ಬದಿಯಡ್ಕ: ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಾ ಬಂದ ಕವಿ, ಶತಾಯುಷಿ ಕಯ್ಯಾರ ಕಿಞ್ಞಣ್ಣ ರೈ ಅವರ ಅಂತ್ಯಸಂಸ್ಕಾರ ಅವರ ಮನೆಯ ಬಳಿಯಲ್ಲಿ ಸೋಮವಾರ ನಡೆಯಿತು. ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ಕರ್ನಾಟಕ ಮತ್ತು ಕೇರಳ ರಾಜ್ಯದ ಹಲವಾರು ಮಂದಿ ಸಚಿವರು, ಅಧಿಕಾರಿಗಳು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಪಿ.ಎಸ್ ಮಹಮ್ಮದ್ ಸಗೀರ್, ಕೇರಳ ರಾಜ್ಯ ಸಾಂಸ್ಕೃತಿಕ ಖಾತೆ ಸಚಿವ ಕೆ.ಸಿ ಜೋಸೆಫ್, ಶಾಸಕರಾದ ಎನ್. ಎ. ನೆಲ್ಲಿಕುಂಜೆ, ಇ.ಚಂದ್ರಶೇಖರನ್, ಕರ್ನಾಟಕದ ಸಚಿವರಾದ ರಮಾನಾಥ ರೈ, ಯು.ಟಿ ಖಾದರ್, ಉಮಾಶ್ರೀ, ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್. ವಿ. ಭಟ್, ಬೇಳ ಚರ್ಚ್ ಧರ್ಮಗುರು ಫಾದರ್ ವಿನ್ಸೆಂಟ್ ಡಿಸೋಜಾ, ರಾಜಕೀಯ ಮುಖಂಡರಾದ ಜನಾರ್ಧನ ಪೂಜಾರಿ, ವಾಟಾಳ್ ನಾಗರಾಜ್ ಮತ್ತಿತರರು ಅಂತಿಮ ದರ್ಶನ ಪಡೆದರು.
ಕಯ್ಯಾರರ ನಿಧನಕ್ಕೆ ಶ್ರದ್ಧಾಂಜಲಿ ಸೂಚಿಸಿ, ಸೋಮವಾರ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ರಜೆ ಸಾರಲಾಗಿತ್ತು. ಬದಿಯಡ್ಕ ವಲಯ ವ್ಯಾಪಾರಿ ಸಂಘಟನೆಗಳು ಅರ್ಧ ದಿನ ವ್ಯವಹಾರ ಮೊಟಕುಗೊಳಿಸಿ ಶ್ರದ್ಧಾಂಜಲಿ ಅರ್ಪಿಸಿದವು. ಸೋಮವಾರ ಸಂಜೆ ಬದಿಯಡ್ಕದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.
ಕಯ್ಯಾರರ ಸ್ಮರಣೆಗಾಗಿ ಬದಿಯಡ್ಕದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯ, ಕಯ್ಯಾರರ ಮನೆಯಲ್ಲಿರುವ ಬೃಹತ್ ಗ್ರಂಥಗಳ ರಕ್ಷಣೆ ಮೊದಲಾದ ಅನೇಕ ಯೋಜನೆಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.