ಬೆಂಗಳೂರು: ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2017’ರ ಕಥಾ ಸ್ಪರ್ಧೆ– ಕವನ ಸ್ಪರ್ಧೆಗೆ ನಾಡಿನ ಹಿರಿಯ ಹಾಗೂ ಹೊಸ ತಲೆಮಾರಿನ ಬರಹಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೈಸೂರಿನ ಭದ್ರಪ್ಪ ಶಿ. ಹೆನ್ಲಿ ಅವರ ‘ಎದೆಹೊತ್ತಿ ಉರಿದೊಡೆ...’ ಕಥೆ ಮತ್ತು ಮಂಡ್ಯದ ರಾಜೇಂದ್ರಪ್ರಸಾದ್ ಅವರ ‘ಕರಗದ ಹುಡುಗ’ ಕವನ ಪ್ರಥಮ ಬಹುಮಾನಕ್ಕೆ ಭಾಜನವಾಗಿವೆ.
ತುಮಕೂರಿನ ಬಸವರಾಜ ಕ್ಯಾಶವಾರ (‘ಹೆಣದ ಒಡವೆ’), ಬೆಂಗಳೂರಿನ ಕಂನಾಡಿಗಾ ನಾರಾಯಣ (‘ಬೆರಳಿಗೆ ಕೊರಳು’) ಅವರ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ವಿದ್ಯಾರ್ಥಿ ವಿಭಾಗದಲ್ಲಿ ನೂರಂದಪ್ಪ ಪಡಶೆಟ್ಟಿ ಅವರ ಕಥೆ ‘ಕಷ್ಟದ ಡಬ್ಬಿಯೊಳಗಿನ ಕನಸುಗಳು’ ಬಹುಮಾನ ಪಡೆದಿದೆ.
ರಾಯಚೂರಿನ ಚಿದಾನಂದ ಸಾಲಿ ಅವರ ‘ಹೂದಳ ಮತ್ತು ಆನೆ’, ಮಂಜುನಾಥ ನಾಯ್ಕ್ ಅವರ ಕವಿತೆ ‘ನಾನು ಬುದ್ಧನಾಗುವ ಕ್ಷಣಗಳು’ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ವಿದ್ಯಾರ್ಥಿ ವಿಭಾಗದಲ್ಲಿ ಮಹಮ್ಮದ್ ಶರೀಫ್ ಕಾಡುಮಠ ಅವರ ‘ಶಬ್ದ ನಿಶ್ಯಬ್ದ’ ಕವಿತೆಯು ಬಹುಮಾನ ಪಡೆದಿದೆ.
ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ₹ 20,000, ₹ 15,000 ಹಾಗೂ ₹ 10,000 ಬಹುಮಾನ ಲಭಿಸಲಿದೆ. ವಿದ್ಯಾರ್ಥಿ ವಿಭಾಗದ ಕಥೆಗೆ ₹ 5,000 ಬಹುಮಾನ ದೊರೆಯಲಿದೆ. ಕವನ ಸ್ಪರ್ಧೆ ವಿಭಾಗದಲ್ಲಿ ಮೊದಲ ಮೂರು ಕವಿತೆಗಳಿಗೆ ₹ 5,000, ₹ 3,000 ಹಾಗೂ ₹ 2,500 ಬಹುಮಾನ ದೊರೆಯಲಿದೆ. ವಿದ್ಯಾರ್ಥಿ ವಿಭಾಗದ ಕವಿತೆ ₹ 2,000 ಬಹುಮಾನ ಪಡೆಯಲಿದೆ.
ಪ್ರಕಾಶ್ ಕಾಕಾಲ್ (‘ಕೇರ್‌ಟೇಕರ್ ವಿಷ್ಣು’), ಮಿರ್ಜಾ ಬಷೀರ್ (‘ಮುಂಜಿ’), ವಿಜಯ್ ಹೂಗಾರ (‘ಒಂದು ಖಾಲಿ ಕುರ್ಚಿ’), ಎಂ. ನಾಗರಾಜ ಶೆಟ್ಟಿ (‘ಮೀಸಲು’) ಮತ್ತು ಎಸ್.ಪಿ. ಶ್ಯಾನಭಾಗ ಅವರ (‘ಕಿಚ್ಚು‘) ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.
ಕವನ ಸ್ಪರ್ಧೆಯಲ್ಲಿ ಡಾ.ಲಕ್ಷ್ಮಣ ವಿ.ಎ. (ಇಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ), ಧೀರೇಂದ್ರ ನಾಗರಹಳ್ಳಿ (‘ರಾತ್ರಿಯಿಂದ ಬೆಳಗಿನವರೆಗೂ’), ಸ್ಮಿತಾ ಮಾಕಳ್ಳಿ (ರಪುಂಝಲಳ ಬಂಗಾರದಂಥ ಕೂದಲು ಮತ್ತು ನನ್ನ ಆತ್ಮವೂ‘), ಆರಿಫ್ ರಾಜಾ (‘ಬೊಜ್ಜಿನ ಶಿಲಾಬಾಲಿಕೆಯ ಸ್ವರ್ಗಾರೋಹಣ’), ಕಲಿಗಣನಾಥ ಗುಡದೂರು (ನವಿಲಿಗೇಕೆ ಸಾವಿರ ಕಣ್ಣು’) ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ತೀರ್ಪುಗಾರರು: ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಮತ್ತು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಕಥಾ ಸ್ಪರ್ಧೆಯ ತೀರ್ಪುಗಾರರಾಗಿ, ಕವಿಗಳಾದ ವಿಷ್ಣು ನಾಯ್ಕ ಮತ್ತು ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರು ಕವನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಮಕ್ಕಳ ವರ್ಣಚಿತ್ರ ಸ್ಪರ್ಧೆ: ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಯಶ್ವಿ ಜೆ. ರೈ (ಶಿವಮೊಗ್ಗ), ಸುರಭಿ ಶೆಟ್ಟಿಗಾರ್ (ಬೆಂಗಳೂರು), ಸಂಜುಳಾ ಎಸ್. (ಮೈಸೂರು), ಖಾಜಾಬಿ (ರಾಯಚೂರು), ಭರತ್‌ಕುಮಾರ್ ಎಚ್.ಆರ್. (ತುಮಕೂರು), ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಸ್ವಾತಿ ಪ್ರದೀಪ ಶೆಟ್ಟಿ (ಉತ್ತರ ಕನ್ನಡ), ಆರ್. ಯಶಸ್ವಿ (ಶಿವಮೊಗ್ಗ), ರೋಹಿತ್ ಜೆ. ಅರೇರ (ಗದಗ), ಪೃಥ್ವಿರಾಜ್ ಎಂ.ಆರ್. ಆಳ್ವಾ (ಬೆಂಗಳೂರು) ಮತ್ತು ಕೆ. ಪ್ರಥಮ್ ಕಾಮತ್ (ಉಡುಪಿ) ಬಹುಮಾನ ಪಡೆದಿದ್ದಾರೆ. ಖ್ಯಾತ ಕಲಾವಿದ ಬಾಬುರಾವ ನಡೋಣಿ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅ.14ರಂದು ಮಂಗಳೂರಿನಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸಾಹಿತಿ ವೈದೇಹಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.