ಮೂಡುಬಿದಿರೆ: ‘ಅಸಹಿಷ್ಣುತೆ ವಿರೋಧಿಸಿ ವಿವಿಧ ಪ್ರಶಸ್ತಿ ವಿಜೇತರು ಸಮೂಹ ಸನ್ನಿಗೆ ಒಳಗಾಗಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ’ ಎಂದು 12ನೇ ನುಡಿಸಿರಿ ಸರ್ವಾಧ್ಯಕ್ಷ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ವಾಪಸ್ ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಸ್ ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರಿಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ’ ಎಂದು ಹೇಳಿದರು.
‘ಸಾಹಿತ್ಯ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಸಾಹಿತ್ಯದಿಂದ ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದಷ್ಟೆ. ಸಾಮಾನ್ಯರ ಮೇಲೆ ಸಾಹಿತ್ಯ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.
ಸಾಹಿತಿಗಳು ರಾಜಕಾರಣ, ಕೆಲವು ಸಿದ್ಧಾಂತಗಳಿಗೆ ಅಂಟಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ‘ಸಾಹಿತಿಗಳು ಸಮಾಜದ ಹಿತ ಕಾಯಬೇಕು. ನಮ್ಮ ಸಾಹಿತ್ಯ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಹೇಳುವುದನ್ನು ಸಹಾನುಭೂತಿಯಿಂದ ಹೇಳಿದರೆ ಎಲ್ಲರೂ ಕೇಳುತ್ತಾರೆ. ಬದಲಿಗೆ ಪೂರ್ವಾಪರವನ್ನಿಟ್ಟಕೊಂಡು ಯಾರನ್ನೋ ದೂಷಿಸುವುದು ಸರಿಯಲ್ಲ. ನಾವು ಹೇಳುವುದನ್ನೇ ಎಲ್ಲರೂ ಒಪ್ಪಬೇಕು ಎನ್ನುವ ವಾದವೂ ಸರಿಯಲ್ಲ. ಕನ್ನಡದಲ್ಲಿಯೇ ಓದುವಾಗ ಸಿಗುವ ಜೀವಧ್ವನಿ, ಇಂಗ್ಲಿಷ್ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಸಿಗಲು ಸಾಧ್ಯವಿಲ್ಲ. ನಗರೀಕರಣದ ಕನ್ನಡದಿಂದಾಗಿ ನೈಜ ಕನ್ನಡ ಸತ್ತು ಹೋಗಿದೆ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಅನುಷ್ಠಾನವಾಗಬೇಕಿದೆ. ಏಕೆಂದರೆ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವುದು ಸಾಮಾನ್ಯ ಜನರು. ಅವರಿಗೆ, ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.
*
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ವಿಚಾರದಲ್ಲಿ ಆಸಕ್ತಿ ಇಲ್ಲ.
- ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ
ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.