ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಫೆ. 19ರಿಂದ ಎಂಎಸ್‌ಸಿ 2ನೇ ಸೆಮಿಸ್ಟರ್ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಆದರೆ ಈವರೆಗೆ ‘ಅಧ್ಯಯನ ಸಾಮಗ್ರಿ’ (ಸ್ಟಡಿ ಮಟೀರಿಯಲ್) ನೀಡಿಲ್ಲ.
ಮೈಸೂರಿನಲ್ಲಿರುವ ವಿ.ವಿ. ಕಚೇರಿಗೆ ಈ ಕುರಿತು ಫೋನ್ ಮಾಡಿ ಕೇಳುವ ವಿದ್ಯಾರ್ಥಿಗಳ ಪ್ರಶ್ನೆಗೆ ಮೌಲ್ಯ ಮಾಪನ ವಿಭಾಗದ ನಿಬಂಧಕರು ‘ನನಗೆ ಸಂಬಂಧಿಸಿದ್ದಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ದೂರು.
ಸಿದ್ಧಪಾಠ ವಿಭಾಗದಲ್ಲಿ ಪ್ರಶ್ನಿಸಿದರೆ ‘ಡಿಸೆಂಬರ್‌ನಲ್ಲಿಯೇ ಎಲ್ಲ ಅಧ್ಯಯನ ಸಾಮಗ್ರಿಗಳನ್ನು ಕಳಿಸಲಾಗಿದೆ’ ಎಂದು ಫೋನ್ ಕೆಳಗಿಡುತ್ತಾರೆ. ‘ನಮಗಿನ್ನೂ ಬಂದಿಲ್ಲವೇಕೆ’ ಎಂದು ಮರುಪ್ರಶ್ನಿಸಿದರೆ ಪ್ರಶ್ನಿಸುವವರ ನೋಂದಣಿ ಸಂಖ್ಯೆ, ಹೆಸರು ಕೇಳಿ ಭಯ ಬಿತ್ತುತ್ತಾರೆ ವಿದ್ಯಾರ್ಥಿಗಳು ಅಲವತ್ತುಕೊಂಡರು.
ಕುಲಪತಿ ಕಾರ್ಯಾಲಯಕ್ಕೆ ಕರೆ ಮಾಡಿದರೆ ಅಲ್ಲಿನ ಸಹಾಯಕರು ಕುಲಪತಿಯೊಂದಿಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ನಮ್ಮ ಸಮಸ್ಯೆ ಕುರಿತು ಪತ್ರ ಬರೆದರೂ ಯಾರೂ ಸ್ಪಂದಿಸುತ್ತಿಲ್ಲ. ನಮಗೆ ಶೀಘ್ರ ಅಧ್ಯಯನ ಸಾಮಗ್ರಿ ಕಳಿಸಿ, ಪರೀಕ್ಷೆಗೆ ಸಿದ್ಧರಾಗಲು ಕಾಲಾವಕಾಶ ನೀಡ ಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.