ADVERTISEMENT

ಬಂಡುಕೋರ ಪ್ರವೃತ್ತಿಯ ಯುಆರ್‌ಎ

ಮುಂಬೈನಲ್ಲಿ ಕನ್ನಡ ಸಾಹಿತ್ಯ ಚಿಂತನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಮುಂಬೈ: ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತಮೂರ್ತಿಯವರದು ಅದ್ಭುತ ವ್ಯಕ್ತಿತ್ವ. ಜಾತಿ  ವರ್ಗಗಳನ್ನು ಮೀರಿ ಕರ್ನಾಟಕದ ಸಮುದಾಯವನ್ನು ಪ್ರೀತಿ ಮಾಡುತ್ತಿದ್ದ ಅವರದು ಒಂದು ಬಗೆಯ ಬಂಡುಕೋರ ಮನೋಭಾವ. ವರ್ತಮಾನದ ಆತಂಕದ ಕ್ಷಣಗಳಿಗೆ ಕೊನೆಯವರೆಗೂ ಮುಖಾ­ಮುಖಿ ಆಗಿ­ದ್ದರು’ ಎಂದು ವಿಮರ್ಶಕ, ಬೆಂಗಳೂರಿನ ಡಾ. ಬಸವರಾಜ ಕಲ್ಗುಡಿ ಹೇಳಿದರು.

ಇಲ್ಲಿ ಈಚೆಗೆ ನಡೆದ ಮುಂಬೈ ಕರ್ನಾಟಕ ಸಂಘದ 13ನೇ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಅನಂತ ಮೂರ್ತಿ ಸಾಹಿತ್ಯ ಮತ್ತು ತಾತ್ವಿಕತೆ ವಿಷಯದ ಬಗ್ಗೆ ಕಲ್ಗುಡಿ ವಿಶೇಷ ಉಪನ್ಯಾಸ ನೀಡಿದರು.

‘ಅನಂತಮೂರ್ತಿ ಸಂಪ್ರದಾಯ ಮನೆ­ತನ­­ದಿಂದ ಬಂದರೂ ಆ ಮೋಹವು ಆಚರಣೆಗೆ ಬದ್ಧವಾಗಿರಲಿಲ್ಲ. ಕನ್ನಡದ ಬಹು ಮುಖ್ಯ ಬರಹಗಾರರಲ್ಲಿ ಅನಂತ ಮೂರ್ತಿ ಯೋಚನೆ ಭಿನ್ನವಾಗಿತ್ತು ’ಎಂದು ತಿಳಿಸಿದರು.

‘ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಿದ್ಧಾಂತ, ಆತಂಕ ವನ್ನು ಅವರ ಬರಹ ಸದಾ ಎದುರಿಸುತ್ತಾ ಬಂದಿತ್ತು. ಸಾಹಿತ್ಯದ ಸೌಂದರ್ಯಾತ್ಮಕ ಸಂಕಟ ಮಾತ್ರವಲ್ಲ, ಬದುಕಿನಲ್ಲೂ ಸಂಪ್ರ­ದಾಯ­ದಿಂದ ಬಿಡಿಸಿಕೊಳ್ಳುವುದು ಮತ್ತು ಅಧುನಿಕತೆ­ಯಿಂದಲೂ ಹೇಗೆ ಬಿಡಿಸಿಕೊಳ್ಳುವುದು ಹೀಗೆ ಎರಡೂ ಕಡೆ ಅವರ ಬರಹಗಳು ಗೆದ್ದಿವೆ’ ಎಂದರು.

‘ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟಕ್ಕೆ ಒಯ್ದು ಜೀವಂತಿಕೆ ತಂದು ಕೊಟ್ಟವರು ಅನಂತಮೂರ್ತಿ. ಅವರು ನಮ್ಮ ಕಾಲದಲ್ಲಿ ಇದ್ದರು ಎನ್ನುವುದೇ ನಮಗೆ ಸಂತೋಷದ ಸಂಗತಿ’ ಎಂದು ಹೇಳಿದರು.

ಕನ್ನಡ ಸಾಹಿತ್ಯಕ್ಕೂ ಮುಂಬಯಿಗೂ ಇರುವ ಅವಿನಾಭಾವ ಸಂಬಧದ ಕುರಿತಾಗಿಯೂ ಅವರು ಪ್ರಶಂಸೆಯ ಮಾತುಗಳನ್ನಾಡಿದರು.
ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಕಾರ್ಯಕ್ರಮ ನಿರೂಪಿಸಿ, ಪರಿಚಯಿಸಿ ವಂದಿಸಿದರು.

ಮುಂಬೈ ಕರ್ನಾಟಕ ಸಂಘದ ಪರವಾಗಿ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೆ ಮತ್ತು (ಬಲತುದಿ) ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ ಮತ್ತು ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಅವರು ಉಪನ್ಯಾಸಕ ಡಾ. ಬಸವರಾಜ ಕಲ್ಗುಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.