ಶ್ರವಣ ಬೆಳಗೊಳ: ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ವತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಲಾ ಬಾಲಕಿಯರನ್ನು ಕಬ್ಬಿಣದ ಸಣ್ಣ ತಂತಿಗಳಿಂದ ಬಂಧಿಸಿಡಲಾದ ವಿಶಿಷ್ಟ ಸ್ತಬ್ಧಚಿತ್ರ ನೋಡುಗರನ್ನು ಸೆಳೆಯಿತು. ಬೇಲೂರಿನ ಚೆನ್ನಕೇಶವ ಮಂದಿರದ ಪ್ರತಿಕೃತಿಯ ಸುತ್ತ ನಾಲ್ಕು ‘ಜೀವಂತ ಶಿಲಾಬಾಲಿಕೆ’ಯರು ನಿಂತಿದ್ದರು. ಇವರು ತಮ್ಮ ಮೈಗೆಲ್ಲಾ ಬೆಳ್ಳಿ ಬಣ್ಣವನ್ನು ಮೆತ್ತಿಕೊಂಡು ಬಟ್ಟೆ ತೊಟ್ಟು ನಿಂತಿದ್ದರು. ಕೈಯಲ್ಲಿ ದರ್ಪಣ ಹಿಡಿದು ನಿಂತಿದ್ದ ಜೀವಂತ ಶಿಲಾಬಾಲಿಕೆಯಂತೂ ನೋಡುಗರನ್ನು ಬಹುವಾಗಿ ಆಕರ್ಷಿಸಿದಳು. ಆದರೆ, ಸೂರ್ಯನ ಬಿರುಬಿಸಿಲಿಗೆ ನಿಂತಿದ್ದ ಅವರು ಎಲ್ಲಿ ಕೂತು ಬಿಡುತ್ತಾರೋ ಎಂದು ಬಿಗಿದಿದ್ದ ಸರಪಳಿಯಿಂದಾಗಿ ಅವರು ಕೂರದೇ ಬಸವಳಿಯಬೇಕಾಯಿತು. ಎರಡೂವರೆ ಕಿ.ಮೀ ಉದ್ದದ ಮೆರವಣಿಗೆಯಲ್ಲಿ ನೋಡಿದವರೆಲ್ಲಾ ಪಾಪ ಎಂದರೇ ವಿನಾ ಇದು ಸುಂದರವಾಗಿತ್ತು ಎಂದು ಬಣ್ಣಿಸಲಿಲ್ಲ...!
ನೀರಿನ ಕೊರತೆ...!: ಮೆರವಣಿಗೆಯಲ್ಲಿ ಕುಣಿದು ಕುಣಿದು ಬಸವಳಿದ ಕಲಾತಂಡಗಳಿಗೆ ಕುಡಿಯುವ ನೀರಿನ ಪೂರೈಕೆ ಸರಿಯಾಗಿರಲಿಲ್ಲ. ಬಹಳಷ್ಟು ಕಡೆ ಹಾದಿಯಲ್ಲಿ ಸಿಕ್ಕ ಮನೆಯವರೇ ನೀರಿನ ಬಾಟಲಿಗಳನ್ನು ಕೊಡುತ್ತಿದ್ದರು. ಮೆರವಣಿಗೆ ಕ್ರಮಿಸುವ ಹಾದಿಯೂ ಹೆಚ್ಚಾಯಿತು ಎಂದು ಕೆಲವು ಕಲಾವಿದರು ಹೇಳಿಕೊಳ್ಳದೇ ಹೋದರೂ ಇನ್ನೆಷ್ಟು ದೂರ ಇದೆ ಮುಖ್ಯ ವೇದಿಕೆ ಎಂದು ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆಯಲ್ಲಿ ಸಾಗಿದ ವಿಐಪಿ ಕಾರುಗಳು...!: ಈ ಬಾರಿಯ ಮೆರವಣಿಗೆಯಲ್ಲಿ ಕೇವಲ ಕಲಾತಂಡಗಳು, ಸ್ತಬ್ಧಚಿತ್ರಗಳಷ್ಟೇ ಇರಲಿಲ್ಲ. ಇವುಗಳ ಜತೆಗೆ ವಿಐಪಿ ಕಾರುಗಳೂ ಸಾಗಿದ ದೃಶ್ಯಕ್ಕೆ ಮೆರವಣಿಗೆ ಹಾದಿ ಸಾಕ್ಷ್ಯ ಒದಗಿಸಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ಅನಾರೋಗ್ಯ ಸಮಸ್ಯೆ. ಹೀಗಾಗಿ, ಅವರು ಕಾರಿನಲ್ಲಿ ಹೊರಟರು. ಆದರೆ, ಇವರ ಕಾರಿನ ಹಿಂದೆ ಏಳೆಂಟು ವಿಐಪಿ ಅಧಿಕಾರಿಗಳು ಹೊರಟು ಕಲಾತಂಡಗಳಿಗೆ ಕಿರಿಕಿರಿ ಉಂಟು ಮಾಡಿದವು.
ಮೆರವಣಿಗೆಯ ಹಾದಿಯಲ್ಲಿಯೇ ಪಾರ್ಕಿಂಗ್...!: 81 ಕಲಾತಂಡಗಳು ಸಾಗುವ ಹಾದಿಯಲ್ಲಿ ಸಾಲು ಸಾಲಾಗಿ ಅನೇಕ ಕಾರುಗಳು ಪಾರ್ಕಿಂಗ್ ಮಾಡಿದ್ದವು. ಬೈಕ್‌ಗಳೂ ಸಹ ಇದ್ದು ಮೆರವಣಿಗೆ ಯುದ್ದಕ್ಕೂ ಸಾಗಿದ ಜನರಿಗೆ ಹಾಗೂ ಕಲಾತಂಡಗಳಿಗೆ ಇವು ತೊಡಕಾಗಿ ಪರಿಣಮಿಸಿದವು. ಇವುಗಳನ್ನು ತೆರವುಗೊಳಿಸುವ ಕಡೆಗೆ ಯಾರೊಬ್ಬರೂ ಗಮನ ನೀಡಲಿಲ್ಲ.
ಹಿಂದಿ ಭಾಷಣದ ವಿರುದ್ಧ ಘೋಷಣೆ: ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ಸಮಿತಿ ಹಾಗೂ ಇತರ ಕನ್ನಡಪರ ಸಂಘಟನೆಗಳು ಮೆರವಣಿಗೆಯಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಬಾರದು ಎಂದು ಘೋಷಣೆ ಕೂಗಿದ್ದು ಗಮನ ಸೆಳೆಯಿತು. ರಾಜ್ಯಪಾಲರು ಕನ್ನಡ ಕಲಿಯಬೇಕು. ಹಿಂದಿ ಬಿಡಬೇಕು ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಬೆದರಿ ಒದ್ದ ಎತ್ತುಗಳು...!
ಸಿದ್ದಲಿಂಗಯ್ಯ ಅವರು ಮೈಸೂರು ಪೇಟ ಧರಿಸಿ ಪತ್ನಿ ಸಮೇತರಾಗಿ ಎತ್ತಿನಗಾಡಿಯಲ್ಲಿ ಕುಳಿತರು. ಶಾಸಕ ಬಾಲಕೃಷ್ಣ ಅವರು ಸಾರಥಿಯಾಗಿ ಬಂಡಿ ಮುನ್ನಡೆಸಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆದರೆ, ಮೆರವಣಿಗೆಯಲ್ಲಿ ಸಿದ್ದಲಿಂಗಯ್ಯ ಅವರು ಕುಳಿತಿದ್ದ ಗಾಡಿಯ ಹಿಂದೆ ಬರುತ್ತಿದ್ದ ಗಾಡಿಗಳ ಎತ್ತುಗಳು ಬೆದರಿದವು. ಕೊನೆಗೆ ನಾಲ್ಕೈದು ಮಂದಿ ಹರಸಾಹಸಪಟ್ಟು ಮೂಗುದಾರವನ್ನು ಬಿಗಿಯಾಗಿ ಹಿಡಿದುಕೊಂಡು ಸಾಗಬೇಕಾಯಿತು. ಒಮ್ಮೊಮ್ಮೆ ಎತ್ತುಗಳು ಸನಿಹದಲ್ಲಿ ಹಾದು ಹೋಗುತ್ತಿದ್ದ ಜನರಿಗೆ ಒದೆಯುತ್ತಲೂ ಇದ್ದವು. ಮುಖ್ಯ ವೇದಿಕೆಯ ಬಳಿ ಬಂದಾಗಲಂತೂ ವಿಪರೀತ ಎಗರಾಡತೊಡಗಿದವು. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.