ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಮೂವರು ಪ್ರಾಧ್ಯಾಪಕರ ನೇಮಕವನ್ನು ಇತ್ತೀಚೆಗೆ ರಾಜ್ಯ ಹೈಕೋರ್ಟ್ ರದ್ದು ಮಾಡಿದೆ. ಇದನ್ನು ನೋಡಿದರೆ ಇಲ್ಲಿಯೂ ಎಲ್ಲ ನೆಟ್ಟಗಿಲ್ಲ ಎನ್ನುವುದು ದಿಟವಾಗಿದೆ.
ಕೋರ್ಟ್ ಆದೇಶ ಬರುತ್ತಿದ್ದಂತೆಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಡೆದ ಹಲವಾರು ನೇಮಕಾತಿಗಳ ಬಗ್ಗೆ ತಕರಾರುಗಳು ಹೊರಬರುತ್ತಿವೆ. ಈ ಸಂಬಂಧದ ಮಾಹಿತಿಗಳು ದಾಖಲೆಗಳ ಸಹಿತ ರಾಜ್ಯಪಾಲರು, ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗುತ್ತಿವೆ.
‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1997–98 ಹಾಗೂ 2006–07ನೇ ಸಾಲಿನಲ್ಲಿ ನಡೆದ ನೇಮಕಾತಿಗಳು ಸರಿಯಾಗಿಲ್ಲ. ಅಕ್ರಮ ನಡೆದಿದೆ’ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ‘ಬಿ.ಕಾಂ ಮುಗಿಸಿ ನಂತರ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದವರಿಗೂ ನೇಮಕಾತಿ ನೀಡಲಾಗಿದೆ. 2006ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಸಾಕಷ್ಟು ಅರ್ಹರು ಇದ್ದರೂ ಅವರನ್ನು ಬಿಟ್ಟು ಅನರ್ಹರನ್ನು ನೇಮಿಸಿಕೊಳ್ಳಲಾಗಿದೆ’ ಎಂದು ಆರೋಪಿಸಲಾಗಿದೆ.
ಮೂವರ ನೇಮಕ ರದ್ದು |
---|
ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಖಾಲಿ ಇರುವ ಮೂರು ಉಪನ್ಯಾಸಕರ ಹುದ್ದೆ ಗಳ ಭರ್ತಿಗೆ 2006ರ ಅ.14ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಒಂದೊಂದು ಹುದ್ದೆ ಮೀಸಲಾಗಿದ್ದವು. ಸುದೇಷ್ಣಾ ಮುಖರ್ಜಿ, ಡಾ.ಸಿ.ಡಿ. ವೆಂಕಟೇಶ್, ಡಾ.ಎಂ. ಸಿದ್ದಪ್ಪ ನೇಮಕಗೊಂಡಿದ್ದರು. ಈ ಹುದ್ದೆಗಳಿಗೆ ಅಕ್ರಮವಾಗಿ ನೇಮಕಾತಿ ನಡೆದಿದೆ ಎಂದು ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಡಾ.ಪ್ರಕಾಶ ಭೀಮರಾಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಮೂವರ ನೇಮಕವನ್ನು ರದ್ದು ಮಾಡಿದೆ. |
‘ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದವರಿಗೂ ನೇಮಕಾತಿ ಸಿಕ್ಕಿದೆ. ಅಭ್ಯರ್ಥಿಯೊಬ್ಬರು ಶಾಲೆ ಮತ್ತು ಕಾಲೇಜಿನ ದಾಖಲೆಗಳ ಪ್ರಕಾರ ಹಿಂದುಳಿದ ಜಾತಿಗೆ ಸೇರಿದವರಾಗಿದ್ದರೂ ನೇಮಕಾತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ನೇಮಕಗೊಂಡಿದ್ದಾರೆ. ಈ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಲಾಗಿಲ್ಲ’ ಎಂದು ದೂರಲಾಗಿದೆ.
‘ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಉಪನ್ಯಾಸಕರನ್ನು ನೇಮಿಸಲಾಗಿದೆ. ಇಂತಹ ಪದ್ಧತಿ ಬಹಳ ಕಾಲದಿಂದ ಇದ್ದರೂ ಇಂಗ್ಲಿಷ್ ಉಪನ್ಯಾಸಕರನ್ನು ಇಂಗ್ಲಿಷ್ ಆಯ್ಕೆ ಸಮಿತಿಯೇ ಆರಿಸುತ್ತಿತ್ತು. ಆದರೆ ಈಗ ಇರುವ ಇಂಗ್ಲಿಷ್ ಉಪನ್ಯಾಸಕರನ್ನು ಕನ್ನಡ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಅವರಿಗೆ ಆಗ ಕನ್ನಡ ಉಪನ್ಯಾಸಕ ಎಂದೇ ನೇಮಕಾತಿ ಪತ್ರ ನೀಡಲಾಗಿತ್ತು. ಆದರೆ ಇದು ವಿವಾದಕ್ಕೆ ಕಾರಣವಾದ ನಂತರ ಮತ್ತೊಂದು ಆದೇಶ ಮಾಡಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಉಪನ್ಯಾಸಕ ಎಂದು ನೇಮಕಾತಿ ಆದೇಶ ನೀಡಲಾಗಿದೆ.
ಹೀಗೆ ನೇಮಕಗೊಂಡ ವ್ಯಕ್ತಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ವಿಷಯದಲ್ಲಿ ಉತ್ತೀರ್ಣರಾಗಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಯುಜಿಸಿ ಹಾಗೂ ವಿಶ್ವವಿದ್ಯಾಲಯಗಳ ನಿಯಮಗಳನ್ನು ಉಲ್ಲಂಘಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.
ಎಲ್ಲದಕ್ಕೂ ಪ್ರಶಾಸನ ಸಮಿತಿ ಅನುಮೋದನೆ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳಿಗೂ ಪ್ರಶಾಸನ ಸಮಿತಿ ಅನುಮೋದನೆ ನೀಡಿದೆ ಎಂದು ಪ್ರಭಾರ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ 10 ವರ್ಷದ ವಿನಾಯಿತಿ ಇರುವುದರಿಂದ ಪಿ.ಆರ್.ಪಾಗೋಜಿ ಅವರ ವಯೋಮಿತಿ ಸಡಿಲಿಸಿ ನೇಮಿಸಿಕೊಳ್ಳಲಾಗಿದೆ. ಇದೇ ರೀತಿ ಅವರ ವೇತನವನ್ನೂ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟಕ ಕಾಲೇಜುಗಳನ್ನು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಿ ಅಲ್ಲಿನ ಸಿಬ್ಬಂದಿ ಸೇವೆಯನ್ನು ವಿಲೀನಗೊಳಿಸದೇ ಇರುವುದರ ವಿರುದ್ಧ ಸಿಬ್ಬಂದಿ ಹೈಕೋರ್ಟ್‌ಗೆ ಹೋಗಿದ್ದರು. ಅವರ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಘಟಕ ಕಾಲೇಜಿನಲ್ಲಿ ಇರುವ ಸಿಬ್ಬಂದಿಗಳಿಗೆ ಪ್ರಾಧ್ಯಾಪಕ ಹುದ್ದೆಗೆ ನೇಮಕವಾಗುವ ಅರ್ಹತೆ ಇಲ್ಲದೇ ಇರುವುದರಿಂದ ಅವರನ್ನು ನೇಮಿಸಿಲ್ಲ ಎಂದು ಅವರು ಹೇಳಿದ್ದಾರೆ.
ಡಾ.ವಿ.ಗಿರೀಶ್‌ಚಂದ್ರ ಅವರು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಕಾಂ ಪದವಿಯ ಜೊತೆಗೆ ಸಂಸ್ಕೃತ ಸಾಹಿತ್ಯ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
(ಮುಂದುವರಿಯುವುದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.