಾನುವಾರ ಬೆಳಿಗ್ಗೆ ಅನ್ನಕೂಟೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.