ADVERTISEMENT

ಪೇಯಿಂಗ್ ಗೆಸ್ಟ್‌ಗೆ ಹೊಸ ನೀತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:45 IST
Last Updated 13 ಜೂನ್ 2019, 19:45 IST
   

ಬೆಂಗಳೂರು: ನಗರ ಪ್ರದೇಶಗಳಲ್ಲಿ ಪೇಯಿಂಗ್ ಗೆಸ್ಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನೀತಿ ರೂಪಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಲ್ಲಿ ಗುರುವಾರ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಜಾರಿಗೆ ತಂದಿರುವ ಕಟ್ಟಡ ನಕ್ಷೆ, ಬಡಾವಣೆಗೆ ಅನುಮೋದನೆ ಹಾಗೂ ಭೂ ಪರಿವರ್ತನೆ ತಂತ್ರಾಂಶ ಹಾಗೂ ವೆಬ್‌ಸೈಟ್‌ಗೆ ವಿಧಾನಸೌಧದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣ, ನಗರ ಪ್ರದೇಶದಲ್ಲಿ ನೀರು ಸಂರಕ್ಷಣೆಗೆ ಸ್ಪಷ್ಟ ನಿಯಮಗಳನ್ನು ರೂಪಿಸಬೇಕಿದೆ. ಬಳಕೆಗಿಂತ ಅಪವ್ಯಯ ಹೆಚ್ಚಾಗಿದ್ದು, ಅದನ್ನು ತಡೆಯಬೇಕಿದೆ. ಮನೆಗಳಲ್ಲಿ ನೀರು ಇಂಗಿಸುವ ವ್ಯವಸ್ಥೆ ಹೊಂದಿದವರಿಗೆ ಉತ್ತೇಜನ ನೀಡಬೇಕಿದ್ದು, ತೆರಿಗೆ ರಿಯಾಯಿತಿ ಸೇರಿದಂತೆ ಕೆಲವು ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ವಿದ್ಯುತ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ಅಂತಹ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಹಾಗೂ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.

ADVERTISEMENT

ಆನ್‌ಲೈನ್ ಮೂಲಕ ವಸತಿ ಸೇವೆ ಪಡೆದುಕೊಳ್ಳುವುದರಿಂದ ಕಚೇರಿಗಳಲ್ಲಿ ಸಿಬ್ಬಂದಿ, ಮಧ್ಯವರ್ತಿಗಳ ಕಾಟ ತಪ್ಪಲಿದ್ದು, ತೆರಿಗೆ ಸಂಗ್ರಹವೂ ಹೆಚ್ಚುತ್ತದೆ. ಈವರೆಗೆ ತೆರಿಗೆ ಪ್ರಮಾಣವನ್ನು ನೌಕರರು ನಿರ್ಧರಿಸುತ್ತಿದ್ದು, ಇನ್ನು ಮುಂದೆ ಆನ್‌ಲೈನ್‌ನಲ್ಲಿ ನಕ್ಷೆಗೆ ಅನುಮೋದನೆ ನೀಡುವ ಸಮಯದಲ್ಲೇ ತೆರಿಗೆ ನಿರ್ಧಾರವಾಗುತ್ತದೆ. ಹಾಗಾಗಿ ಸರ್ಕಾರದ ವರಮಾನದಲ್ಲಿ ಹೆಚ್ಚಳವಾಗಲಿದೆ ಎಂದು ಅವರು ವಿವರಿಸಿದರು.

ಸಬರ್‌ಬನ್ ರೈಲು:ಆನ್‌ಲೈನ್ ಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಸಬರ್‌ಬನ್ ರೈಲು ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಈ ವಾರ ದೆಹಲಿಗೆ ತೆರಳುತ್ತಿದ್ದು, ರೈಲ್ವೆ ಸಚಿವರನ್ನು ಭೇಟಿಮಾಡಿ ಚರ್ಚಿಸಲಾಗುವುದು. ಈ ರೈಲು ಯೋಜನೆಗೆ ರಾಜ್ಯದಿಂದ ನೀಡಬೇಕಾದ ಎಲ್ಲ ಅನುಮತಿ ನೀಡಲಾಗಿದೆ. ಇನ್ನೂ ಕೇಂದ್ರದಿಂದ ಒಪ್ಪಿಗೆ ಸಿಗಬೇಕಿದೆ’ ಎಂದು ಹೇಳಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾಹಿತಿ ನೀಡುವಲ್ಲಿ ಲೋಪವೆಸಗಿವೆ. ಬ್ಯಾಂಕ್‌ಗಳು ಮಾಡಿದ ತಪ್ಪಿಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡಲಾಗುತ್ತಿದೆ. ಬರುತ್ತಿರುವ ಅಡೆತಡೆಗಳನ್ನು ನಿವಾರಿಸಿಕೊಂಡುರೈತರ ಸಾಲ ಮನ್ನಾ ಮಾಡಲಾಗಿದ್ದು, ಬಾಕಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.