ADVERTISEMENT

ಬಿಜೆಪಿ–ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ

ಚಿಂಚೋಳಿ: ಖರ್ಗೆ, ಉಮೇಶ ಜಾಧವ ನಡುವೆ ಎರಡನೇ ಸುತ್ತಿನ ಹೋರಾಟ

ಸುಭಾಸ ಎಸ್.ಮಂಗಳೂರ
Published 16 ಮೇ 2019, 20:00 IST
Last Updated 16 ಮೇ 2019, 20:00 IST
ಸುಭಾಷ ರಾಠೋಡ
ಸುಭಾಷ ರಾಠೋಡ   

ಕಲಬುರ್ಗಿ: ಚಿಂಚೋಳಿ ಉಪ ಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಇದು ‘ಹೈ ವೋಲ್ಟೇಜ್’ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ ಜಾಧವ ಅವರ ನಡುವೆ ಇನ್ನೊಂದು ಸುತ್ತಿನ ಕದನಕ್ಕೂ ಸಿದ್ಧವಾಗಿದೆ.

ಈ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದ ಡಾ.ಉಮೇಶ ಜಾಧವ ರಾಜೀನಾಮೆ ನೀಡಿ ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಿಂದ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು. ತಮ್ಮ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ತಮ್ಮ ಪುತ್ರ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಡಾ. ಅವಿನಾಶ್‌ ಜಾಧವರನ್ನು ಕಣಕ್ಕಿಳಿಸಿದ್ದಾರೆ.

ಡಾ.ಉಮೇಶ ಜಾಧವ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಬಂಜಾರ ಸಮುದಾಯದ ಸುಭಾಷ ರಾಠೋಡ ಅವರನ್ನು ಕಣಕ್ಕಿಳಿಸಿದ್ದಾರೆ.‌ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ ಬಿಜೆಪಿಯಲ್ಲಿದ್ದರು. ಲೋಕಸಭೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಉಮೇಶ ಜಾಧವ ಸೇರ್ಪಡೆ ವಿರೋಧಿಸಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಾಳೆಯಕ್ಕೆ ಜಿಗಿದಿದ್ದರು.

ADVERTISEMENT

ಬಿಎಸ್‌ಪಿ ಸೇರಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ. ಐನಾಪುರ ಏತ ನೀರಾವರಿ ಯೋಜನೆ, ಸಕ್ಕರೆ ಕಾರ್ಖಾನೆ ಆರಂಭ ವಿಷಯ ಕೆಲವೊಮ್ಮೆ ಚರ್ಚೆಯಾಗಿದ್ದು ಬಿಟ್ಟರೆ ಚುನಾವಣಾ ಪ್ರಚಾರ ಆರೋಪ–ಪ್ರತ್ಯಾರೋಪಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ.

ಇದು ಮೀಸಲು ಕ್ಷೇತ್ರವಾಗಿದ್ದರೂ ವೀರಶೈವ ಲಿಂಗಾಯತ ಮತದಾರರು ಹೆಚ್ಚಿನಸಂಖ್ಯೆಯಲ್ಲಿ ಇದ್ದಾರೆ. ಹಿಂದೆ ಈ ಕ್ಷೇತ್ರವನ್ನು ನಾಲ್ಕುಬಾರಿಪ್ರತಿನಿಧಿಸಿದ್ದ ವೀರೇಂದ್ರ ಪಾಟೀಲ ಎರಡು ಬಾರಿ ಮುಖ್ಯಮಂತ್ರಿಯೂ ಆಗಿದ್ದರು. ಯಡಿಯೂರಪ್ಪ ಅವರು, ‘ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಅವರ ರಾಜೀನಾಮೆಯನ್ನು ವಿಮಾನ ನಿಲ್ದಾಣದಲ್ಲಿ ತೆಗೆದುಕೊಂಡು ಅವಮಾನಿಸಿದ ಕಾಂಗ್ರೆಸ್‌ನ್ನು ಕ್ಷಮಿಸಬೇಡಿ’ ಎಂದು ಪದೇ ಪದೇ ಹೇಳುವ ಮೂಲಕ ‘ಲಿಂಗಾಯತ ಪ್ರಜ್ಞೆ’ ಜಾಗೃತಗೊಳಿಸಲು ಯತ್ನಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಈ ಸಮುದಾಯದ ಮತ ಸೆಳೆಯುವ ಯತ್ನದಲ್ಲಿ ತೊಡಗಿದ್ದಾರೆ.

ಜಾಧವ ಇದೇ ಕ್ಷೇತ್ರದ ಬೆಡಸೂರ ತಾಂಡಾದವರು. ಸುಭಾಷ ಆಳಂದ ತಾಲ್ಲೂಕಿನ ಮಟಕಿ ತಾಂಡಾದವರು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದರೂಇಲ್ಲಿ ‘ಒಳಗಿನವ–ಹೊರಗಿನವ’ ಎಂಬ ಚರ್ಚೆ ಜೋರಾಗಿದೆ. ಉಮೇಶ ಜಾಧವ ಸ್ವಜಾತಿಯವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ‘ನಮ್ಮವ ಸಂಸದ ಆಗಲಿ’ ಎಂಬ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಈ ಸಮುದಾಯ ಉಮೇಶ ಜಾಧವ ಬೆನ್ನಿಗೆ ನಿಂತಿತ್ತು. ಇದೇ ಹುಮ್ಮಸ್ಸಿನಲ್ಲಿರುವ ಜಾಧವ ವೀರಶೈವ ಲಿಂಗಾಯತ, ಕೋಲಿ ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳು ಕೈಹಿಡಿದರೆ ತಮ್ಮ ಮಗ ದಡ ಸೇರಬಹುದು ಎಂದು ಬಲವಾಗಿ ನಂಬಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಾಮಬಲವೂ ಅವರಿಗಿದೆ. ಕೋಲಿ ಸಮುದಾಯದ ಮುಖಂಡ ಬಾಬುರಾವ ಚಿಂಚನೂರ ಅವರು ಖರ್ಗೆ ವಿರುದ್ಧ ತೊಡೆ ತಟ್ಟುತ್ತ ಕ್ಷೇತ್ರ ಸುತ್ತುತ್ತಿದ್ದಾರೆ. ಈ ಕ್ಷೇತ್ರದ ಮಾಜಿ ಶಾಸಕ ಸುನೀಲ ವಲ್ಲ್ಯಾಪುರ ಅವರೂ ಅವಿನಾಶ್‌ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ–ಈಶ್ವರಪ್ಪ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ.

ಇನ್ನು ಕಾಂಗ್ರೆಸ್ಸಿಗರು ‘ಸ್ವಾಭಿಮಾನ’ದ ಕಿಚ್ಚು ಹಚ್ಚುತ್ತಿದ್ದಾರೆ. ‘ಉಮೇಶ ಜಾಧವ ಅವರ ಅಣ್ಣ ರಾಮಚಂದ್ರ ಜಾಧವಗೆ ಬಿಜೆಪಿ ಟಿಕೆಟ್‌ ನೀಡಿದ್ದರೂ, ಹಟ ಹಿಡಿದು ಮಗನಿಗೆ ಟಿಕೆಟ್‌ ಕೊಡಿಸಿದ್ದಾರೆ. ಅಣ್ಣನನ್ನು ನಂಬದ ಅವರು ಕಾರ್ಯಕರ್ತರನ್ನು ನಂಬುತ್ತಾರಾ’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಯೊಂದು ಸಮಾವೇಶ, ಸಭೆಗಳಿಗೆ ಹಾಜರಾಗಿ ಜಾಧವ ‘ಬೆನ್ನಿಗೆ ಚೂರಿ ಹಾಕಿದ’ ಕಥೆಯನ್ನು ಹೇಳುತ್ತಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರದ ‘ಬಲ’ ಇದೆ.ಖರ್ಗೆ ಅವರ ಕಾರಣಕ್ಕಾಗಿ ದಲಿತ ಸಮುದಾಯ ಇಡಿಯಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಮುಸ್ಲಿಂ ಮತಗಳ ಜೊತೆಗೆ ಉಳಿದ ಜಾತಿಗಳ ಮತಗಳನ್ನು ಸೆಳೆದರೆ ಗೆಲ್ಲಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.ಈವರೆಗೆ ನಡೆದ 14 ಚುನಾವಣೆಗಳಲ್ಲಿ ಇಲ್ಲಿ 11 ಬಾರಿ ಕಾಂಗ್ರೆಸ್‌ ಗೆದ್ದಿದೆ. ಎರಡು ಬಾರಿ ಜನತಾ ಪರಿವಾರ ಹಾಗೂ ಒಮ್ಮೆ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. 2008ರಿಂದ ಇದು ಮೀಸಲು ಕ್ಷೇತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.