ಕಾರವಾರ: ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹಾಗೂ ಸಾಂಸ್ಕೃತಿಕ ಕ್ರಿಯಾಶೀಲತೆ ಬೆಳೆಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಪದವಿ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ‘ಪುಸ್ತಕಪ್ರೇಮಿ ವಿದ್ಯಾರ್ಥಿ ಬಳಗ’ಗಳನ್ನು ರಚಿಸಲು ಮುಂದಾಗಿದೆ.
ಕಾಲೇಜುಗಳಲ್ಲಿ ಪ್ರತಿ ತಿಂಗಳೂ ಒಂದಾದರೂ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಮತ್ತು ಅವರಲ್ಲಿ ಸಾಹಿತ್ಯಾಸಕ್ತಿ ಮೂಡಿಸಬೇಕು ಎಂಬ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ. ಈ ಚಟುವಟಿಕೆ ಕೈಗೊಳ್ಳಲು ವಿದ್ಯಾರ್ಥಿ ಬಳಗಕ್ಕೆ ಪ್ರಾಧಿಕಾರವು ತಿಂಗಳಿಗೆ ಗರಿಷ್ಠ ₨ 5,000 ಅನುದಾನ ನೀಡಲಿದೆ.
ಹೊಸ ಬರಹಗಾರರ ಚೊಚ್ಚಲ ಕೃತಿಯನ್ನು ಪ್ರೋತ್ಸಾಹಧನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಹಸ್ತಪ್ರತಿಗಳನ್ನು ಕಳುಹಿಸುವಂತೆ ಯುವ ಲೇಖಕ, ಲೇಖಕಿಯರನ್ನು ಪ್ರೋತ್ಸಾಹಿಸುವುದು. ವಾಚನಾಭಿರುಚಿ ಕಮ್ಮಟ, ಯುವ ಲೇಖಕರ ಸಮ್ಮೇಳನ, ಪುಸ್ತಕ ಮೇಳ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ‘ನನ್ನ ಮೆಚ್ಚಿನ ಪುಸ್ತಕ’ ವಿಷಯ ಮಂಡನೆ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಪ್ರಾಧಿಕಾರ ಹಮ್ಮಿಕೊಂಡಾಗ ಸಕ್ರಿಯ ಸಹಕಾರ ನೀಡುವುದು ಬಳಗದ ಚಟುವಟಿಕೆಗಳಾಗಿರುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಬಳಗದ ಆಯ್ಕೆ ಹೇಗೆ?: ಬಳಗವು ಪ್ರತಿ ಕಾಲೇಜಿನಲ್ಲಿ ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಳ್ಳುತ್ತದೆ. ಈ ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಕನಿಷ್ಠ 5 ರಿಂದ 15 ವಿದ್ಯಾರ್ಥಿಗಳಿರುತ್ತಾರೆ. ಆಯಾ ಕಾಲೇಜಿನ ಯಾವುದೇ ವಿದ್ಯಾರ್ಥಿ ಈ ಬಳಗದ ಸದಸ್ಯನಾಗಬಹುದು.
ಪದಾಧಿಕಾರಿಗಳಲ್ಲಿ ವಿದ್ಯಾರ್ಥಿನಿಯರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಕಡ್ಡಾಯವಾಗಿ ಇರಲೇಬೇಕು. ಆಯಾ ಕಾಲೇಜಿನ ಪ್ರಾಂಶುಪಾಲರು ಅಥವಾ ಮುಖ್ಯಸ್ಥರ ಮೂಲಕ ಕಳುಹಿಸುವ ವಿದ್ಯಾರ್ಥಿಗಳ ಪಟ್ಟಿಗೆ ಪ್ರಾಧಿಕಾರದ ಸ್ಥಾಯಿ ಸಮಿತಿ ಸಭೆ ಅನುಮೋದನೆ ನೀಡಿದ ನಂತರ ಅದು ಅಧಿಕೃತವಾಗುತ್ತದೆ.
ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಆಯಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗಗಳ ಮುಖ್ಯಸ್ಥರು ಇದರ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿಕೊಂಡು ಆಯಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗಗಳ ಮುಖ್ಯಸ್ಥರ ಶಿಫಾರಿಸಿನೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಇದೇ 31 ರೊಳಗೆ ‘ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು’ ವಿಳಾಸಕ್ಕೆ ಕಳುಹಿಸಬೇಕು.
‘ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದ್ದು, ಗ್ರಂಥಾಲಯಗಳಲ್ಲಿ ಅನೇಕ ಪುಸ್ತಕಗಳು ದೂಳು ಹಿಡಿಯುತ್ತಿವೆ. ವಿದ್ಯಾಭ್ಯಾಸದ ನಂತರ ನೌಕರಿ ಸಿಗದಿದ್ದರೂ ಓದು, ಬರಹ ಆತನ ಜೊತೆಗಿದ್ದರೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುವುದು. ಹೀಗಾಗಿ ಕಾಲೇಜುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳ ವಾತಾವರಣ ಸೃಷ್ಟಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವಂತಹ ಈ ಯೋಜನೆ ಮಹತ್ವದ್ದಾಗಿದೆ’ ಎಂದು ಬಸವರಾಜ ಹೂಗಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.