ADVERTISEMENT

ಪುಸ್ತಕ ಮಳಿಗೆಗೆ ಬಲು ಬೇಡಿಕೆ

79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 19:59 IST
Last Updated 29 ಜನವರಿ 2013, 19:59 IST

ವಿಜಾಪುರ: ಫೆಬ್ರುವರಿ 9ರಿಂದ 11ರ ವರೆಗೆ ಇಲ್ಲಿ ಜರುಗಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರಂಭಿಸಲಿರುವ ಪುಸ್ತಕ ಮಳಿಗೆಗಳಿಗೆ ಭಾರಿ ಬೇಡಿಕೆ ಬರುತ್ತಿದ್ದು, ಈ ವರೆಗೆ 500ಕ್ಕೂ ಹೆಚ್ಚು ಮಳಿಗೆಗಳಿಗೆ ಮುಂಗಡ ಹಣ ಪಾವತಿಸಿ ಕಾಯ್ದಿರಿಸಲಾಗಿದೆ.

`ಸಾಮಾನ್ಯವಾಗಿ ಪ್ರತಿ ಸಮ್ಮೇಳನದಲ್ಲಿ 250 ಪುಸ್ತಕ ಮಳಿಗೆ ಹಾಗೂ 100 ವಾಣಿಜ್ಯ ಮಳಿಗೆಗಳು ಇರುತ್ತಿದ್ದವು. ನಾವು ಪುಸ್ತಕ ಮಳಿಗೆಗಳ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೆವು. ಆದರೆ, ಮಂಗಳವಾರದವರೆಗೆ 500ಕ್ಕೂ ಅಧಿಕ ಪುಸ್ತಕ ಮಳಿಗೆ ಹಾಗೂ 152 ವಾಣಿಜ್ಯ ಮಳಿಗೆಗಳಿಗೆ ಮುಂಗಡ ಹಣ ಸಂದಾಯವಾಗಿದೆ' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಯಂಡಿಗೇರಿ.

'ಕಸಾಪ ಕೇಂದ್ರ ಸಮಿತಿ ಹಾಗೂ ಎಲ್ಲ ಜಿಲ್ಲಾ ಘಟಕಗಳಲ್ಲಿ ಹಣ ಪಾವತಿಸಿ ಮಳಿಗೆ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಮಳಿಗೆಗೆ  ರೂ. 1000, ವಾಣಿಜ್ಯ ಮಳಿಗೆಗೆ  ರೂ. 2000 ದರ ನಿಗದಿ ಮಾಡಲಾಗಿದೆ. ಒಟ್ಟಾರೆ 450 ಮಳಿಗೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದ್ದು, ಈಗ ನಮ್ಮ ನಿರೀಕ್ಷೆಗೂ ಮೀರಿ ಸುಮಾರು 200 ಹೆಚ್ಚುವರಿ ಮಳಿಗೆಗಳಿಗೆ ಬೇಡಿಕೆ ಬಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಇತರ ಸರ್ಕಾರಿ ಇಲಾಖೆಗಳಿಗೆ 20 ಮಳಿಗೆಗಳನ್ನು ಉಚಿತವಾಗಿ ನೀಡಬೇಕಿದೆ' ಎನ್ನುತ್ತಾರೆ ಅವರು.

'ವಿಜಾಪುರ ಸಮ್ಮೇಳನದಲ್ಲಿ ಪುಸ್ತಕ ವಹಿವಾಟು ನಡೆಸಲು ಬಯಸಿರುವವರು 194 ಮಳಿಗೆಗಳ ಮುಂಗಡ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಲ್ಲಿಯೇ ಪಾವತಿಸಿದ್ದಾರೆ. ಇವರಲ್ಲಿ ಖ್ಯಾತನಾಮ ಪ್ರಕಾಶಕರು ಸೇರಿದ್ದಾರೆ' ಎಂಬುದು ಕಸಾಪ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರ ಹೇಳಿಕೆ. `ವರ್ಷದಿಂದ ವರ್ಷಕ್ಕೆ ಹೊರಬರುತ್ತಿರುವ ಪುಸ್ತಕಗಳ ಸಂಖ್ಯೆ ಮತ್ತು ಬೇಡಿಕೆ ಹೆಚ್ಚುತ್ತಿರುವುದು, ಉತ್ತಮ ವಹಿವಾಟು ನಡೆಯುತ್ತಿರುವುದೇ ಮಳಿಗೆಗಳ ಬೇಡಿಕೆ ಹೆಚ್ಚಳಕ್ಕೆ ಕಾರಣ. ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ 400 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲಿ ರೂ. 9.5 ಕೋಟಿ ಮೌಲ್ಯದ ಪುಸ್ತಕಗಳು ಮಾರಾಟವಾದವು. ವಿಜಾಪುರ ಸಮ್ಮೇಳನದಲ್ಲಿ  ರೂ. 12ರಿಂದ ರೂ. 15 ಕೋಟಿ ಮೌಲ್ಯದ ಪುಸ್ತಕಗಳು ಮಾರಾಟವಾಗುವ ನಿರೀಕ್ಷೆ ಇದೆ' ಎಂದರು.

'ನಿರೀಕ್ಷೆಗಿಂತ ಎರಡು ಪಟ್ಟು ಹೆಚ್ಚಿನ ಬೇಡಿಕೆ ಬಂದಿದೆ. ಮಳಿಗೆ ಕಾಯ್ದಿರಿಸಲು ಇದೇ 30 ಕೊನೆಯ ದಿನ ಎಂದು ಪ್ರಕಟಣೆ ನೀಡಿದ್ದೇವೆ. ಆ ನಂತರ ಮಳಿಗೆ ಕಾಯ್ದಿರಿಸುವುದನ್ನು ಸ್ಥಗಿತಗೊಳಿಸುತ್ತೇವೆ' ಎಂದು ಕಸಾಪ ಜಿಲ್ಲಾ ಘಟಕದ ಎಸ್.ಎಸ್. ಖಾದ್ರಿ ಇನಾಮದಾರ, ಬಸವರಾಜಸ್ವಾಮಿ ಮೇಲುಪ್ಪರಗಿಮಠ ಹೇಳಿದರು.

ವಸತಿ ಸೌಲಭ್ಯ: `ತಲಾ 10 ಅಡಿ ಅಗಲ,10 ಅಡಿ ಉದ್ದ ವಿಸ್ತೀರ್ಣದ ಮಳಿಗೆಯಲ್ಲಿ ಎರಡು ಟೇಬಲ್, ಎರಡು ಕುರ್ಚಿ, ಎರಡು ಟ್ಯೂಬ್‌ಲೈಟ್, ನೆಲಹಾಸು (ಮ್ಯಾಟ್) ಪೂರೈಸಬೇಕು ಎಂಬ ಷರತ್ತಿನೊಂದಿಗೆ ಮಳಿಗೆ ನಿರ್ಮಾಣಕ್ಕೆ ಗುತ್ತಿಗೆ ನೀಡಿದ್ದೇವೆ. ಈ ಎಲ್ಲ ಉಪಕರಣ ಪೂರೈಸುತ್ತೇವೆ. ಈ ಮಾರಾಟ ಮಳಿಗೆಯವರಿಗೆ ಊಟದ ವ್ಯವಸ್ಥೆಯೂ ಇರಲಿದ್ದು, ಒಂದು ಮಳಿಗೆಯ ತಲಾ ಇಬ್ಬರಿಗೆ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ' ಎಂದು ಯಂಡಿಗೇರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.