ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ 40 ಅಭ್ಯರ್ಥಿಗಳು ನಕಲಿ ಪ್ರಮಾಣ ಪತ್ರಗಳನ್ನು ನೀಡಿದ ಪ್ರಕರಣ ನಡೆದಿದೆ. ಕಾಲೇಜು ಶಿಕ್ಷಣ ಇಲಾಖೆ ಇದನ್ನು ಪತ್ತೆ ಹಚ್ಚಿದೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 40 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕಳುಹಿಸದಂತೆ ಶಿಫಾರಸು ಮಾಡಿ ಕಾಲೇಜು ಶಿಕ್ಷಣ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಗೆ ವರದಿ ಕಳುಹಿಸಿದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅಗತ್ಯವಾಗಿ ಬೇಕಾದ ಸ್ನಾತಕೋತ್ತರ ಪದವಿ, ಪಿಎಚ್.ಡಿ ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪ್ರಮಾಣ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಲಾಗಿದೆ. ಇಂತಹ ನಕಲಿ ಪ್ರಮಾಣ ಪತ್ರಗಳನ್ನು ಎರಡು ತಿಂಗಳಿನಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಈಗಾಗಲೇ 40 ಅಭ್ಯರ್ಥಿಗಳು ಅಕ್ರಮ ನಡೆಸಿರುವುದು ಸಾಬೀತಾದ್ದರಿಂದ ಅವರಿಗೆ ನೇಮಕಾತಿ ಪತ್ರ ನೀಡದಂತೆ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಇನ್ನೂ 50ರಿಂದ 55 ಅಭ್ಯರ್ಥಿಗಳು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿರುವುದು ಪತ್ತೆಯಾಗಿದೆ. ಸಂಪೂರ್ಣ ಪರಿಶೀಲನೆ ಬಳಿಕ ಅವರನ್ನೂ ಪಟ್ಟಿಯಿಂದ ಕೈಬಿಡುವಂತೆ ಶಿಫಾರಸು ಮಾಡಲಾಗುವುದು’ ಎಂದೂ ಮೂಲಗಳು ತಿಳಿಸಿವೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 2,160 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲು 2015ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲಾಗಿತ್ತು. 2016ರ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಆಗಸ್ಟ್‌ನಿಂದ ದಾಖಲಾತಿ ಪರಿಶೀಲನೆ ಮಾಡಲಾಗಿತ್ತು. 44 ಅಭ್ಯರ್ಥಿಗಳು ನಕಲಿ ಪಿಎಚ್.ಡಿ ಪ್ರಮಾಣ ಪತ್ರ ನೀಡಿರುವುದು ಪತ್ತೆಯಾದ್ದರಿಂದ ಆಗಲೇ ಅವರನ್ನು ಕೈಬಿಡಲಾಗಿತ್ತು. ಒಟ್ಟು 2,034 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿತ್ತು.
ಎಲ್ಲವೂ ನಕಲಿ: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿಶ್ರಾಂತ ಕುಲಪತಿಗಳ ಮೂಲಕ ಮತ್ತೊಮ್ಮೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಮತ್ತಷ್ಟು ನಕಲಿ ಪ್ರಮಾಣ ಪತ್ರಗಳು ಪತ್ತೆಯಾಗಿವೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿ ಇದ್ದವರ ಪೈಕಿ 23 ಅಭ್ಯರ್ಥಿಗಳು ನಕಲಿ ಪಿಎಚ್.ಡಿ ಪ್ರಮಾಣ ಪತ್ರ ನೀಡಿದ್ದಾರೆ. ಹೊರ ರಾಜ್ಯಗಳಲ್ಲಿ ಮಾನ್ಯತೆ ಇಲ್ಲದ ವಿವಿಗಳಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದು ಅಲ್ಲಿ ನೀಡಲಾದ ಪ್ರಮಾಣ ಪತ್ರಗಳನ್ನು ಕೆಲವರು ಒದಗಿಸಿದ್ದಾರೆ. 203 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್‌ಇಟಿ) ಪ್ರಮಾಣ ಪತ್ರದಲ್ಲಿನ ಭಾವಚಿತ್ರ ಹೋಲಿಕೆ ಆಗುತ್ತಿರಲಿಲ್ಲ. ಬಳಿಕ ಕಲರ್ ಝೆರಾಕ್ಸ್ ಪ್ರತಿ ಪಡೆದು ಪರಿಶೀಲಿಸಿದಾಗ ಅನೇಕರು ನಕಲಿ ಎನ್‌ಇಟಿ ಪ್ರಮಾಣ ಪತ್ರ ಕೊಟ್ಟಿರುವುದು ಪತ್ತೆಯಾಗಿದೆ.
ಇಂತಹ ಅಭ್ಯರ್ಥಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಇಲಾಖೆ ಪರಿಶೀಲಿಸುತ್ತಿದೆ.
ಹಲವು ರಾಜ್ಯ ಸುತ್ತಿದ ಅಧಿಕಾರಿಗಳು
ಅಭ್ಯರ್ಥಿಗಳು ನೀಡಿರುವ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿತ್ತು.ಅಭ್ಯರ್ಥಿಗಳು ಯಾವ ರಾಜ್ಯದ ವಿಶ್ವವಿದ್ಯಾಲಯ ಅಥವಾ ಕಾಲೇಜಿನ ಪ್ರಮಾಣ ಪತ್ರ ನೀಡಿದ್ದಾರೋ ಅಲ್ಲಿಗೇ ಹೋಗಿ ಪರಿಶೀಲನೆ ನಡೆಸಲಾಗಿದೆ. ಇದಕ್ಕಾಗಿ ದೆಹಲಿ, ರಾಜಸ್ಥಾನ, ಒಡಿಶಾ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಅಧಿಕಾರಿಗಳು ಓಡಾಡಿದ್ದಾರೆ.
ವಿಶೇಷ ಎಂದರೆ ದಕ್ಷಿಣ ಆಫ್ರಿಕಾದಲ್ಲಿ ಅಸ್ತಿತ್ವದಲ್ಲೇ ಇರದ ವಿಶ್ವವಿದ್ಯಾಲಯವೊಂದರ ಹೆಸರಿನಲ್ಲಿ ಅಭ್ಯರ್ಥಿಯೊಬ್ಬ ಪಿಎಚ್.ಡಿ ಪ್ರಮಾಣ ಪತ್ರ ನೀಡಿದ್ದ. ಆ ದೇಶದ ರಾಯಭಾರ ಕಚೇರಿ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.