ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಾನಸಿಕ ಅಸ್ವಸ್ಥ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರುಫೊರೆನ್ಸಿಕ್ ಸಾಕ್ಷ್ಯಕ್ಕಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆ ತಜ್ಞರ ಮೊರೆ ಹೋಗಿದ್ದಾರೆ.
ಗ್ರಾಮದಲ್ಲಿ ಮೇ 17ರಂದು ಗ್ರಾಮದೇವರ ಜಾತ್ರೆ ದಿನ ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿ ಅತ್ಯಾಚಾರ ನಡೆಸಿದ್ದನು. ಮೇ 18ರಂದು ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಹನುಮಂತ ಮಹಾಗುಂಡಪ್ಪ ಹುಲಸಗೇರಿ (32) ಎಂಬುವನನ್ನು ಬಂಧಿಸಲಾಗಿದೆ.
ಅತ್ಯಾಚಾರದ ವೇಳೆ ಮೆದುಳಿನ ಅಘಾತಕ್ಕೆ ಒಳಗಾದ ಯುವತಿಯು ಕೋಮಾ ಸ್ಥಿತಿಗೆ ತಲುಪಿದ್ದರು. ಅವರಿಗೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಜಿಲ್ಲಾಡಳಿತ ಕೂಡ ಆಕೆಯ ಚಿಕಿತ್ಸೆಗೆ ನೆರವಾಗಿತ್ತು.‘ತಿಂಗಳು ಕಾಲ ಚಿಕಿತ್ಸೆ ನಂತರ ಸಂತ್ರಸ್ತೆ ಈಗ ಚೇತರಿಸಿಕೊಂಡಿದ್ದಾರೆ. ಪ್ರಜ್ಞೆ ಬಂದಿದೆ. ಆಕೆ ಆರೋಪಿಯನ್ನು ಗುರುತಿಸಿದ್ದಾರೆ. ಆದರೂ ಪ್ರಕರಣ ಗಂಭೀರವಾಗಿರುವ ಕಾರಣ ಫೊರೆನ್ಸಿಕ್ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಫೊರೆನ್ಸಿಕ್ ಸಾಕ್ಷ್ಯ ಸಂಗ್ರಹ:‘ಅತ್ಯಾಚಾರದ ವೇಳೆ ಸಂತ್ರಸ್ತೆಯ ಎದೆ ಹಾಗೂ ಕಾಲಿನ ಭಾಗಕ್ಕೆ ಆರೋಪಿ ಕಚ್ಚಿದ್ದು, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ತಜ್ಞರನ್ನು ಕರೆಸಿ ಹಲ್ಲು, ಉಗುರಿನ ಗುರುತು ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದ್ದೇವೆ. ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದುಎಸ್‌ಪಿ ತಿಳಿಸಿದರು.
‘ದೆಹಲಿಯಲ್ಲಿ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಫೊರೆನ್ಸಿಕ್ ಸಾಕ್ಷ್ಯ ಮಹತ್ವದ ಸಾಕ್ಷಿಯಾಗಿತ್ತು. ಆ ಪ್ರಕರಣದಲ್ಲೂ ಧಾರವಾಡದ ತಜ್ಞರೇ ಸಾಕ್ಷ್ಯ ಸಂಗ್ರಹಿಸಿದ್ದರು’ ಎಂದು ಹೇಳಿದರು.
ಅತ್ಯಾಚಾರಕ್ಕೆ ಪ್ರಯತ್ನಿಸಿ ಸಿಕ್ಕಿಬಿದ್ದಿದ್ದನು:ಆರೋಪಿ ಹನುಮಂತ ಈ ಹಿಂದೆಯೂ ಗ್ರಾಮದಲ್ಲಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು ಎನ್ನಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಗುಳೇದಗುಡ್ಡ ಸಮೀಪದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದನು. ಆಗ ಗ್ರಾಮಸ್ಥರೇ ಹಿಡಿದು ಒದ್ದು ಗುಳೇದಗುಡ್ಡ ಪೊಲೀಸರಿಗೆ ಒಪ್ಪಿಸಿದ್ದರು.
‘ಆಗ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಊರಿಗೆ ಮರಳಿದ್ದನು’ ಎಂದು ಎಸ್‌ಪಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.