ADVERTISEMENT

ಬಿಜೆಪಿ–ಬಿಎಸ್‌ಪಿ ಮೈತ್ರಿ ತಪ್ಪಲ್ಲ: ಶಾಸಕ ಎನ್‌.ಮಹೇಶ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 12:26 IST
Last Updated 13 ನವೆಂಬರ್ 2018, 12:26 IST
   

ಮಂಡ್ಯ: ‘ದೇಶದಲ್ಲಿರುವ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಮಾನ, ಸನ್ಮಾನ ಹಾಗೂ ಸ್ವಾಭಿಮಾನ ಸಿಗಲು ಬಹುಜನರ ಪ್ರತಿನಿಧಿಯಾದ ಮಾಯಾವತಿ ಪ್ರಧಾನಮಂತ್ರಿಯಾಗಬೇಕು. ಅದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ತಪ್ಪಿಲ್ಲ’ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ನಗರದ ವಿಠಲ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಎಸ್‌ಪಿ ಮೈಸೂರು ವಿಭಾಗದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕೇವಲ ಮಾಟ, ಮಂತ್ರ ಮಾಡಿಸಿದರೆ, ಶಾಸ್ತ್ರ ಕೇಳಿದರೆ ಮಾಯಾವತಿ ಪ್ರಧಾನಿ ಆಗಲು ಸಾಧ್ಯವಿಲ್ಲ. ದೇಶದಲ್ಲಿ 274 ಸಂಸದರನ್ನು ಗೆಲ್ಲಿಸಬೇಕು. ಹೀಗಾಗಿ ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷ ಪ್ರಬಲವಾಗಬೇಕು. ಛತ್ತೀಸ್‌ಗಡದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಮಧುಕೋಡ ಬಿಜೆಪಿ ಜೊತೆ ಸಖ್ಯ ಬೆಳೆಸಿ ಮುಖ್ಯಮಂತ್ರಿಯಾದರು. ಅದೇ ರೀತಿ ಮಾಯಾವತಿ ಪ್ರಧಾನಮಂತ್ರಿ ಆಗುವ ಅವಕಾಶ ಬಂದರೆ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ತಪ್ಪೇನು’ ಎಂದು ಪ್ರಶ್ನಿಸಿದರು.

ADVERTISEMENT

‘ಬಹುಜನರ ವರ್ಗ ದೇಶದ ಅಧಿಕಾರ ಹಿಡಿಯಬೇಕು ಎಂಬುದು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕನಸಾಗಿತ್ತು. ಇಂದು ದೇಶದಾದ್ಯಂತ ಬಿಎಸ್‌ಪಿಗೆ ಅಪಾರ ಬೇಡಿಕೆ ಇದೆ. ಹಲವು ಪಕ್ಷಗಳ ಮುಖಂಡರು ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ನಮ್ಮ ರಾಜ್ಯವೂ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಡ, ಜಮ್ಮು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿವಿಧ ಪಕ್ಷಗಳ ಮುಖಂಡರು ಬಿಎಸ್‌ಪಿ ಸಖ್ಯ ಬಯಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.