ADVERTISEMENT

ಪ್ರಭಾರ ಕುಲಪತಿ ಪಿಎಚ್.ಡಿಯೇ ಕಾನೂನು ಬಾಹಿರ!

ಪ್ರಕರಣದ ದಾಖಲೆಗಳು ನಾಪತ್ತೆ; ಅಧಿಕಾರಿಗಳ ಕೈವಾಡ ಆರೋಪ

ಬಸವರಾಜ ಮರಳಿಹಳ್ಳಿ
Published 4 ಆಗಸ್ಟ್ 2015, 19:34 IST
Last Updated 4 ಆಗಸ್ಟ್ 2015, 19:34 IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗದ ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಕೆ.ಪ್ರೇಮಕುಮಾರ್ ಅವರಿಗೆ ಪಿಎಚ್‌.ಡಿ ಪ್ರದಾನ ಮಾಡಲಾಗಿದೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಪಿಎಚ್‌.ಡಿ ಪಡೆಯಲು ಅವರಿಗೆ ಸಹಕರಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅವರಿಗೆ ನೀಡಿದ ಪಿಎಚ್‌.ಡಿ ಪದವಿ ಹಿಂಪಡೆಯಬೇಕು ಎಂದು 2009ರಲ್ಲಿ ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಂದಿನ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಗೌಡ ಕುಲಸಚಿವರಿಗೆ ಶಿಫಾರಸು ಮಾಡಿದ್ದರು. ಅಲ್ಲದೆ ಕನ್ನಡ ವಿ.ವಿಯಲ್ಲಿ ಉಪ ಕುಲಸಚಿವರಾಗಿದ್ದ ಪ್ರೇಮಕುಮಾರ ಪಿಎಚ್.ಡಿ ಪದವಿಗಾಗಿ ತಮ್ಮ ಸ್ಥಾನದ ಪ್ರಭಾವವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ ಎಂದೂ ಅವರು ಶಿಫಾರಸು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದರು.

ಆದರೆ, ಡಾ.ಮಲ್ಲಿಕಾರ್ಜುನ ಗೌಡ ಅವರು ಶಿಫಾರಸು ಪತ್ರ ನೀಡಿ ಆರು ವರ್ಷ ಕಳೆದರೂ ಪ್ರೇಮಕುಮಾರ್‌ ಅವರಿಗೆ ನೀಡಿದ ಪಿಎಚ್‌.ಡಿ ಪದವಿಯನ್ನು ವಾಪಸ್‌ ಪಡೆಯುವುದಿರಲಿ, ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.  ಇದಕ್ಕೆ ಪುಷ್ಟಿ ನೀಡುವಂತೆ ವಿವಿಯಲ್ಲಿ ಕುರಿತಾದ ದಾಖಲೆಗಳೇ ನಾಪತ್ತೆಯಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಅಕ್ರಮ ನಡೆದಿರುವುದು ಎಲ್ಲಿ?:  ಪಿಎಚ್‌.ಡಿ. ಮುಗಿಸಲು ಪ್ರೇಮಕುಮಾರ್‌ ಅವರಿಗೆ ಐದು ವರ್ಷ ಹನ್ನೊಂದು ತಿಂಗಳ ಕಾಲಾವಕಾಶ  ನೀಡಲಾಗಿದೆ. ಅಧ್ಯಯನಾಂಗದ ನಿಯಮಗಳ ಪ್ರಕಾರ ಪರಿಷ್ಕರಿಸಿದ ಪ್ರಬಂಧವನ್ನು ಮೊದಲ ಮೌಲ್ಯಮಾಪಕರು ಒಪ್ಪಿದಲ್ಲಿ ಮಾತ್ರ, ಅಭ್ಯರ್ಥಿ ಡಾಕ್ಟರೇಟ್‌ಗೆ ಅರ್ಹರಾಗುತ್ತಾರೆ. ಮೊದಲ ಮೌಲ್ಯಮಾಪಕರಿಂದ ಪ್ರಬಂಧ ಇಡಿಯಾಗಿ ತಿರಸ್ಕೃತಗೊಂಡರೆ ಮತ್ತೊಬ್ಬ ಮೌಲ್ಯಮಾಪಕರನ್ನು ನೇಮಿಸಬಾರದು. ಆದರೆ, ಇವರ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಓ.ಎಲ್‌.ನಾಗಭೂಷಣಸ್ವಾಮಿ ಅವರನ್ನು ಮೌಲ್ಯಮಾಪಕರನ್ನಾಗಿ ನೇಮಿಸಲಾಗಿದೆ. 

ಎರಡು ಬಾರಿ ತಿರಸ್ಕೃತ: ಪ್ರೇಮಕುಮಾರ್‌ ಅವರ ಪ್ರಬಂಧ  ಕೃತಿ ಚೌರ್ಯದಿಂದ ಕೂಡಿದೆ; ಪಿಎಚ್‌.ಡಿಗೆ ಅರ್ಹ ಇಲ್ಲ ಎಂದು ಮೌಲ್ಯಮಾಪಕರಾಗಿದ್ದ ರಾಮಚಂದ್ರ ದೇವ ಅವರು ಎರಡು ಬಾರಿ ತಿರಸ್ಕರಿಸಿದ್ದಾರೆ. ಆದರೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತೊಬ್ಬ ಮೌಲ್ಯಮಾಪಕರನ್ನು ನೇಮಕ ಮಾಡಿ ಪಿಎಚ್‌.ಡಿ ಪ್ರದಾನ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದಲ್ಲದೇ  ಪ್ರೇಮಕುಮಾರ್‌ ಅವರಿಗೆ ಪಿಎಚ್‌.ಡಿ ನೀಡಿರುವ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಸ್ವತಃ ರಾಮಚಂದ್ರ ದೇವ ಅವರು ದಿಗ್ಭ್ರಮೆ ವ್ಯಕ್ತಪಡಿಸಿ, ಈ ಬಗ್ಗೆ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದರು.

ರಾಮಚಂದ್ರದೇವ ವರದಿಯಲ್ಲಿ ಏನಿದೆ?: ಪ್ರಬಂಧದಲ್ಲಿ ಉಲ್ಲೇಖಿಸಲಾಗಿರುವ ಲೇಖಕರ ಪೂರ್ಣ ಹೆಸರು ನಮೂದಿಸಿಲ್ಲ. ಪ್ರಬಂಧದ ಹಲವು ಕಡೆಗಳಲ್ಲಿ ಉದ್ಧರಣ (‘’) ಚಿಹ್ನೆಗಳನ್ನು ಉಪಯೋಗಿಸಿದ ಸಂದರ್ಭದಲ್ಲಿ ಯಾವ ಪುಸ್ತಕದಲ್ಲಿ ಯಾರು ಹೇಳಿದ್ದರು ಎಂಬ ಮಾಹಿತಿ ಇಲ್ಲ. ಪ್ರಬಂಧದುದ್ದಕ್ಕೂ ವ್ಯಾಕರಣದ ತಪ್ಪುಗಳು ಹೆಚ್ಚಾಗಿವೆಯಲ್ಲದೆ, ಚಿಹ್ನೆಗಳನ್ನು ಸೂಕ್ತ ಸಂದರ್ಭದಲ್ಲಿ ಬಳಕೆ ಮಾಡಿಲ್ಲ.

ಪ್ರಬಂಧದ ಕೆಲವು ಕಡೆಗಳಲ್ಲಿ ತಪ್ಪು ಮಾಹಿತಿ ಕೊಡಲಾಗಿದೆ. ಮುಖ್ಯವಾಗಿ ಪ್ರಬಂಧದ 293ನೇ ಪುಟದಲ್ಲಿ ಗಿರೀಶ್‌ ಕಾರ್ನಾಡರ ‘ಟಿಪ್ಪು ಸುಲ್ತಾನ್‌’ ಎಂಬ ವಾಕ್ಯವಿದೆ. ಆದರೆ,  ಈ ಕೃತಿ ಬರೆದವರು ಎಚ್‌.ಎಸ್‌.ಶಿವಪ್ರಕಾಶ್‌(ಟಿಪ್ಪು ಸುಲ್ತಾನ್‌ ಕಂಡ ಕನಸು–ಗಿರೀಶ್‌ ಕಾರ್ನಾಡ) .

ಪ್ರಬಂಧದುದ್ದಕ್ಕೂ ಬೇರೆ ಲೇಖಕರ ವಾಕ್ಯಗಳನ್ನು ಹೆಸರು ಹಾಕದೇ ಉದ್ಧರಣ ಚಿಹ್ನೆಗಳಲ್ಲಿ ಸೂಚಿಸದೇ ತಮ್ಮದೆಂಬಂತೆ ಬಳಸಿಕೊಳ್ಳಲಾಗಿದೆ.

ಪ್ರಬಂಧದ ಪುಟ 12 ಕೊನೆಯ ಭಾಗ ಹಾಗೂ ಪುಟ 13ರ ಕೊನೆಯವರೆಗಿನ ಬರವಣಿಗೆಯು ಅ.ನ.ಮೂರ್ತಿರಾಯರ ‘ಶೆಕ್ಸ್‌ಪಿಯರಿಗೆ ನಮಸ್ಕಾರ’ (ಪುಟ 136 ಮತ್ತು 137) ಲೇಖನದಿಂದ ಯಥಾವತ್ತಾಗಿ ನಕಲು ಮಾಡಲಾಗಿದೆ.

ಪ್ರಬಂಧದ ಪುಟ 293ರಲ್ಲಿ ತುಘಲಕ್‌ ನಾಟಕದ ಮೇಲೆ ಶೇಕ್ಸ್‌ಪಿಯರ್‌ನ ಪ್ರಭಾವ...ದಿಂದ ಅನೇಕ ಅಂಶಗಳನ್ನು ತುಘಲಕ್‌ ತನ್ನಲ್ಲಿ ಒಳಗೊಂಡಿದೆ... ವರೆಗಿನ ಬರವಣಿಗೆ ಟಿ.ಪಿ. ಅಶೋಕ ಅವರ ‘ಕನ್ನಡ ನಾಟಕಗಳ ಮೇಲೆ ಶೇಕ್ಸ್‌ಪಿಯರ್‌ನ ಪ್ರಭಾವ’ ಕೃತಿಯಿಂದ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.

ಏನು ಪ್ರಬಂಧ ಮಂಡಿಸಿದ್ದರು?: ಮೈಸೂರು ವಿ.ವಿ ಪ್ರಾಧ್ಯಾಪಕ ಡಾ.ಲಕ್ಷ್ಮೀನಾರಾಯಣ ಅರೋರ ಅವರ ಮಾರ್ಗದರ್ಶನದಲ್ಲಿ ಕೆ.ಪ್ರೇಮಕುಮಾರ್‌ ‘ಶೇಕ್ಸ್‌ಪಿಯರ್‌ನ ದುರಂತ ನಾಟಕಗಳ ಕನ್ನಡ ಅನುವಾದಗಳು’ ಪಿಎಚ್‌.ಡಿ ಪ್ರಬಂಧವನ್ನು 2001ರಲ್ಲಿ ಮಂಡಿಸಿದ್ದರು.
****
ಕಾನೂನು ಉಲ್ಲಂಘಿಸಿ ಕೆ.ಪ್ರೇಮಕುಮಾರ್‌ ಅವರ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ.  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
-ಪ್ರೊ.ಹಿ.ಚಿ.ಬೋರಲಿಂಗಯ್ಯ, ಪ್ರಭಾರ ಕುಲಪತಿ, ಹಂಪಿ ಕನ್ನಡ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT